ಹತ್ತನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದ ನಂತರ, ತಾವು ಕಲಿತ ವಿಚಾರಗಳನ್ನು ಹಂಚಿಕೊಳ್ಳುವಂತೆ ಅವರನ್ನು ಕೇಳಿಕೊಂಡೆ. ಪ್ರೋತ್ಸಾಹದ ನುಡಿಗಳ ನಂತರ ಇಬ್ಬರು ವಿದ್ಯಾರ್ಥಿನಿ
ಯರು ತಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಂಡರು. ಒಂದಷ್ಟು ಹೆಚ್ಚಿನ ಪ್ರೇರಣೆಯ ನಂತರ ಒಬ್ಬ ವಿದ್ಯಾರ್ಥಿ ಮಾಹಿತಿ ಹಂಚಿಕೊಂಡ. ತಮ್ಮ ಆಲೋಚನೆ, ಚಿಂತನೆ, ವಿಚಾರಗಳನ್ನು ಇತರ
ರೊಂದಿಗೆ ಹಂಚಿಕೊಳ್ಳಲು ದೊರೆಯುವ ಅವಕಾಶಗಳನ್ನು ನಿರಾಕರಿಸದೆ ಆ ಸಂದರ್ಭಗಳನ್ನು
ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಬೇಕಾಯಿತು.
ವಿದ್ಯಾರ್ಥಿಗಳಾಗಿದ್ದ ಅವಧಿಯಲ್ಲಿನ ಇಂತಹ ಅನುಭವಗಳು ನಮ್ಮ ಬದುಕಿನಲ್ಲಿ ಉತ್ತಮ ನೆನಪು
ಗಳಾಗಿ ಉಳಿಯುತ್ತವೆ ಹಾಗೂ ನಮ್ಮ ವ್ಯಕ್ತಿತ್ವ ನಿರ್ಮಾಣಕ್ಕೂ ಸಹಕಾರಿಯಾಗುತ್ತವೆ. ತರಗತಿಯ ನಂತರ ಒಬ್ಬ ವಿದ್ಯಾರ್ಥಿ ಖಾಸಗಿಯಾಗಿ ನನ್ನ ಬಳಿ ಬಂದು ‘ನನಗೂ ಮಾತನಾಡಬೇಕೆಂಬ ಆಸೆ ಇತ್ತು. ಆದರೆ ಎಲ್ಲಿ ತಪ್ಪಾಗುವುದೋ ಎಂಬ ಭಯದಿಂದ ಸುಮ್ಮನಾದೆ’ ಎಂದು ಹೇಳಿದ.
ವಿದ್ಯಾರ್ಥಿಗಳಲ್ಲಿ ಸಂವಹನ ಮತ್ತು ಸಾರ್ವಜನಿಕವಾಗಿ ಭಾಷಣ ಮಾಡುವ ಕೌಶಲವನ್ನು ಚಿಕ್ಕಂದಿನಿಂದಲೇ ಕಲಿಸುವ ಅವಶ್ಯಕತೆ ಇದೆ. ಆತ್ಮವಿಶ್ವಾಸದ ಕೊರತೆ, ತಮ್ಮ ಅಭಿಪ್ರಾಯ, ಆಲೋಚನೆಗಳನ್ನು ವ್ಯಕ್ತ
ಪಡಿಸಲು ಪೂರಕವಾದ ಭಯರಹಿತ ವಾತಾವರಣ ಇಲ್ಲದಿರುವಂತಹ ಸಂದರ್ಭಗಳು ವಿದ್ಯಾರ್ಥಿಗಳು ತಮ್ಮ ಚಿಂತನೆಗಳನ್ನು ಅಭಿವ್ಯಕ್ತಗೊಳಿಸಲು ಅಡ್ಡಿಯಾಗುತ್ತವೆ. ಶಿಕ್ಷಕರು ಬೋಧಿಸುವಾಗ ತಮ್ಮ ತಮ್ಮಲ್ಲೇ ಗುಸುಗುಸು ಮಾತನಾಡಿಕೊಳ್ಳುವ ವಿದ್ಯಾರ್ಥಿಗಳು, ಶಿಕ್ಷಕರು ಪ್ರಶ್ನೆ ಕೇಳಿದಾಗ ಅಥವಾ ಏನನ್ನಾದರೂ ವಿವರಿಸಲು ತಿಳಿಸಿದಾಗ ಮಾತು ಬಾರದವರಂತೆ ಆಗುತ್ತಾರೆ.
ವಿದ್ಯಾರ್ಥಿಗಳು ತರಗತಿಗಳಲ್ಲಿ ಮಾತನಾಡದೇ ಇರಲು ಶಿಕ್ಷಕರು ಒಂದಷ್ಟು ಮಟ್ಟಿಗೆ ಕಾರಣರಾಗುತ್ತಾರೆ. ತಾವು ಪ್ರಶ್ನೆಗಳನ್ನು ಕೇಳಿದಾಗ, ವಿದ್ಯಾರ್ಥಿಗಳು ಉತ್ತರಿಸಲು ಅಗತ್ಯವಾದ ಒಂದಷ್ಟು ಸಮಯವನ್ನು ನೀಡದೆ, ಖುದ್ದು ವಿವರಿಸಲು ಪ್ರಾರಂಭಿಸುತ್ತಾರೆ. ಶಿಕ್ಷಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ವಿದ್ಯಾರ್ಥಿಗೆ ಸಹಜವಾಗಿ ಒಂದಷ್ಟು ಸಮಯದ ಅವಶ್ಯಕತೆ ಇರು ತ್ತದೆ. ಕೆಲವರಿಗೆ ಇದಕ್ಕಾಗಿ ಒಂದಷ್ಟು ಹೆಚ್ಚು ಸಮಯ ಬೇಕಾಗಬಹುದು. ಇನ್ನು ಕೆಲವರಿಗೆ ಕಡಿಮೆ ಸಮಯ ಬೇಕಾಗಬಹುದು.
ಶಿಕ್ಷಕರು ಕೇಳಿದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ತಮ್ಮೊಳಗೇ ಒಂದಷ್ಟು ಚಿಂತನ ಮಂಥನ ನಡೆಸಲು ಅಗತ್ಯವಾದ ಸಮಯ ನೀಡುವುದು ಪ್ರಮುಖವಾಗುತ್ತದೆ. ಇದರ ಜೊತೆಗೆ ವಿದ್ಯಾರ್ಥಿಗಳು ಹೇಳುವ ಉತ್ತರ ಸರಿ ಇರಲಿ ಅಥವಾ ತಪ್ಪಿರಲಿ ಅದನ್ನು ಮುಕ್ತವಾಗಿ ಸ್ವೀಕರಿಸುವ ಮನೋಭಾವವೂ ಶಿಕ್ಷಕರಿಗೆ ಇರಬೇಕಾಗುತ್ತದೆ. ಅನೇಕ ಶಿಕ್ಷಕರು ‘ತಪ್ಪಾದರೂ ಪರವಾಗಿಲ್ಲ, ನೀವು ವಿವರಿಸಿ’ ಎಂದು ಹೇಳುತ್ತಾರೆ. ಆದರೆ ತಮ್ಮ ಹಿಂದಿನ ತರಗತಿಗಳಲ್ಲಿ ಇತರ ಶಿಕ್ಷಕರಿಂದ ಆದ ಕಹಿ ಅನುಭವಗಳಿಂದ ವಿದ್ಯಾರ್ಥಿಗಳು ಬಾಯಿ ತೆರೆಯಲು ಹಿಂಜರಿಯುತ್ತಾರೆ. ಅಂಥ ಅನುಭವಗಳು ಅವರಲ್ಲಿ ಆತ್ಮವಿಶ್ವಾಸ ಉಡುಗುವಂತೆ ಮಾಡುತ್ತವೆ.
ವಿದ್ಯಾರ್ಥಿಗಳನ್ನು ಮಾತಿಗೆ ತೊಡಗಿಸಿದರೆ ತರಗತಿಯಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗಿ, ತಾವು ಮಾಡಬೇಕಾದ ಪಾಠ ಪೂರ್ಣಗೊಳಿಸಲು ಆಗುವುದಿಲ್ಲ ಎಂಬ ಭಯ ಅನೇಕ ಶಿಕ್ಷಕರಲ್ಲಿ ಇರುತ್ತದೆ. ಆದರೆ ವಿದ್ಯಾರ್ಥಿಗಳು ಸಂವಹನ, ಸಂವಾದಗಳಿಗೆ ತೆರೆದುಕೊಂಡಷ್ಟೂ ತರಗತಿಯನ್ನು ನಿರ್ವಹಿಸುವುದು ಶಿಕ್ಷಕರಿಗೆ ಸಲೀಸಾಗುತ್ತದೆ. ಉತ್ತರ ತಿಳಿದಿರುವ ವಿದ್ಯಾರ್ಥಿಗಳು ಕೈ ಎತ್ತಲು ಸೂಚನೆ ನೀಡುವುದು, ಕೈ ಎತ್ತಿದವರಿಗೆ ಸರದಿ ಪ್ರಕಾರ ಉತ್ತರಿಸಲು ಅವಕಾಶ ಮಾಡಿಕೊಡುವುದು ಹಾಗೂ ಕೈ ಎತ್ತದೇ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ, ಉತ್ತರಿಸಲು ಪ್ರೋತ್ಸಾಹಿಸುವುದನ್ನು ಶಿಕ್ಷಕರು ಮಾಡಬೇಕು. ತರಗತಿಯಲ್ಲಿ ಮಾತನಾಡಲು ಉತ್ಸಾಹ ತೋರದ ವಿದ್ಯಾರ್ಥಿಗಳ ಮನವೊಲಿಸಿ ಅವರನ್ನು ಮಾತಿನಲ್ಲಿ ತೊಡಗಿಸುವುದನ್ನು ಶಿಕ್ಷಕರು ಸವಾಲಾಗಿ ಸ್ವೀಕರಿಸಿ, ಅವರು ಮಾತನಾಡುವಂತೆ ಪ್ರೇರೇಪಿಸಬೇಕು.
ತರಗತಿಯ ಎಲ್ಲ ವಿದ್ಯಾರ್ಥಿಗಳು ಕಲಿಕಾ ಪ್ರಕ್ರಿಯೆ ಯಲ್ಲಿ ತೊಡಗಿಕೊಳ್ಳಲು ವಿದ್ಯಾರ್ಥಿಗಳ ಸಂವಹನ ಅತ್ಯವಶ್ಯವಾಗುತ್ತದೆ. ಕಲಿಕೆಯಲ್ಲಿ ನಿಧಾನವಾಗಿರುವ ಮಕ್ಕಳು ಸಹ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲು ಇದು ಸಹಾಯ ಮಾಡುತ್ತದೆ.
ವಿದ್ಯಾರ್ಥಿಗಳು ಮಾತನಾಡಲು ಭಾಷಾ ಕೌಶಲ ಅವಶ್ಯವಾಗುತ್ತದೆ. ಮಾತನಾಡುತ್ತಾ ಹೋದಂತೆ ಭಾಷಾ ಕೌಶಲದಲ್ಲಿಯೂ ಬೆಳವಣಿಗೆ ಆಗುತ್ತದೆ. ಅಭಿವ್ಯಕ್ತಿಗೆ ಪದಸಂಪತ್ತು ಹಾಗೂ ಆತ್ಮವಿಶ್ವಾಸ ಅವಶ್ಯ. ಹೆಚ್ಚಾಗಿ ಓದಿನಲ್ಲಿ ತೊಡಗಿಸಿಕೊಳ್ಳುವುದು ಪದಸಂಪತ್ತು ವೃದ್ಧಿಯಾಗಲು ಸಹಾಯಕವಾದರೆ, ಮಾತನಾಡಲು ಆಲೋಚನಾ ಸಾಮರ್ಥ್ಯದ ಜೊತೆಗೆ ವಿಷಯಗಳನ್ನು ಮನಸ್ಸಿನಲ್ಲಿ ವೇಗವಾಗಿ ಜೋಡಿಸಿಕೊಂಡು ಅವುಗಳನ್ನು ಮಾತಿನ ರೂಪದಲ್ಲಿ ವ್ಯಕ್ತಪಡಿಸುವ ಕೌಶಲವು ಅಭ್ಯಾಸದಿಂದ ರೂಢಿಯಾಗುತ್ತದೆ. ಈ ಕಾರಣದಿಂದ ಶಿಕ್ಷಕರು ವಿದ್ಯಾರ್ಥಿಗಳನ್ನು ವ್ಯವಸ್ಥಿತವಾಗಿ ಹಾಗೂ ಶಿಸ್ತುಬದ್ಧವಾಗಿ ಮಾತಿಗೆ ತೊಡಗಿಸಬೇಕು.
ಸಾರ್ವಜನಿಕವಾಗಿ ಮಾತನಾಡುವ ಕೌಶಲಕ್ಕೆ ತರಗತಿಯಲ್ಲಿ ಮಾತನಾಡುವ ಕೌಶಲವು ಮೊದಲ ಮೆಟ್ಟಿಲಾಗಿ ಕೆಲಸ ಮಾಡುತ್ತದೆ. ತರಗತಿಯಲ್ಲಿ ಭಯ, ಹಿಂಜರಿಕೆ ಇಲ್ಲದೆ ಮಾತನಾಡಲು ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸಿದ ನಂತರ ಶಾಲೆಯ ಪ್ರಾರ್ಥನೆಯ ವೇಳೆಯಲ್ಲಿ ಅಥವಾ ಶಾಲೆಯಲ್ಲಿ ಆಯೋಜಿಸುವ ಸಮಾರಂಭ ಹಾಗೂ ವಿವಿಧ ಕಾರ‍್ಯಕ್ರಮಗಳಲ್ಲಿ ಎಲ್ಲಾ ಮಕ್ಕಳಿಗೆ ಮಾತನಾಡಲು ಸರದಿಯಲ್ಲಿ ಅವಕಾಶ ಕಲ್ಪಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.