ADVERTISEMENT

ಸಂಗತ | ಸಾಮಾಜಿಕ ಮಾಧ್ಯಮ: ಕಾರ್ಪೊರೇಟ್ ಗಾಳ

ಕೊಂಚ ಎಚ್ಚರ ತಪ್ಪಿದರೆ ಬಳಕೆದಾರರನ್ನು ಅಪಾಯಕ್ಕೆ ಸಿಲುಕಿಸುವ ಸಾಮಾಜಿಕ ಮಾಧ್ಯಮ, ಕಾರ್ಪೊರೇಟ್‌ ಕಂಪನಿಗಳ ಪಾಲಿಗೆ ಲಾಭದಾಯಕ ಉದ್ಯಮ.

ವಸಂತ ನಡಹಳ್ಳಿ
Published 21 ಡಿಸೆಂಬರ್ 2025, 23:30 IST
Last Updated 21 ಡಿಸೆಂಬರ್ 2025, 23:30 IST
   

ದೇಶದ ಅತ್ಯುನ್ನತ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿದ್ದ ಇಪ್ಪತ್ತೈದರ ಯುವತಿ ಸಹಾಯ ಕೇಳಲು ಬಂದಾಗ ಮಾನಸಿಕವಾಗಿ ಕುಸಿದುಹೋಗಿದ್ದಳು. ಸಾಮಾಜಿಕ ಮಾಧ್ಯಮಗಳಲ್ಲಿ ಅವಳೇ ಹಾಕಿದ್ದ ಹಲವಾರು ಫೋಟೊ, ವಿಡಿಯೊಗಳನ್ನು ಬಳಸಿಕೊಂಡು ಸಹಪಾಠಿಯೊಬ್ಬ ಅಶ್ಲೀಲ ವಿಡಿಯೊಗಳನ್ನು ಮಾಡಿ, ಹಂಚಿಕೊಂಡಿದ್ದ. ಸುಮಾರು ಇಪ್ಪತ್ತು ಸೆಷನ್‌ಗಳಲ್ಲಿ ಇಡೀ ಕುಟುಂಬದ ಜೊತೆ ಮಾತನಾಡಿದ ನಂತರ, ಆಕೆ ಮತ್ತೆ ಪರೀಕ್ಷೆ ಬರೆಯಲು ಸಿದ್ಧಳಾಗಿದ್ದಳು. ನನ್ನ ಸಹಾಯದ ಜೊತೆಗೆ ಅವಳಿಗಿದ್ದ ಬಲವಾದ ರಕ್ಷಾಕವಚವೆಂದರೆ, ಪೋಷಕರು ಅವಳ ಮೇಲೆ ಇಟ್ಟಿದ ನಂಬಿಕೆ. ಪೋಷಕರೂ ಆಕೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದರೆ ಏನಾಗಬಹುದಿತ್ತು ಎನ್ನುವುದನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ.

ಸಾಮಾಜಿಕ ಮಾಧ್ಯಮಗಳಿಂದ ಅಪಾಯಗಳಿಗೆ ಸಿಲುಕಿಕೊಂಡು ಹಿಂಸೆ ಅನುಭವಿಸಿದವರು ಸಹಾಯ ಕೇಳಿ ಬಂದಿದ್ದಾರೆ. ಅವರಲ್ಲಿ ಮಹಿಳೆಯರೇ ಹೆಚ್ಚು.

ಇದೇಕೆ ಹೀಗೆ ವಿವೇಚನಾರಹಿತವಾಗಿ ನಮ್ಮ ಯುವ ಜನತೆ ಮೊಬೈಲ್‌ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಭ್ರಮಾಧೀನರಾಗಿದ್ದಾರೆ? ಮಕ್ಕಳು, ಯುವಕರ ಮಾತು ಹಾಗಿರಲಿ, ಹಿರಿಯ ನಾಗರಿಕರು ದಿನಕ್ಕೆ ಎಷ್ಟು ಸಮಯ ಮೊಬೈಲ್‌, ರೀಲ್ಸ್‌, ಸಾಮಾಜಿಕ ಮಾಧ್ಯಮಗಳಲ್ಲಿ ಕಳೆದುಹೋಗಿರುತ್ತಾರೆ ಎನ್ನುವುದನ್ನು ಗಮನಿಸಿದರೆ,ಅವುಗಳ ಆಕರ್ಷಣೆ ಎಂತಹುದುಎನ್ನುವುದರ ಪರಿಚಯ ಆಗಬಹುದು.

ADVERTISEMENT

ಡೊಪೊಮೈನ್‌ ಎನ್ನುವ ನರರಾಸಾಯನಿಕ ನಮ್ಮ ಸಂತೋಷ, ತೃಪ್ತಿಗೆ ಅಗತ್ಯವಾದದ್ದು. ಉತ್ತಮ ಕೌಟುಂಬಿಕ, ಸ್ನೇಹ ಹಾಗೂ ಸಾಮಾಜಿಕ ಸಂಬಂಧಗಳು, ಕಲೆ,ಸಾಹಿತ್ಯ, ಕ್ರೀಡೆ ಮುಂತಾದವು
ಗಳು ಮಾನವ ತನ್ನ ವಿಕಾಸದ ದಾರಿಯಲ್ಲಿ ಕಂಡುಕೊಂಡಿರುವ ಡೊಪೊಮೈನ್‌ ಸೃಜನೆಯ ಮಾರ್ಗಗಳು. ಆದರೆ, ನಗರಕೇಂದ್ರಿತ ಬದುಕಿನತ್ತ ಹೊರಳಿಕೊಂಡ ಮನುಷ್ಯ ಏಕಾಂಗಿತನದ ಅನಿವಾರ್ಯತೆಯನ್ನು ಎದುರಿಸಬೇಕಾಯಿತು. ಇಂತಹಏಕಾಂಗಿತನವನ್ನು ನೀಗಿಕೊಂಡು ಡೊಪೊಮೈನ್‌ ಉತ್ಪಾದಿಸಲು ಮೊದಲ ಹಂತದಲ್ಲಿ ಹಣ ಮತ್ತು ಅದರಿಂದ ಕೊಳ್ಳಬಹುದಾದ ವಸ್ತುಗಳು ಮತ್ತು ಸೇವೆಗಳು ಸಹಾಯ ಮಾಡಿದವು. ಸಂಪರ್ಕ ಕ್ರಾಂತಿಯ ನಂತರ ಡಿಜಿಟಲ್‌ ಜಗತ್ತುನಮ್ಮ ಕೈಬೆರಳಿನ ತುದಿಯಲ್ಲಿ ಕುಣಿಯತೊಡಗಿತು; ಕಾರ್ಪೊರೇಟ್‌ಗಳಿಗೆ ಇದರ ನಶೆಯತ್ತ ಜನರನ್ನು ಸೆಳೆದು ಖಜಾನೆ ತುಂಬಿಕೊಳ್ಳುವ ದಾರಿಗಳು ಕಂಡವು.

ಒಂದು ಮೊಬೈಲ್‌ ಫೋನ್‌, ಗೇಮಿಂಗ್‌ ಆ್ಯಪ್‌ಗಳು, ಸಾಮಾಜಿಕ ಮಾಧ್ಯಮ, ಮುಂತಾದವುಗಳ ವಿನ್ಯಾಸವನ್ನು ಎಂಜಿನಿಯರಿಂಗ್‌ ತಜ್ಞರಷ್ಟೇ ಮಾಡುವುದಿಲ್ಲ. ಅವರಿಗೆ ಸಹಾಯ ಮಾಡಲು ನರವಿಜ್ಞಾನಿಗಳು, ಮನಃಶಾಸ್ತ್ರಜ್ಞರು ಮುಂತಾದ ವಿಜ್ಞಾನದ ವಿವಿಧ ಶಾಖೆಗಳ ತಜ್ಞರು ಇರುತ್ತಾರೆ. ಇವರೆಲ್ಲ ಸೇರಿ ತಮ್ಮ ವಸ್ತು ಅಥವಾ ಸೇವೆಯನ್ನು ಆಕರ್ಷಕಆಗಿ ರೂಪಿಸಿ, ಮಿದುಳಿನಲ್ಲಿ ಡೊಪೊ ಮೈನ್‌ ಮಟ್ಟವನ್ನು ಹೆಚ್ಚಿಸುವುದು ಹೇಗೆ ಎಂದು ನಿರ್ಧರಿಸುತ್ತಾರೆ. ಮನುಷ್ಯನ ಮನೋದೈಹಿಕ ಆರೋಗ್ಯ ವೃದ್ಧಿಸಲು ಆಗುವ ನರವಿಜ್ಞಾನ, ಜೀವವಿಜ್ಞಾನ, ಮನಃಶಾಸ್ತ್ರದ ಸಂಶೋಧನೆಗಳೆಲ್ಲ ಕಾರ್ಪೊರೇಟ್‌ ಧನದಾಹಕ್ಕೆ ಬಳಕೆಯಾಗುತ್ತಿವೆ ಎನ್ನುವುದನ್ನು ಗಮನಿಸಬೇಕು.

ತಮ್ಮ ಉತ್ಪನ್ನಗಳು ಜನಸಮುದಾಯದ ಆರೋಗ್ಯಕ್ಕೆ ಅಪಾಯಕಾರಿ ಆಗಬಲ್ಲವು ಎನ್ನುವುದು ಕಂಪನಿಗಳಿಗೆ ಗೊತ್ತಿಲ್ಲದಿರುವುದೇನಲ್ಲ. ಇನ್‌ಸ್ಟಾಗ್ರಾಮ್‌ ಬಳಕೆ ಹದಿವಯಸ್ಸಿನ ಹೆಣ್ಣುಮಕ್ಕಳನ್ನು ಆತ್ಮಹತ್ಯೆಗೆ ಪ್ರಚೋದಿಸುತ್ತಿದೆ ಎಂದು ಫೇಸ್‌ಬುಕ್‌ ಕಂಪನಿಯ (ಇನ್‌ಸ್ಟಾಗ್ರಾಮ್‌ ಈಗ ಫೇಸ್‌ಬುಕ್‌ ಒಡೆತನ
ದಲ್ಲಿದೆ) ಆಂತರಿಕ ಸಮೀಕ್ಷೆ, ಸಂಶೋಧನೆಗಳೇ ತಿಳಿಸಿವೆ. ಅದನ್ನೆಲ್ಲ ಮರೆಮಾಚಿದ ಫೇಸ್‌ಬುಕ್‌, ಅಮೆರಿಕದ ಸೆನೆಟರ್‌ ಗಳಿಗೆ ತಪ್ಪುಮಾಹಿತಿ ನೀಡಿತ್ತು ಎಂದು ವಾಲ್‌ಸ್ಟ್ರೀಟ್‌ ಜರ್ನಲ್‌ 2021ರ ಸೆಪ್ಟೆಂಬರ್‌ 14ರಂದು ವರದಿ ಪ್ರಕಟಿಸಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊಗಳನ್ನು ಹಂಚಿಕೊಂಡು ಮೆಚ್ಚುಗೆ ಗಿಟ್ಟಿಸುವ ಪ್ರಯತ್ನದಲ್ಲಿ ಯುವತಿಯರು ಅನಗತ್ಯ ಆಗಿ ತಮ್ಮ ದೇಹದ ಬಗೆಗೆ ಕೀಳರಿಮೆ ಮೂಡಿಸಿಕೊಂಡು ಖಿನ್ನತೆಯಿಂದ ನರಳುತ್ತಾರೆ ಎನ್ನುವುದಕ್ಕೆ ಪುರಾವೆಗಳು ಇದ್ದರೂ, ಇಂದಿಗೂ ಅದೇ ವ್ಯಸನವನ್ನು ಅಂಟಿಸುವುದು ಮುಂದುವರಿದಿದೆ.

ದೊಡ್ಡ ದೊಡ್ಡ ಕಾರ್ಪೊರೇಟ್‌ ಮುಖ್ಯಸ್ಥರು ತಮ್ಮಮಕ್ಕಳನ್ನು ‘ಪರದೆ ಸಮಯ’ದಿಂದ ಹೇಗೆ ಸುರಕ್ಷಿತವಾಗಿ
ಇಡುತ್ತಾರೆ ಗೊತ್ತೇ? ಆ‍್ಯಪಲ್‌ನ ಮಾಜಿ ಸಿಇಒ ಸ್ಟೀವ್‌ ಜಾಬ್ಸ್‌ ತಮ್ಮದೇ ಉತ್ಪನ್ನವಾದ ಐಪಾಡ್‌ ಅನ್ನು ತಮ್ಮ ಮಕ್ಕಳಿಗೆ ಬಳಸಲು ಅವಕಾಶ ಕೊಟ್ಟಿಲ್ಲವೆಂದು ಹೇಳಿದ್ದರು. ಮೈಕ್ರೊ ಸಾಫ್ಟ್‌ನ ಮುಖ್ಯಸ್ಥ ಬಿಲ್‌ ಗೇಟ್ಸ್‌ ಅವರ ಮಕ್ಕಳಿಗೆ 14 ವರ್ಷಗಳಾಗುವವರೆಗೆ ಮೊಬೈಲ್‌ ಬಳಸಲು ಅವಕಾಶ ಕೊಟ್ಟಿರಲಿಲ್ಲ. ಸ್ನಾಪ್‌ಚಾಟ್‌ನ ಸ್ಥಾಪಕ ಇವಾನ್‌ ಸ್ಪೀಗಲ್‌ ತನ್ನ ಮಕ್ಕಳಿಗೆ ವಾರಕ್ಕೆ ಒಂದೂವರೆ ಗಂಟೆ ಪರದೆ ಸಮಯಕ್ಕೆ ಅವಕಾಶ ನೀಡುತ್ತಿದ್ದ. ಗೂಗಲ್‌ನ ಸುಂದರ್‌ ಪಿಚ್ಚೈ ತಮ್ಮ ಮಕ್ಕಳನ್ನು ಟಿ.ವಿ.ಯಿಂದ ದೂರವಿರಿಸಿದ್ದರು.

ಇವತ್ತು ರಸ್ತೆಯಲ್ಲಿ, ಹೋಟೆಲ್‌ಗಳಲ್ಲಿ, ಬಸ್‌, ರೈಲು, ವಿಮಾನಗಳಲ್ಲಿ ಎಲ್ಲರೂ ಮೊಬೈಲ್‌ನ್ನು ಸ್ಕ್ರೋಲ್‌ ಮಾಡುತ್ತಲೇ ಇರುತ್ತಾರೆ. ತಮ್ಮ ಸಂಗಾತಿ ಲೈಂಗಿಕ ಕ್ರಿಯೆನಡೆಸುವಾಗ ಅಥವಾ ಅದು ಮುಗಿದ ಮರುಕ್ಷಣ ಮೊಬೈಲ್‌ ನತ್ತ ಕೈಚಾಚುತ್ತಾರೆ ಎಂದು ಸಹಾಯ ಕೇಳಲು ಬಂದ ಕೆಲವರು ಹೇಳಿದ್ದಾರೆ! ಮಾನವೀಯ ಸಂಬಂಧದ ರುಚಿ ಕಳೆದುಕೊಂಡಿರುವ ಮನುಷ್ಯ ಯಂತ್ರಗಳೊಂದಿಗೆ ವ್ಯವಹರಿಸುತ್ತ, ಏಕಾಂಗಿತನದ ಅಪಾಯ ಆಹ್ವಾನಿಸಿಕೊಳ್ಳುತ್ತಿದ್ದಾನೆ.

ದುರದೃಷ್ಟದ ಸಂಗತಿಯೆಂದರೆ, ಡಿಜಿಟಲ್ ವ್ಯಸನ ನಿಯಂತ್ರಣಕ್ಕೆ ಸ್ಪಷ್ಟವಾದ ಕಾನೂನು ಅಥವಾ ಮಾರ್ಗಸೂಚಿ ರೂಪಿಸುವುದರ ಕುರಿತು ಸರ್ಕಾರಗಳು ಯೋಚಿಸುತ್ತಿಲ್ಲ. ಹಾಗಾಗಿ, ಸಾಮಾಜಿಕ ಕಾಳಜಿಯುಳ್ಳವರೆಲ್ಲರೂ ಇದರ ಕುರಿತು ಜನಸಾಮಾನ್ಯರಲ್ಲಿ ಹೆಚ್ಚು ಅರಿವು ಮೂಡಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.