ADVERTISEMENT

ಸಂಗತ: ಕಹಿಯಾಗದಿರಲಿ ಕಬ್ಬಿನ ಉಳುಮೆ

ಗುಜರಾತ್‌ ಹಾಗೂ ಆಸ್ಟ್ರೇಲಿಯಾ ಮಾದರಿಗಳು ಅನುಸರಣಯೋಗ್ಯ

ಮಲ್ಲಿಕಾರ್ಜುನ ಹೆಗ್ಗಳಗಿ
Published 25 ನವೆಂಬರ್ 2022, 19:31 IST
Last Updated 25 ನವೆಂಬರ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಬ್ಬು ಸಿಹಿ. ಆದರೆ ಕಬ್ಬಿನ ವ್ಯವಹಾರವು ಸಮಸ್ಯೆ ಹಾಗೂ ಗೊಂದಲದಿಂದ ಕೂಡಿದೆ. ಕಬ್ಬಿಗೆ ಬೆಲೆ ನಿಗದಿ, ಬಾಕಿ ಉಳಿಸಿಕೊಂಡ ಹಣ ಪಾವತಿ ವಿಚಾರದಲ್ಲಿ ಸದಾ ಸಂಘರ್ಷ. ಪಕ್ವಗೊಂಡ ಕಬ್ಬನ್ನು ಸಮಯಕ್ಕೆ ಸರಿಯಾಗಿ ಕಟಾವು ಮಾಡಿ ಕಾರ್ಖಾನೆಗಳಿಗೆ ಸಾಗಿಸುವುದಕ್ಕಾಗಿ ರೈತರಿಗೆ ತೊಂದರೆ ತಪ್ಪಿದ್ದಲ್ಲ.

ಇವು ಬಗೆಹರಿಸಲಾರದಷ್ಟು ಗಂಭೀರ ಸಮಸ್ಯೆಗಳಲ್ಲ. ಕಾರ್ಖಾನೆಗಳ ಆಡಳಿತ ಮಂಡಳಿಯವರ ಬದ್ಧತೆ ಹಾಗೂ ಸರ್ಕಾರದ ಬಿಗಿ ನಿಲುವಿನ ಕೊರತೆಯಿಂದ ಕಬ್ಬು ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಬ್ಬು ಬೆಳೆಗಾರರು ಈಚೆಗೆ ಬೆಂಗಳೂರಿನಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅರೆಬೆತ್ತಲೆ ಉರುಳು ಸೇವೆ ಮಾಡಬೇಕಾಗಿ ಬಂದದ್ದು ಯಾವ ಸರ್ಕಾರಕ್ಕೂ ಭೂಷಣವಲ್ಲ.

ನಮ್ಮ ಗುಜರಾತ್ ರಾಜ್ಯ ಹಾಗೂ ಆಸ್ಟ್ರೇಲಿಯಾ ದೇಶ ಅಳವಡಿಸಿಕೊಂಡ ಮಾದರಿಗಳು ಕಬ್ಬು ಬೆಳೆಗಾರರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸರಳ ಮಾರ್ಗಗಳಾಗಿವೆ. ರಾಜ್ಯದ ಹತ್ತು ಮಂದಿ ಕಬ್ಬು ಬೆಳೆಗಾರರು ಹಾಗೂ ಸಕ್ಕರೆಯ ತಂತ್ರಜ್ಞರು ಈಚೆಗೆ ಗುಜರಾತ್‌ಗೆ ಭೇಟಿ ನೀಡಿ ಅಧ್ಯಯನ ಮಾಡಿದ್ದಾರೆ. ಈ ತಂಡದಲ್ಲಿ ಸಕ್ಕರೆ ಕುರಿತ ತಂತ್ರಜ್ಞನಾಗಿ ನಾನು ಸಹ ಭಾಗವಹಿಸಿದ್ದೆ.

ADVERTISEMENT

ಗುಜರಾತ್ ಸರ್ಕಾರವು ಸಕ್ಕರೆ ಉದ್ಯಮವನ್ನು ತುಂಬಾ ಶಿಸ್ತುಬದ್ಧವಾಗಿ ನಿಭಾಯಿಸುತ್ತಿದೆ. ಕಬ್ಬು ಪೂರೈಸಿದ 14 ದಿನಗಳ ಒಳಗಾಗಿ ಮೊದಲ ಕಂತಿನ ಹಣವಾಗಿ ಪ್ರತೀ ಟನ್ನಿಗೆ ₹ 2,500 ಕಡ್ಡಾಯವಾಗಿ ಪಾವತಿ ಮಾಡಬೇಕು ಎಂಬ ನಿಯಮವನ್ನು ಜಾರಿ ಮಾಡಲಾಗಿದೆ. ಕಾರ್ಖಾನೆಯು ಬಾಕಿ ಉಳಿಸಿಕೊಂಡರೆ ಮರುದಿನವೇ ಕೃಷಿ ಇಲಾಖೆಯು ಆ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಪಾವತಿ ಮಾಡುತ್ತದೆ. ಈ ಬಗ್ಗೆ ಇಲಾಖೆಯು ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತದೆ. ಇದರಿಂದ ಕಾರ್ಖಾನೆಗಳ ಆಡಳಿತ ಮಂಡಳಿಯವರು ಅಪಮಾನಕ್ಕೆ ಗುರಿಯಾಗಬೇಕಾಗುತ್ತದೆ. ಹೀಗೆ ರೈತರಿಗೆ ಪಾವತಿ ಮಾಡಿದ ಹಣವನ್ನು ಇಲಾಖೆಯು ಬಡ್ಡಿ ಸಹಿತ ವಸೂಲು ಮಾಡುತ್ತದೆ. ಕಾರ್ಖಾನೆಯು ಸರ್ಕಾರದ ಈ ಹಣವನ್ನು ಕೊಡಲು ವಿಳಂಬ ಮಾಡಿದರೆ ಭೂಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲು ಮಾಡಲಾಗುತ್ತದೆ.

ಕಬ್ಬು ನುರಿಸುವ ಹಂಗಾಮು ಮುಗಿದ ಒಂದು ವಾರದಲ್ಲಿ, ಬೆಲೆ ನಿಗದಿಯ ಪ್ರಕಾರ, ಬಾಕಿ ಉಳಿದಿರುವ ಎರಡನೇ ಕಂತಿನ ಹಣವನ್ನು ಪೂರ್ಣ ಪಾವತಿ ಮಾಡಬೇಕು. ಇದಕ್ಕೆ ಕಾರ್ಖಾನೆಯು ವಿಳಂಬ ಮಾಡಿದರೆ ಮತ್ತೆ ಕೃಷಿ ಇಲಾಖೆಯು ಪಾವತಿ ಮಾಡಿ, ಬಾಕಿಯನ್ನು ಕಾರ್ಖಾನೆಯಿಂದ ವಸೂಲು ಮಾಡಲು ಕ್ರಮ ಕೈಗೊಳ್ಳುತ್ತದೆ.

ದೇಶದಲ್ಲಿಯೇ ಗುಜರಾತ್ ರಾಜ್ಯದ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಅತಿ ಹೆಚ್ಚು ಬೆಲೆ ನೀಡುತ್ತಿರುವುದು ಬಹುದೊಡ್ಡ ಸಾಧನೆಯಾಗಿದೆ. 2020- 21ನೇ ಸಾಲಿನಲ್ಲಿ ಅಲ್ಲಿನ ಕಾರ್ಖಾನೆಗಳು ಪ್ರತೀ ಟನ್ನಿಗೆ ₹ 3,500 ಪಾವತಿ ಮಾಡಿವೆ. ದೇಶದ ಇತರ ಎಲ್ಲ ಕಾರ್ಖಾನೆಗಳು ₹ 2,700ರಿಂದ ₹ 3000ದವರೆಗೆ ಪಾವತಿಸಿವೆ. ಇದು ಗಮನಿಸಬೇಕಾದ ಮುಖ್ಯ ವ್ಯತ್ಯಾಸ. ಆ ರಾಜ್ಯದಲ್ಲಿ ಒಟ್ಟು 19 ಸಕ್ಕರೆ ಕಾರ್ಖಾನೆಗಳಿವೆ. ಇವೆಲ್ಲವೂ ಸಹಕಾರಿ ಸಂಘಗಳಿಗೆ ಸೇರಿವೆ. ಅಲ್ಲಿ ಒಂದೂ ಖಾಸಗಿ ಸಕ್ಕರೆ ಕಾರ್ಖಾನೆ ಇಲ್ಲ ಎಂಬುದು ಗಮನಾರ್ಹ. ಖಾಸಗಿರಂಗದ ಸಕ್ಕರೆ ಕಾರ್ಖಾನೆಗಳನ್ನು ಕಟ್ಟುವುದಕ್ಕೆ ಮತ್ತು ಸಹಕಾರಿ ಕಾರ್ಖಾನೆಗಳನ್ನು ಖಾಸಗಿಯವರಿಗೆ ಹಸ್ತಾಂತರಿ
ಸುವುದಕ್ಕೆ ಗುಜರಾತ್ ರಾಜ್ಯ ಸಹಕಾರಿ ಸಕ್ಕರೆಯ ಉದ್ಯೋಗ ಒಕ್ಕೂಟ ತೀವ್ರ ವಿರೋಧ ಹೊಂದಿದೆ. ಸಕ್ಕರೆ ಕಾರ್ಖಾನೆಗಳನ್ನು ಖಾಸಗಿ ವಲಯದಲ್ಲಿ ಸ್ಥಾಪಿಸುವುದಕ್ಕೆ ಈ ಒಕ್ಕೂಟ ಅವಕಾಶ ಕೊಡುವುದೇ ಇಲ್ಲ.

ಗುಜರಾತ್ ಸಕ್ಕರೆ ಕಾರ್ಖಾನೆಗಳು ಪ್ರತೀ ಟನ್ ಕಬ್ಬಿನಿಂದ 120– 130 ಕಿಲೊ ಸಕ್ಕರೆ ಉತ್ಪಾದಿಸುತ್ತಿವೆ. ಕರ್ನಾಟಕದ ಕಾರ್ಖಾನೆಗಳು ಒಂದು ಟನ್ ಕಬ್ಬಿನಿಂದ 100– 110 ಕಿಲೊ ಸಕ್ಕರೆ ಉತ್ಪಾದಿಸುತ್ತಿವೆ.

ಆಸ್ಟ್ರೇಲಿಯಾ ದೇಶದ ಸಕ್ಕರೆಯ ಉದ್ದಿಮೆ ಜಗತ್ತಿಗೇ ಮಾದರಿಯಾಗಿದೆ. ಇಲ್ಲಿ ಸಕ್ಕರೆ ಮತ್ತು ಸಕ್ಕರೆ ಕೈಗಾರಿಕೆಯ ಉಪ ಉತ್ಪನ್ನಗಳ ಮಾರಾಟದ ಹೊಣೆಯನ್ನು ಕಬ್ಬು ಬೆಳೆಗಾರರೇ ನಿರ್ವಹಿಸುತ್ತಾರೆ.
ಕಬ್ಬಿಗೆ ಬೆಲೆಯನ್ನು ಬೆಳೆಗಾರರ ಸಂಘಟನೆಗಳೇ ನಿರ್ಧರಿಸುತ್ತವೆ. ಹೀಗಾಗಿ ರೈತರಿಗೆ ಕಬ್ಬಿನ ಬಿಲ್ ಬಾಕಿ ಉಳಿಯುವ ಪ್ರಸಂಗ ಹಾಗೂ ಯೋಗ್ಯ ಬೆಲೆ ನಿಗದಿಪಡಿಸಲು ರೈತರು ಹೋರಾಟ ನಡೆಸಬೇಕಾದ ಪ್ರಮೇಯವೇ ಬರುವುದಿಲ್ಲ.

ರೈತರೇ ಸಕ್ಕರೆ ಹಾಗೂ ಇತರ ಉತ್ಪನ್ನಗಳನ್ನು ಮಾರಾಟ ಮಾಡಿ ಬೆಳೆಗಾರರಿಗೆ ಹಣ ಪಾವತಿ ಮಾಡುತ್ತಾರೆ. ಇದಕ್ಕಾಗಿ ಆಸ್ಟ್ರೇಲಿಯಾ ರೈತರು ಸಕ್ಕರೆ ಉತ್ಪನ್ನ ಮಾರಾಟ ಸಂಘಗಳನ್ನು ಕಟ್ಟಿಕೊಂಡಿದ್ದಾರೆ. ಸಕ್ಕರೆ ಕಾರ್ಖಾನೆಗಳು ಉತ್ಪಾದಿಸಿದ ಸಕ್ಕರೆ ಹಾಗೂ ಇತರ ಉತ್ಪನ್ನಗಳನ್ನು ಮೂರು ಭಾಗ ಮಾಡಿ, ಎರಡು ಭಾಗವನ್ನು ರೈತರಿಗೆ ಹಾಗೂ ಒಂದು ಭಾಗವನ್ನು ಕಾರ್ಖಾನೆಗೆ ಕೊಡಲಾಗುತ್ತದೆ.

ಗುಜರಾತ್ ಮತ್ತು ಆಸ್ಟ್ರೇಲಿಯಾದ ಈ ಬಗೆಯ ಎರಡು ಮಾದರಿಗಳು ಬಹಳ ಪರಿಣಾಮಕಾರಿಯಾಗಿವೆ. ಸರ್ಕಾರ ಹಾಗೂ ರೈತರು ಎಚ್ಚೆತ್ತುಕೊಂಡು ಬದಲಾವಣೆಗೆ ಮುನ್ನುಡಿ ಬರೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.