
ಮಣ್ಣಿನ ಬಗ್ಗೆ ಅರಿವಿನ ಕೊರತೆ ತೀವ್ರವಾಗುತ್ತಿರುವ ಸಂದರ್ಭದಲ್ಲಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಮಣ್ಣಿನ ಪ್ರದರ್ಶನಾಲಯ’ಗಳು ಆರಂಭಗೊಳ್ಳಬೇಕಿದೆ.
‘ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಮಣ್ಣಿನ ಮ್ಯೂಸಿಯಂ ಇರಬೇಕು. ಅದು ರೈತರಿಗೆ, ಯುವಜನರಿಗೆ, ವಿದ್ಯಾರ್ಥಿಗಳಿಗೆ ಗ್ರಾಮದ ಸುತ್ತಲಿನ ಮಣ್ಣಿನ ಬಗ್ಗೆ ಅರಿವು ಮೂಡಿಸುವ ತಾಣವಾಗಬೇಕು...’
ಸದಾ ಮಣ್ಣನ್ನೇ ಧ್ಯಾನಿಸುತ್ತ ದೇಶದ ಉದ್ದಗಲಕ್ಕೂ ಓಡಾಡುತ್ತಿದ್ದ, ಮಣ್ಣಿನ ಫಲವತ್ತತೆ, ಸಂರಕ್ಷಣೆಯ ಸರಳ ಸೂತ್ರಗಳನ್ನು ಹೇಳುತ್ತಾ ಸುತ್ತಮುತ್ತಲಿನವರಲ್ಲಿ ಅರಿವು ಮೂಡಿಸುವ ಮಣ್ಣಿನ ರಾಯಭಾರಿಯಂತಿದ್ದ, ಗೆಳೆಯರ ನಡುವೆ ‘ಸಾಯಿಲ್ ವಾಸು’ ಎಂದು ಹೆಸರಾಗಿದ್ದ ಪಿ. ಶ್ರೀನಿವಾಸ ಅವರು, ಮಣ್ಣಿಗೆ ಹೊರಡುವ ಕೊನೆ ಗಳಿಗೆಯವರೆಗೂ (ಸೆ. 13) ಕಂಡಿದ್ದ ಕನಸಿದು.
ವಾಸು ಅವರಿಗೆ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ‘ಮಣ್ಣಿನ ಮ್ಯೂಸಿಯಂ’ ತೆರೆಯಬೇಕೆಂಬ ಕನಸಿತ್ತು. ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನ ನಡೆಸಿದ್ದರು. ಅನುಭವಿ ರೈತರು, ಮಣ್ಣು ವಿಜ್ಞಾನಿಗಳು, ತಜ್ಞರು, ಮಣ್ಣಿನ ಬಗ್ಗೆ ಕೆಲಸ ಮಾಡುವ ಸಂಸ್ಥೆಗಳು ಹಾಗೂ ಇಲಾಖೆಗಳನ್ನು ಸಂಪರ್ಕಿಸಿ, ಸಂದರ್ಶಿಸಿ ಮಾಹಿತಿ ಸಂಗ್ರಹಿಸಿದ್ದರು. ದೇಶ ವಿದೇಶಗಳಲ್ಲಿರುವ ಮಣ್ಣಿನ ಪ್ರದರ್ಶನಾಲಯಗಳ ಅಧ್ಯಯನ ಮಾಡಿದ್ದರು.
‘ನೆದರ್ಲೆಂಡ್‌ನಲ್ಲಿ ಇರುವಂತಹದ್ದೇ ಮಣ್ಣು ಮ್ಯೂಸಿಯಂ ಕೇರಳದ ತಿರುವನಂತಪುರದಲ್ಲಿದೆ. ನಾವೆಲ್ಲ ಅಲ್ಲಿಗೆ ಹೋಗಿ ನೋಡಿ ಬರೋಣ’ ಎಂದು ಹೇಳುತ್ತಿದ್ದರು. ಮಣ್ಣಿನ ಮ್ಯೂಸಿಯಂ ಹೇಗಿರಬೇಕೆಂದು ನೀಲನಕ್ಷೆ ಮಾಡಿಕೊಂಡಿದ್ದರು.
ಮಣ್ಣು ಹೇಗೆ ಸೃಷ್ಟಿಯಾಗುತ್ತದೆ ಎನ್ನುವುದನ್ನು ತಿಳಿಸುವ, ಮಣ್ಣಿನ ಪದರಗಳ ವಿವರಗಳನ್ನು ನೀಡುವ, ಪ್ರತಿಯೊಂದು ಬಗೆಯ ಮಣ್ಣಿನ ಮಹತ್ವ–ಪ್ರಯೋಜನಗಳ ಕುರಿತು ಮಾಹಿತಿ ನೀಡುವ ಭಿತ್ತಿಪತ್ರಗಳು ಮ್ಯೂಸಿಯಂನಲ್ಲಿರಬೇಕು. ಮಣ್ಣನ್ನು ಆಶ್ರಯಿಸಿ ಸಮುದಾಯಕ್ಕೆ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುವ, ಬರಿಗಣ್ಣಿಗೆ ಕಾಣುವ ಹಾಗೂ ಕಾಣದ ಸೂಕ್ಷ್ಮಾತಿಸೂಕ್ಷ್ಮ ಮಣ್ಣುಜೀವಿಗಳ ಪ್ರತಿಕೃತಿಗಳು ಅಲ್ಲಿರಬೇಕು. ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಣ್ಣಿನ ಮಾದರಿಗಳನ್ನು ಪ್ರದರ್ಶಿಸಬೇಕು. ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆಯುತ್ತಿದ್ದಾರೆ, ಯಾವ ಬೆಳೆ ಬೆಳೆಯಬಹುದು ಎನ್ನುವ ಮಾಹಿತಿ ಇರಬೇಕು. ರೈತರೇ ಮಣ್ಣಿನ ಪರೀಕ್ಷೆ ಮಾಡಿಕೊಳ್ಳಬಹುದಾದ ವಿಧಾನಗಳ ವಿವರಗಳು, ಪೂರ್ವಿಕರು ಮಣ್ಣಿನ ಗುಣಲಕ್ಷಣಗಳನ್ನು ಗುರುತಿಸುತ್ತಿದ್ದ ನೆಲ–ಮೂಲ ಜ್ಞಾನದ ದಾಖಲಾತಿಯ ಮಾಹಿತಿ, ಮಣ್ಣಿನ ಸಂರಕ್ಷಣೆಗಾಗಿ ಹಿಂದಿನವರು ಅನುಸರಿಸುತ್ತಿದ್ದ ತಂತ್ರಜ್ಞಾನಗಳ ಬಗ್ಗೆ ವಿವರಿಸುವ ಮಾದರಿಗಳು ಪ್ರದರ್ಶನಾಲಯದಲ್ಲಿ ಇರಬೇಕು ಎಂದು ಬಯಸಿದ್ದರು.
ಮ್ಯೂಸಿಯಂ ಬರೀ ಪ್ರದರ್ಶನದ ಕೇಂದ್ರವಾಗದೇ ಮಕ್ಕಳಿಗೆ ಅಥವಾ ಹೊಸ ತಲೆಮಾರಿಗೆ ಕೃಷಿ ಜ್ಞಾನ ಪಸರಿಸುವ ಜ್ಞಾನ ಮಂದಿರವಾಗಬೇಕು. ಮಕ್ಕಳಿಗಾಗಿ ಮಣ್ಣಿನ ಕುರಿತ ಕಾರ್ಯಕ್ರಮಗಳನ್ನು ಅಲ್ಲಿ ಏರ್ಪಡಿಸಬೇಕು ಎಂಬುದು ವಾಸು ಅವರ ಆಶಯವಾಗಿತ್ತು. ಈ ಆಶಯಗಳನ್ನು ಕೆಲ ಪಂಚಾಯಿತಿಗಳಿಗೆ, ಸರ್ಕಾರಕ್ಕೆ ತಲಪಿಸುವ ಪ್ರಯತ್ನ ಮಾಡಿದ್ದರು.
ಐದಾರು ವರ್ಷಗಳ ಹಿಂದೆ ಸರ್ಕಾರ, ವಿಶ್ವಬ್ಯಾಂಕ್ ನೆರವಿನ ‘ರಿವಾರ್ಡ್’ ಎಂಬ ಜಲಾನಯನ ಅಭಿವೃದ್ಧಿ ಯೋಜನೆಯಡಿ ರಾಜ್ಯದ ಆಯ್ದ ರೈತ ಸಂಪರ್ಕ ಕೇಂದ್ರಗಳಲ್ಲಿ ವಾಸು ಅವರ ಪರಿಕಲ್ಪನೆಯನ್ನೇ ಹೋಲುವಂತಹ ಮಣ್ಣಿನ ಕೇಂದ್ರಗಳನ್ನು ತೆರೆಯುವ ಪ್ರಯತ್ನ ಮಾಡಿದ್ದುದನ್ನು ಮಣ್ಣು ವಿಜ್ಞಾನಿ ರಾಜೇಂದ್ರ ಹೆಗಡೆ ನೆನಪಿಸಿಕೊಳ್ಳುತ್ತಾರೆ. ರಾಜ್ಯದ ಕೆಲವು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಮಣ್ಣಿನ ಮಾದರಿಯ ಪ್ರದರ್ಶನಾಲಯಗಳಿವೆ ಎಂದು ಗೆಳೆಯರು ಹೇಳುತ್ತಾರೆ. ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಸಾವಯವ– ಸಿರಿಧಾನ್ಯ ಅಂತರರಾಷ್ಟ್ರೀಯ ಮೇಳದಲ್ಲಿ ಕೃಷಿ ಇಲಾಖೆ ‘ಮಣ್ಣಿನ ಪ್ರದರ್ಶನಾಲಯ’ವನ್ನು ಪ್ರದರ್ಶಿಸಿತ್ತು. ಇಂಥ ಪ್ರಯತ್ನಗಳು ಗ್ರಾಮಮಟ್ಟಕ್ಕೂ ತಲಪಬೇಕೆಂಬುದು ವಾಸು ಅವರ ಅಭಿಲಾಷೆಯಾಗಿತ್ತು.
ಅತಿಯಾದ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆ, ಸಕಾಲದಲ್ಲಿ ಸಾವಯವ ಗೊಬ್ಬರ ನೀಡದೆ ಇರುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ಭಾರೀ ಮಳೆ ಮತ್ತು ಪ್ರವಾಹವೂ ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ಸವಕಳಿ ಆಗುತ್ತಿರುವ ಕುರಿತು ಹಿಂದೊಮ್ಮೆ ಇಸ್ರೊದ ಸ್ಪೇಸ್ ಅಪ್ಲಿಕೇಷನ್ ಸೆಂಟರ್ ನಡೆಸಿದ ಅಧ್ಯಯನ ತಿಳಿಸಿತ್ತು. ಪ್ರಸ್ತುತ ರಾಜ್ಯದಲ್ಲಿರುವ ಕೆಲವು ಜಲಾಶಯಗಳ ಅಚ್ಚುಕಟ್ಟು ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಎಕರೆಯಷ್ಟು ಭತ್ತದ ಗದ್ದೆಗಳಲ್ಲಿನ ಮಣ್ಣು ಸವಳು–ಜವಳಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ವಿಭಾಗ ನಡೆಸಿದ ಮಣ್ಣಿನ ಫಲವತ್ತತೆ ಕುರಿತ ಜಾಗತಿಕ ಸಮೀಕ್ಷಾ ವರದಿ ಪ್ರಕಾರ, ಜಗತ್ತಿನ ಶೇ 33ರಷ್ಟು ಭೂಮಿ ಫಲವತ್ತತೆ ಕಳೆದುಕೊಂಡಿದೆ. 2050ರ ವೇಳೆಗೆ ಶೇ 50ರಷ್ಟು ಫಲವತ್ತತೆ ಕುಸಿಯುವ ಆತಂಕವಿದೆ. ಇಂಥ ಪರಿಸ್ಥಿತಿಯಲ್ಲಿ, ಹವಾಮಾನ ವೈಪರೀತ್ಯದಿಂದ ಮಣ್ಣಿನ ಮೇಲಾಗುತ್ತಿರುವ ಪರಿಣಾಮಗಳನ್ನು ನಿರ್ವಹಿಸಲು ಗ್ರಾಮಮಟ್ಟದಲ್ಲಿ ಮಣ್ಣಿನ ಅರಿವು ಮೂಡಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಬೇಕಾದ ಅಗತ್ಯವಿದೆ.
‘ವಿಶ್ವ ಮಣ್ಣಿನ ದಿನ’ (ಡಿ. 5) ಆಚರಣೆ ಸಂದರ್ಭದಲ್ಲಾದರೂ, ವಾಸು ಅವರ ‘ಮಣ್ಣಿನ ಮ್ಯೂಸಿಯಂ’ ಕನಸು ಮೂರ್ತರೂಪು ತಳೆಯುವ ಸಾಧ್ಯತೆಗಳ ಬಗ್ಗೆ ಚರ್ಚೆ, ಪ್ರಯತ್ನಗಳು ನಡೆಯಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.