ADVERTISEMENT

ಸಂಗತ | ದ್ವೇಷ ಬಿತ್ತುತ್ತ ಹಾಗೂ ಹಿಂಸೆ ಹಂಚುತ್ತ...

ರಾಜಕುಮಾರ ಕುಲಕರ್ಣಿ
Published 22 ಸೆಪ್ಟೆಂಬರ್ 2025, 0:30 IST
Last Updated 22 ಸೆಪ್ಟೆಂಬರ್ 2025, 0:30 IST
   
ಸಾಮಾಜಿಕ ಮಾಧ್ಯಮ ನಮ್ಮ ಕಾಲದ ಬಹು ದೊಡ್ಡ ಶಕ್ತಿ. ದುರದೃಷ್ಟವಶಾತ್‌, ಈ ಮಾಧ್ಯಮ ದ್ವೇಷಸಾಧನೆಗೆ, ನಕಾರಾತ್ಮಕ ಚಿಂತನೆಗಳ ಪ್ರಸಾರಕ್ಕೆ ಬಳಕೆ ಆಗುತ್ತಿದೆ.

ಹಾಸನದಲ್ಲಿ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿ ಸಾಮಾಜಿಕ ಮಾಧ್ಯಮದ ಕ್ರೌರ್ಯಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿ ಕೆಡುಕೆನಿಸಿತು. ಉದ್ಯಾನದಲ್ಲಿ ಆ ಯುವಕ ತನ್ನ ಗೆಳತಿಯೊಂದಿಗೆ ಕುಳಿತಿದ್ದ ವಿಡಿಯೊವನ್ನು ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ದುರ್ಘಟನೆಗೆ ಕಾರಣವಾಯಿತು.

ಸಾಮಾಜಿಕ ಮಾಧ್ಯಮದ ಮೂಲಕ ಸಂದೇಶಗಳನ್ನು ಹಂಚಿಕೊಳ್ಳುವ ಖಯಾಲಿ ಸಾಂಕ್ರಾಮಿಕ ಕಾಯಿಲೆಯಂತಾಗಿದೆ. ಸಂದೇಶಗಳು ಮನಸ್ಸಿಗೆ ಉಲ್ಲಾಸ–ಉತ್ಸಾಹ ನೀಡುವಂತಿದ್ದರೆ ಈ ಬೆಳವಣಿಗೆಯನ್ನು ಸ್ವಾಗತಿಸಬಹುದೇನೋ. ಆದರೆ, ಧರ್ಮ ಮತ್ತು ಸಮುದಾಯಗಳ ಕುರಿತು ಅವಹೇಳನದ ಮಾತುಗಳು, ಅಸಂಬದ್ಧವಾದ ಧಾರ್ಮಿಕ ವಿಚಾರಗಳು ಹಾಗೂ ವ್ಯಕ್ತಿತ್ವದ ತೇಜೋವಧೆ ಸಂದೇಶಗಳಲ್ಲಿ ಢಾಳಾಗಿ ಗೋಚರಿಸುತ್ತಿವೆ. ಕಾರು, ಸೈಟು, ಆಭರಣಗಳು, ಸನ್ಮಾನದ ಭಾವಚಿತ್ರಗಳ ಭೌತಿಕ ಸಂಗತಿಗಳು ಕೂಡ ಪ್ರದರ್ಶನದ ಮುನ್ನೆಲೆಗೆ ಬಂದಿವೆ. ಕುಟುಂಬದಲ್ಲಿ ಅಥವಾ ಬಂಧು ವರ್ಗದಲ್ಲಿ ಸಾವಾದರೆ ತಕ್ಷಣವೇ ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಲ್ಲಿ ಮೃತರ ಭಾವಚಿತ್ರ ರಾರಾಜಿಸುತ್ತದೆ.

ಕೆಲವರು ತಮ್ಮ ನೋವಿಗೆ ಉಪಶಮನ ಕಂಡುಕೊಳ್ಳಲು ಸಾಮಾಜಿಕ ಮಾಧ್ಯಮದ ಮೊರೆ ಹೋಗುವರು. ತಮ್ಮ ತೊಂದರೆ ಮತ್ತು ಕಷ್ಟಗಳ ಬಗ್ಗೆ ಮನ ಮಿಡಿಯುವ ನೋವಿನ ಮಾತುಗಳನ್ನು ದಿನನಿತ್ಯ ತಮ್ಮ ಸಂಪರ್ಕದಲ್ಲಿ ರುವವರ ಗಮನಕ್ಕೆ ತರುವ ಕೆಲಸವನ್ನು ಚಾಚೂತಪ್ಪದೆ ಪಾಲಿಸುತ್ತಾರೆ. ನೋವಿನ ಮಾತುಗಳ ಮೂಲಕ ಬಂಧುಗಳ ಮತ್ತು ದಾಯಾದಿಗಳ ವ್ಯಕ್ತಿತ್ವದ ತೇಜೋವಧೆಗಿಳಿಯುತ್ತಾರೆ. ಅವರ ಕಷ್ಟ ಮತ್ತು ನೋವಿಗೆ ಕಾರಣವೇ ಇಲ್ಲದ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಮಾನಸಿಕ ಹಲ್ಲೆ ಮಾಡುತ್ತಾರೆ. ಬದುಕಿನಲ್ಲಿ ನೋವು, ನಲಿವು, ಕಷ್ಟ, ಸುಖ, ಇವೆಲ್ಲ ಸಹಜ. ಗೆಲುವನ್ನು ಆಸ್ವಾದಿಸುವಂತೆ ಮನುಷ್ಯ ಸೋಲನ್ನೂ ಸಹಜವಾಗಿಯೇ ಸ್ವೀಕರಿಸಬೇಕು. ಆದರೆ, ಸ್ಥಿತಪ್ರಜ್ಞೆಯ ಕೊರತೆಯಿಂದ ಇವರು ತಮಗಾದ ತೊಂದರೆಗಳಿಗೆ ಬೇರೆಯವರನ್ನು ಹೊಣೆಯಾಗಿಸುವ ಮಾನಸಿಕ ದೌರ್ಬಲ್ಯ ಪ್ರದರ್ಶಿಸುತ್ತಾರೆ.

ADVERTISEMENT

ಸಾಮಾಜಿಕ ಮಾಧ್ಯಮವನ್ನು ದ್ವೇಷ, ಪ್ರತೀಕಾರದ ಸಾಧನೆಗೆ ಗುರಾಣಿಯಾಗಿಸಿಕೊಳ್ಳುವವರ ಸಂಖ್ಯೆಯೇ ಹೆಚ್ಚಾಗಿದೆ. ಧರ್ಮ ಮತ್ತು ಸಮುದಾಯಗಳ ಬಗ್ಗೆ ಅವಹೇಳನಕಾರಿಯಾದ ಸಂದೇಶಗಳನ್ನು ಹರಡುವುದರ ಮೂಲಕ ಸಮಾಜದಲ್ಲಿನ ಸೌಹಾರ್ದ ವಾತಾವರಣವನ್ನು ಕದಡಲಾಗುತ್ತಿದೆ. ಚುನಾವಣೆ ಸಂದರ್ಭ ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ ಅನ್ನು ಎದುರಾಳಿಗಳ ತೇಜೋವಧೆಗಾಗಿ ರಾಜಕಾರಣಿಗಳು ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಸೃಜನಶೀಲ ಕ್ಷೇತ್ರವೆಂದೇ ಪರಿಗಣಿತವಾದ ಸಾಹಿತ್ಯದಲ್ಲೂ ಬರಹಗಾರರು ನಿಂದನೆಗೆ ಸಾಮಾಜಿಕ ಮಾಧ್ಯಮವನ್ನು ಉಪಯೋಗಿ ಸುತ್ತಿರುವುದು ಆತಂಕದ ಸಂಗತಿ.

ಪ್ರಖ್ಯಾತ ಮನೋವಿಶ್ಲೇಷಣಾ ತಜ್ಞ ಎರಿಕ್ ಫ್ರಾಮ್ ಪ್ರಕಾರ, ಆಧುನಿಕ ಮನುಷ್ಯರಲ್ಲಿ ಇತರರನ್ನು ಹಂಗಿಸುವ, ಅವಮಾನಿಸುವ, ಬೇರೆಯವರ ಭಾವನೆಗಳ ಮೇಲೆ ಹಲ್ಲೆ ಮಾಡುವ, ಆ ಮೂಲಕ ಸಂತೋಷಪಡುವ ಪ್ರವೃತ್ತಿ ಹೆಚ್ಚುತ್ತಿದೆ. ಇಲ್ಲಿ ಅವಮಾನಿಸುವವನು ಶಬ್ದಗಳ ಮೂಲಕವೇ ಬೇರೆಯವರ ಮೇಲೆ ಹಲ್ಲೆ ನಡೆಸುತ್ತಾನೆ. ಅವಮಾನಿತನದು ಅಖಾಡದಲ್ಲಿ ಎದುರಾಳಿಯೇ ಗೋಚರಿಸದ, ದೇಹದ ಮೇಲೆ ಹಲ್ಲೆಯ ಯಾವ ಗುರುತುಗಳಿಲ್ಲದ ನೋವಿನ ಸ್ಥಿತಿ. ಇಂತಹದ್ದೊಂದು ಅಸಹನೀಯ ಸ್ಥಿತಿಯಿಂದ ಹೊರಬರಲು ಎರಿಕ್ ಬರ್ನ್ ಪರಿಚಯಿಸಿದ ‘ಟ್ರಾನ್ಸಾಕ್ಷನಲ್ ಅನಾಲಿಸಿಸ್’ ಪರಿಕಲ್ಪನೆ ನೆರವಾಗುತ್ತದೆ. ಈ ಪರಿಕಲ್ಪನೆ ಮನುಷ್ಯನ ಮಾತು ಮತ್ತು ವರ್ತನೆ ಬೇರೆಯವರಿಗೆ ನೋವಾಗದಂತೆ ಹೇಗಿರಬೇಕು ಎಂದು ಹೇಳುತ್ತದೆ. ಸಾಮಾಜಿಕ ಮಾಧ್ಯಮದ ಉಪಯೋಗ ಹೆಚ್ಚುತ್ತಿರುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಎರಿಕ್ ಬರ್ನ್ ಪರಿಕಲ್ಪನೆಯನ್ನು ಬೋಧಿಸುವ ಅಗತ್ಯವಿದೆ.

ಹೇಳಿಕೆಗಳು ಬರೀ ಹೇಳಿಕೆಗಳಾಗಿ ಉಳಿಯದೆ ಅವುಗಳು ಕ್ರಿಯೆಯಾಗಿ ಬದಲಾಗಬೇಕು. ಸಂದೇಶಗಳನ್ನು ‘ರವಾನಿಸುವ’ ಭರಾಟೆಯಲ್ಲಿ ಸಕ್ರಿಯನಾಗಿರುವ ಮನುಷ್ಯ, ಉತ್ತಮ ಗುಣಗಳನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಳ್ಳುವುದನ್ನು ಮರೆಯುತ್ತಿದ್ದಾನೆ.

‘ಹಚ್ಚುವುದಾದರೆ ದೀಪ ಹಚ್ಚು, ಬೆಂಕಿ ಹಚ್ಚಬೇಡ; ಆರಿಸುವುದಾದರೆ ಬೆಂಕಿ ಆರಿಸು, ದೀಪ ಆರಿಸಬೇಡ’ ಎನ್ನುವುದು ದಿನಕರ ದೇಸಾಯಿ ಅವರ ನುಡಿಮುತ್ತು. ಒಟ್ಟಾರೆ, ಒಂದು ಚೆಂದದ ಮತ್ತು ಸುಂದರವಾದ
ಬಾಳ್ವೆ ಮನುಷ್ಯನದಾಗಬೇಕು. ಕಷ್ಟ, ನೋವು ಮತ್ತು ದುಃಖ, ಬದುಕಿನ ಸಹಜ ಸಂಗತಿಗಳು ಎಂದು
ಸ್ವೀಕರಿಸಿದಾಗಲೇ ಮನುಷ್ಯ ಮಾನಸಿಕವಾಗಿ ಬಲಗೊಳ್ಳಲು ಸಾಧ್ಯ. ತನ್ನ ಕಷ್ಟಗಳಿಗೆ ಬೇರೆಯವರನ್ನು ದೂರುವ, ವ್ಯಕ್ತಿತ್ವದ ತೇಜೋವಧೆ ಮಾಡುವ, ಇತರರನ್ನು ಹಿಂಸಿಸಿ ಸಂತೋಷಪಡುವ ಪ್ರವೃತ್ತಿಗಳು ಮನುಷ್ಯನ ಮಾನಸಿಕ ದೌರ್ಬಲ್ಯದ ಸಂಕೇತಗಳಾಗಿವೆ.

ಸಾಮಾಜಿಕ ಮಾಧ್ಯಮದಲ್ಲಿ ಭಾಷೆಯ ದುರ್ಬಳಕೆ ಆಗುತ್ತಿದೆ. ಸಂದೇಶಗಳನ್ನು ರವಾನಿಸುವ ಧಾವಂತದಲ್ಲಿ ಭಾಷೆಯನ್ನು ಅಶ್ಲೀಲ ಮತ್ತು ಬೈಗುಳ ಆಗಿಸಲಾಗುತ್ತಿದೆ. ಭಾಷೆಯನ್ನು ಪ್ರೀತಿಯಾಗಿಸಬೇಕಾದ ಮನುಷ್ಯನೇ ಅದನ್ನು ಬೈಗುಳ ಆಗಿಸುತ್ತಿದ್ದಾನೆ ಎನ್ನುತ್ತಾರೆ ಭಾಷಾ ವಿಜ್ಞಾನಿಗಳು.

‘ನಾವು ಎಷ್ಟೇ ಸಮರ್ಥಿಸಿಕೊಂಡರೂ ನಮ್ಮ ಬೈಗುಳ–ದ್ವೇಷಕ್ಕೆ ಪಾತ್ರವಾದ ವ್ಯಕ್ತಿಯಾಗಲಿ, ವಸ್ತುವಾಗಲಿ ಜಗತ್ತಿನಲ್ಲಿ ಇಲ್ಲ. ದ್ವೇಷಕ್ಕೆ ಅಧಿಕಾರಿ ಇದ್ದಾನೆ; ವಸ್ತು ಇಲ್ಲ. ಇಲ್ಲಿ ಎಲ್ಲವೂ ನಮ್ಮ ಪ್ರೀತಿಗೆ ಯೋಗ್ಯವಾದದ್ದೇ, ಪ್ರೀತಿಸುವ ತಾಕತ್ತು ನಮಗೆ ಇದ್ದಲ್ಲಿ’ ಎಂದು ಯಶವಂತ ಚಿತ್ತಾಲರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಹೆಚ್ಚುತ್ತಿರುವ ಕ್ರೌರ್ಯದ ಉಪಶಮನಕ್ಕೆ ಪ್ರೀತಿಯೊಂದೇ ಮುಲಾಮು ಎನ್ನುವುದನ್ನು ಯುವಪೀಳಿಗೆಗೆ ಅರ್ಥಮಾಡಿಸುವುದು ಸದ್ಯದ ತುರ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.