ADVERTISEMENT

ಸಂಗತ | ನಾಯಿಗೆ ಅನ್ನ ಹಾಕುವ ಮುನ್ನ...

ಬೀದಿನಾಯಿಗಳನ್ನು ಪೋಷಿಸುವವರು ಕೆಲವು ಕನಿಷ್ಠ ಜವಾಬ್ದಾರಿಗಳನ್ನು ನಿಭಾಯಿಸಬೇಕಿರುವುದು ಸಮುದಾಯ ಸ್ವಾಸ್ಥ್ಯದ ದೃಷ್ಟಿಯಿಂದ ಅಪೇಕ್ಷಣೀಯ

ಡಾ.ಮುರಳೀಧರ ಕಿರಣಕೆರೆ
Published 29 ಏಪ್ರಿಲ್ 2025, 0:03 IST
Last Updated 29 ಏಪ್ರಿಲ್ 2025, 0:03 IST
   

ಕಾರ್ಯಕ್ರಮವೊಂದರಲ್ಲಿ ಪರಿಚಯವಾದ ಯುವತಿಯೊಬ್ಬಳು, ನಾನು ವೃತ್ತಿಯಲ್ಲಿ ಪಶುವೈದ್ಯ ಎಂದೊಡನೆ ‌‘ಸರ್, ಒಂದು ಮಾಹಿತಿ ಕೇಳ್ಬಹುದಾ?’ ಎಂದಳು ಸ್ವಲ್ಪ ಹಿಂಜರಿಕೆಯಿಂದಲೆ. ನಾನು ‘ಕೇಳಿ, ಅದಕ್ಕೇಕೆ ಮುಜುಗರ?’ ಎಂದೊಡನೆ ಅವಳ ಕಣ್ಣುಗಳು ಅರಳಿದ್ದವು. ‘ನಾಯಿಗಳಿಗೆ ಯಾವಾಗ ಇಂಜಕ್ಷನ್‌ ಹಾಕಿಸಬೇಕು?’ ಅವಳ ಪ್ರಶ್ನೆ ವ್ಯಾಕ್ಸಿನ್‌ಗಳ ಕುರಿತಾದ್ದರಿಂದ ವಿವರವಾಗಿಯೇ ಮಾಹಿತಿ ನೀಡಿದೆ. ಮಧ್ಯೆ ಮಧ್ಯೆ ಸಂದೇಹಗಳನ್ನು ನಿವಾರಿಸಿಕೊಳ್ಳುತ್ತಾ ಲಸಿಕೆಗಳ ಹೆಸರು, ಹಾಕುವ ವೇಳಾಪಟ್ಟಿಯನ್ನು ಮೊಬೈಲಲ್ಲಿ ದಾಖಲಿಸಿಕೊಂಡಳು. ಅವಳ ಕುಟುಂಬ ಇರುವುದು ಬೆಂಗಳೂರಿನಲ್ಲಿ. ಐಟಿ ಉದ್ಯೋಗಿಯ ಈ ಪರಿಯ ಶ್ವಾನಪ್ರೀತಿ ಅಚ್ಚರಿ ತಂದಿತು.

‘ಎಷ್ಟು ನಾಯಿ ಸಾಕಿದ್ದೀರಿ, ಒಂದೋ ಎರಡೋ?’ ಕುತೂಹಲದಿಂದ ಕೇಳಿದೆ. ‘ಒಟ್ಟು ಹನ್ನೊಂದು ಇವೆ. ಆರು ನಾಯಿ ನಮ್ಮನೇಲಿ, ಅಮ್ಮನ ಮನೇಲಿ ಐದು. ಎಲ್ಲಾ ಬೀದಿನಾಯಿಗಳು. ಆದರೆ ನಮ್ಮ ಮನೆಯ ಶೆಡ್ಡಲ್ಲೇ ಇರ್ತವೆ’ ಎನ್ನುತ್ತಾ ನನ್ನನ್ನು ಮತ್ತಷ್ಟು ಅಚ್ಚರಿಗೆ ದೂಡಿದ್ದಳು! ಅನಾಥ ಬೀದಿನಾಯಿಗಳ ಮೇಲಿನ ಅವಳ ಕಕ್ಕುಲಾತಿ, ಜಂತುನಾಶಕ ಔಷಧ, ಲಸಿಕೆ ಹಾಕಿಸಿ ಸ್ವಾಸ್ಥ್ಯ ಕಾಪಾಡುವ ಕಾಳಜಿ ನಿಜಕ್ಕೂ ಮೆಚ್ಚುವಂತಿತ್ತು.

ಹೌದು, ಶ್ವಾನಪ್ರಿಯರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ವಿವಿಧ ತಳಿಯ ನಾಯಿಗಳನ್ನು ಮನೆಯಲ್ಲಿ ಸಾಕುತ್ತಾ ಅವುಗಳ ಅವಶ್ಯಕತೆಗಳನ್ನು ಪೂರೈಸುತ್ತಾ ಪೂರ್ಣ ಕಾಳಜಿ ತೋರುವವರು ಒಂದೆಡೆಯಾದರೆ, ಬೀದಿನಾಯಿಗಳಿಗೆ ಅನ್ನ ಹಾಕುತ್ತಾ ಸಂತೋಷ, ಧನ್ಯತೆಯ ಭಾವ ಅನುಭವಿಸುವವರು ಹಲವರು. ಆದರೆ, ಹೀಗೆ ತಾವು ಆಹಾರ ಹಾಕಿ ಬೆಳೆಸುವ ಬೀಡಾಡಿ ನಾಯಿಗಳ ಆರೋಗ್ಯ ರಕ್ಷಣೆಯ ಹೊಣೆಯೂ ತಮ್ಮದೆಂದು ಅರಿತು ಔಷಧೋಪಚಾರ ಮಾಡುವವರ ಸಂಖ್ಯೆ ತುಂಬಾ ಕಡಿಮೆ. ಹೆಚ್ಚಿನವರ ಕಾಳಜಿ ಆಹಾರ ಕೊಡುವುದಕ್ಕೆ ಮಾತ್ರ ಸೀಮಿತವಾಗಿರುತ್ತದೆಯೇ ವಿನಾ ಅಂತಹ ಪ್ರಾಣಿಗಳ ಇನ್ನಿತರ ಅಗತ್ಯಗಳ ಬಗ್ಗೆ ಜವಾಬ್ದಾರಿ ಹೊರಲು ಹಿಂದೇಟು ಹಾಕುತ್ತಾರೆ.

ADVERTISEMENT

ಬೀದಿನಾಯಿಗಳ ಹೆಚ್ಚಳದಿಂದ ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ತಪ್ಪಿಸುವ ದಿಸೆಯಲ್ಲಿ ತಮ್ಮ ಕರ್ತವ್ಯಗಳನ್ನು ಪಾಲಿಸುವ ಪ್ರಾಣಿಪ್ರಿಯರ ಸಂಖ್ಯೆ ವಿರಳ.

ಶ್ವಾನಗಳು ಸೇರಿದಂತೆ ಸಾಕುಪ್ರಾಣಿಗಳ ಸಾಂಗತ್ಯದಿಂದ ಮಾನವನಿಗೆ ಲಾಭಗಳು ಹಲವು. ಪ್ರಾಣಿಗಳ ಒಡನಾಟದಿಂದ ಶರೀರದಲ್ಲಿ ‘ಸಂತಸ’ ತರುವ ರಸದೂತಗಳು ಉತ್ಪತ್ತಿಯಾಗುತ್ತವೆ. ದೇಹದಲ್ಲಿ ಸ್ರವಿಕೆಯಾಗುವ ಡೋಪಮಿನ್‌, ಆಕ್ಸಿಟೋಸಿನ್‌, ಎಂಡಾರ್ಫಿನ್ಸ್‌ ಮನಸ್ಸಿಗೆ ಸಂತೋಷ ತುಂಬುವುದರ ಜೊತೆಗೆ ದಣಿದ ದೇಹಕ್ಕೆ ಆರಾಮ ನೀಡುತ್ತವೆ. ಮಾನಸಿಕ ಒತ್ತಡ, ಉದ್ವೇಗ ಕಡಿಮೆ ಮಾಡುತ್ತವೆ. ಅರಳಿದ ಮನಸ್ಸು ದೈಹಿಕ ಸ್ಥಿತಿಯ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೇಹದ ರೋಗನಿರೋಧಕ ಸಾಮರ್ಥ್ಯ ಹೆಚ್ಚುತ್ತದೆ. ರಕ್ತದೊತ್ತಡ ಇಳಿಯುತ್ತದೆ. ಖಿನ್ನತೆ, ಬೇಸರ, ಏಕಾಂಗಿತನದಂತಹ ಭಾವಗಳು ಕಳೆಯುತ್ತವೆ. ಮಕ್ಕಳಲ್ಲಿ ಪ್ರೀತಿ, ವಾತ್ಸಲ್ಯ, ದಯೆ, ಅನುಕಂಪ, ಹೊಂದಾಣಿಕೆ, ಸಹಾನುಭೂತಿ, ಸಹ
ಬಾಳ್ವೆಯ ಗುಣಗಳನ್ನು ಬೆಳೆಸಲು ಪ್ರಾಣಿಗಳ ಪಾಲನೆ ಒಂದು ಉತ್ತಮ ಮಾರ್ಗ.

ನಾಯಿಯನ್ನು ಸಾಕಲು ಮನೆಯಲ್ಲಿ ಸ್ಥಳಾವಕಾಶ ಇಲ್ಲದಿದ್ದರೆ, ಅವುಗಳ ಜೊತೆಗಿರಲು, ಹೊರಗೆ ಓಡಾಡಿ
ಸಲು ಸಮಯ ಇಲ್ಲದಿದ್ದರೆ ಸಾಕುವ ಗೊಡವೆಗೆ ಹೋಗಬಾರದು. ಇಕ್ಕಟ್ಟಿನ ಜಾಗದಲ್ಲಿ ಕೂಡಿಹಾಕುವುದು, ದಿನವಿಡೀ ಮನೆಯಲ್ಲಿ ಒಂಟಿಯಾಗಿ ಬಿಟ್ಟುಹೋಗುವುದು, ಸದಾ ಬಂಧನದಲ್ಲಿ ಇಡುವುದು ಪ್ರಾಣಿ
ದೌರ್ಜನ್ಯವಷ್ಟೇ ಅಲ್ಲ ಅಕ್ಷಮ್ಯವೂ ಹೌದು. ಮಾನವನ ಈ ಪರಿಯ ವರ್ತನೆ ಶ್ವಾನಗಳಿಗೆ ಮಾನಸಿಕ ಮತ್ತು ಶಾರೀರಿಕ ಒತ್ತಡ ಉಂಟುಮಾಡುತ್ತದೆ. ಅವುಗಳ ವರ್ತನೆ ಬದಲಾಗುವುದರ ಜೊತೆಗೆ ಡಯಾಬಿಟಿಸ್‌, ಥೈರಾಯ್ಡ್‌ ತೊಂದರೆ, ಸಂಧಿವಾತ, ಚರ್ಮರೋಗದಂತಹ ದೀರ್ಘಕಾಲೀನ ಸಮಸ್ಯೆಗಳಿಗೂ ಕಾರಣವಾಗುತ್ತದೆ.

ಬೀದಿನಾಯಿಗಳಿಗೆ ಆಹಾರ ಹಾಕಿ ಬೆಳೆಸುವುದರಿಂದ ಅಪಾಯವೂ ಬಹಳಷ್ಟಿದೆ. ನಿತ್ಯ ಸುಲಭವಾಗಿ ಸಿಕ್ಕುವ ಆಹಾರದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗುವುದರಿಂದ ಅನ್ನ ಹುಡುಕಿಕೊಳ್ಳುವ ಅವುಗಳ ಸಾಮರ್ಥ್ಯ, ಕೌಶಲ ಕುಂದುತ್ತದೆ. ಆಹಾರ ಸಿಗುವುದು ಹಠಾತ್ತನೆ ನಿಂತುಹೋದರೆ ಹಸಿವೆಯಿಂದ ಸಾಯುವ ಸಂಭವ ಇರುತ್ತದೆ. ಅಲ್ಲದೆ ಆಹಾರ ಸುಲಭವಾಗಿ ಸಿಗುವ ತಾಣ ಮತ್ತಷ್ಟು ನಾಯಿಗಳನ್ನು ಆಕರ್ಷಿಸುತ್ತದೆ. ಅವುಗಳ ಸಂಖ್ಯೆ ಏರಿದಂತೆ ಬೊಗಳಾಟ, ಗದ್ದಲ, ಜಗಳ ಹೆಚ್ಚಿ ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟಾಗುತ್ತದೆ. ಮಾನವರ ಮೇಲೆ ಆಕ್ರಮಣ, ಕಡಿತ, ಜೀವಹಾನಿ ಪ್ರಕರಣಗಳು ಏರುತ್ತವೆ. ಅಪಾಯಕಾರಿ ರೇಬಿಸ್‌ ರೋಗ ಹರಡುವ ಸಾಧ್ಯತೆ ಜಾಸ್ತಿ ಆಗುತ್ತದೆ. ಹಠಾತ್ತಾಗಿ ಅಡ್ಡಬರುವ ನಾಯಿಗಳಿಂದ ವಾಹನ ಅಪಘಾತಗಳ ಅಪಾಯವೂ ಇದೆ.

ಮನೆಯಲ್ಲಿ ಸಾಕಲು ಅನನುಕೂಲದ ಕಾರಣ ಬೀದಿ ನಾಯಿಗಳನ್ನು ಪೋಷಿಸಿ ಸಮಾಧಾನ ಪಡೆಯುವವರು ಕೆಲವು ಕನಿಷ್ಠ ಜವಾಬ್ದಾರಿಗಳನ್ನು ನಿಭಾಯಿಸಬೇಕಿರುವುದು ಸಮುದಾಯ ಸ್ವಾಸ್ಥ್ಯದ ದೃಷ್ಟಿಯಿಂದ ಅಪೇಕ್ಷಣೀಯ. ತಾವು ಅನ್ನ ಹಾಕಿ ಸಲಹಿದ ನಾಯಿಗಳಿಗೆ ನಿಯಮಿತವಾಗಿ ಜಂತುನಾಶಕ ಔಷಧ ನೀಡುವುದು, ರೇಬಿಸ್‌ ಸೇರಿದಂತೆ ಅಪಾಯಕಾರಿ ಸಾಂಕ್ರಾಮಿಕ ರೋಗಗಳ ವಿರುದ್ಧ ಲಸಿಕೆ ಹಾಕಿಸುವುದರಿಂದ ಅವುಗಳ ಆರೋಗ್ಯ ರಕ್ಷಣೆಯ ಹೊಣೆ ಹೊತ್ತಂತೆ ಆಗುತ್ತದೆ. ಅವುಗಳ ಸಂಖ್ಯೆ ಹೆಚ್ಚದಂತೆ ತಡೆಯಲು ಸಂತಾನಶಕ್ತಿ ಹರಣ ಶಸ್ತ್ರಕ್ರಿಯೆ ಮಾಡಿಸುವ ಜವಾಬ್ದಾರಿಯೂ ಅನ್ನ ಹಾಕುವವರದ್ದೇ. ಈ ದಿಸೆಯಲ್ಲಿ ಸ್ಥಳೀಯ ಪ್ರಾಣಿ ಕಲ್ಯಾಣ ಸಂಘಗಳ ಸಹಾಯ ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.