ADVERTISEMENT

ಮಾತೃಭಾಷೆ ಎಂಬ ಆಶಾಕಿರಣ

ಅನೇಕ ರಾಷ್ಟ್ರಗಳು ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡುತ್ತಿರುವ ಬಗ್ಗೆ ನಮ್ಮ ಸರ್ಕಾರಗಳು ಅಧ್ಯಯನ ಮಾಡಬೇಕಿದೆ

ಗುರುರಾಜ ದೇಸಾಯಿ
Published 20 ಫೆಬ್ರುವರಿ 2020, 20:00 IST
Last Updated 20 ಫೆಬ್ರುವರಿ 2020, 20:00 IST
   

ಮಾನವನ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನದ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧ ಸ್ಥಳೀಯ ವಾತಾವರಣಕ್ಕೆ ಅನುಗುಣವಾಗಿ ಭಾಷೆಯು ವಿಕಸನಗೊಳ್ಳುತ್ತಾ ಬಂದಿತು. ವಿಶ್ವಸಂಸ್ಥೆಯ ಅಧ್ಯಯನದ ಪ್ರಕಾರ, 1900ರಲ್ಲಿ 10 ಸಾವಿರ ಭಾಷೆಗಳಿದ್ದವು. ಆದರೆ ಈಗ ಕೇವಲ 6,700 ಭಾಷೆಗಳಿವೆ. ಇವುಗಳಲ್ಲಿ ಶೇ 50ರಷ್ಟು ಭಾಷೆಗಳನ್ನು ಮಾತ್ರ ಮಕ್ಕಳ ಕಲಿಕೆಗೆ ಬಳಸಲಾಗುತ್ತಿದೆ. ಉಳಿದ ಭಾಷೆಗಳು ಅಳಿವಿನ ಅಂಚಿನಲ್ಲಿವೆ.

ಭಾರತದಲ್ಲಿ 122 ಪ್ರಮುಖ ಭಾಷೆಗಳು ಹಾಗೂ 1,599 ಇತರ ಭಾಷೆಗಳು ಇವೆ ಎಂದು ಸರ್ಕಾರದ ವರದಿಯೊಂದು ಹೇಳುತ್ತದೆ. ಈ ಎಲ್ಲಾ ಭಾಷೆಗಳನ್ನು ಉಳಿಸುವ ಮತ್ತು ಬೆಳೆಸುವ ಕೆಲಸ ಮುಖ್ಯವಾಗಿ ಆಗಬೇಕಿದೆ.

ಬಹುಭಾಷೆ ಮತ್ತು ಬಹುಸಂಸ್ಕೃತಿಯನ್ನು ಬಿಂಬಿಸುವುದಕ್ಕಾಗಿ, ಪ್ರೋತ್ಸಾಹಿಸುವುದಕ್ಕಾಗಿ ವಿಶ್ವಸಂಸ್ಥೆಯು ವಿಶ್ವ ಮಾತೃಭಾಷಾ ದಿನವನ್ನು ಘೋಷಿಸಿದ್ದು, 2000ನೇ ಇಸವಿಯಿಂದ ಫೆಬ್ರುವರಿ 21ರಂದು ಈ ದಿನವನ್ನು ಆಚರಿಸಲಾಗುತ್ತಿದೆ.

ADVERTISEMENT

ಮಗುವಿನ ಪ್ರಾಥಮಿಕ ಶಿಕ್ಷಣದ ಕಲಿಕೆಯು ಮಾತೃಭಾಷೆಯಲ್ಲೇ ಇರಬೇಕು ಎಂದು ಜಗತ್ತಿನ ಬಹುಪಾಲು ಭಾಷಾತಜ್ಞರು, ಶಿಕ್ಷಣ ಚಿಂತಕರು, ಮಾನವಶಾಸ್ತ್ರಜ್ಞರು ಹೇಳುತ್ತಾರೆ. ಆದರೂ ನಮ್ಮಲ್ಲಿ ಕಲಿಕಾ ಮಾಧ್ಯಮದ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆಯೇ ಇಲ್ಲ. 2008ರಲ್ಲಿ ಕರ್ನಾಟಕ ಹೈಕೋರ್ಟ್‌ ಹಾಗೂ 2014ರಲ್ಲಿ ಸುಪ್ರೀಂ ಕೋರ್ಟ್‌ ‘ಮಗುವಿನ ಕಲಿಕಾ ಮಾಧ್ಯಮದ ಆಯ್ಕೆ ಪೋಷಕರಿಗೆ ಬಿಟ್ಟದ್ದು’ ಎಂದು ಹೇಳಿವೆ. ಪರಿಣಾಮವಾಗಿ, ಇಂಗ್ಲಿಷ್‌ನ ಯಜಮಾನಿಕೆಯು ಗಟ್ಟಿಗೊಳ್ಳುತ್ತಿದೆ. ಸುಪ್ರೀಂ ಕೋರ್ಟ್‌ ಈ ಕುರಿತು ವಿವಿಧ ರಾಜ್ಯಗಳ ಅಭಿಪ್ರಾಯವನ್ನು ಕೇಳದೆ, ಕರ್ನಾಟಕದ ಅಭಿಪ್ರಾಯವನ್ನಷ್ಟೇ ಪರಿಗಣಿಸಿ ಈ ತೀರ್ಪು ನೀಡಿದೆ. ಇದು ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ.

ಜಾಗತೀಕರಣದ ನೇರ ಪ್ರಭಾವವು ಸ್ಥಳೀಯ ಭಾಷೆಗಳ ಮೇಲೆ ಆಗುತ್ತಿದೆ. ಇಂಗ್ಲಿಷ್‌ ಒಂದು ರೀತಿ ಯಜಮಾನನಂತೆ ವರ್ತಿಸುತ್ತಿದೆ. ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ವಿವಿಧ ವಿಷಯಗಳ ಬಹುತೇಕ ಮಾಹಿತಿ ಇಂಗ್ಲಿಷ್‌ನಲ್ಲಿ ಸಂಗ್ರಹವಾಗಿದೆ, ಔದ್ಯೋಗಿಕ ಶಿಕ್ಷಣಕ್ಕಾಗಿ ಇಂಗ್ಲಿಷ್‌ ಕಲಿಕೆ ಮುಖ್ಯವೆಂದು ತೋರುತ್ತಿದೆ. ಹೀಗಾಗಿ ಇಂಗ್ಲಿಷ್‌ ಕಲಿಯಲು ಬಹಳಷ್ಟು ಜನ ಉತ್ಸಾಹ ತೋರುತ್ತಿದ್ದಾರೆ. ಇದನ್ನೇ ಲಾಭವನ್ನಾಗಿಸಿಕೊಂಡ ಖಾಸಗಿ ಶಿಕ್ಷಣ ಸಂಸ್ಥೆಗಳು ಇಂಗ್ಲಿಷ್‌ ವ್ಯಾಮೋಹದ ಬುಗ್ಗೆಯನ್ನು ವ್ಯಾಪಕವಾಗಿ ಉಕ್ಕಿಸಿವೆ. ಪೋಷಕರನ್ನು ಇದು ಆಕರ್ಷಿಸುತ್ತದೆ. ಆದರೆ ಇದರಿಂದ ಮಕ್ಕಳಿಗೆ ಹೊರೆಯಾಗುತ್ತಿದೆ ಎಂದು ಅರಿಯಲು ಕಲಿಸುವವರು, ಪೋಷಕರು ಇಬ್ಬರೂ ವಿಫಲರಾಗಿದ್ದಾರೆ.

ಬಹುಪಾಲು ದೇಶಗಳು ಮಾತೃಭಾಷೆಯಲ್ಲೇ ಶಿಕ್ಷಣ ನೀಡುತ್ತಿವೆ. ಇದರ ಭಾಗವಾಗಿ ಅವು ಅಭಿವೃದ್ಧಿ ಪಥದತ್ತ ಸಾಗುತ್ತಿರುವುದನ್ನು ನೋಡಬಹುದಾಗಿದೆ. ಚೀನಾ, ಜಪಾನ್, ವಿಯೆಟ್ನಾಂ, ದಕ್ಷಿಣ ಕೊರಿಯಾ, ಉತ್ತರ ಕೊರಿಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ಅನೇಕ ರಾಷ್ಟ್ರಗಳು ಮಾತೃಭಾಷೆಯಲ್ಲೇ ಕಲಿಸುತ್ತಿರುವ ಬಗ್ಗೆ ನಮ್ಮ ಸರ್ಕಾರಗಳು ಅಧ್ಯಯನ ಮಾಡಬೇಕಿದೆ.

ಮಗುವು ಪ್ರತಿಯೊಂದು ಅನುಭವವನ್ನೂ ಮಾತೃಭಾಷೆಯಲ್ಲಿಯೇ ಸವಿಯುತ್ತದೆ. ಈ ಅನುಭವದ ಅಭಿವ್ಯಕ್ತಿಗೂ ಮಾತೃಭಾಷೆ ಸಾಕ್ಷಿಯಾಗುತ್ತದೆ. ಆದರೆ ಮಾತೃಭಾಷೆಯ ಮೂಲಕ ಸಿಗುವುದೇ ಶಿಕ್ಷಣವಾಗುವುದಿಲ್ಲ. ಕನಿಷ್ಠ ಪ್ರಾಥಮಿಕ ಶಿಕ್ಷಣದವರೆಗಾದರೂ ಮಗು
ವಿನ ಕಲಿಕೆ ಮಾತೃಭಾಷೆಯಲ್ಲಿದ್ದರೆ ಮುಂದೆ ಅದರ ಶಿಕ್ಷಣಕ್ಕೆ ಉತ್ತಮ ಬುನಾದಿಯಾಗುತ್ತದೆ. ತನ್ನದೇ ಭಾಷೆ, ತನ್ನದೇ ಕಾಗುಣಿತ ಕಲಿಯುವಾಗ ಮಗುವಿನ ಆಸಕ್ತಿ ಇಮ್ಮಡಿಗೊಳ್ಳುತ್ತದೆ ಎಂದು ಮಾನವಶಾಸ್ತ್ರಜ್ಞರು ಹೇಳುತ್ತಾರೆ. ಭಾಷೆಯನ್ನು ಹೇರಿದರೆ, ಅದರಿಂದ ಮಗುವಿಗೆ ಹಿಂಸಾತ್ಮಕ ಅನುಭವವಾಗುತ್ತದೆ, ಕಲಿಕೆಗೆ ಹಿನ್ನಡೆಯಾಗುತ್ತದೆ ಎಂಬುದು ಅವರ ವಾದ.

ಮಗು ತನ್ನ ಪರಿಕಲ್ಪನೆಗಳನ್ನು ರೂಪಿಸಿಕೊಳ್ಳಲು ಮಾತೃಭಾಷೆ ನೆರವಾಗುತ್ತದೆ. ತನ್ನ ಪರಿಸರಕ್ಕೆ ವಿರುದ್ಧವಾಗಿ ಮಗು ಮತ್ತೊಂದು ಭಾಷೆಯನ್ನು ಕಲಿಯುವುದು ಕಷ್ಟವೆಂಬುದು ಅಧ್ಯಯನಗಳ ಮೂಲಕ ದೃಢಪಟ್ಟಿದೆ. ದೇಶದಲ್ಲಿನ ಶಿಕ್ಷಣ ಮಾಧ್ಯಮವನ್ನು ಪ್ರಾದೇಶಿಕ ಭಾಷೆಗಳಿಗೆ ಬದಲಾಯಿಸದಿದ್ದರೆ, ಅಂತಹ ದೇಶದಲ್ಲಿ ಪ್ರತಿಭೆಗಳ ಬೆಳವಣಿಗೆಗೂ ಧಕ್ಕೆಯಾಗುತ್ತದೆ. ಅದಕ್ಕಾಗಿ ಆಳುವ ಸರ್ಕಾರಗಳು ತ್ವರಿತವಾಗಿ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಭಾಷಾ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ ಎಂದು ಕೊಠಾರಿ ಆಯೋಗದ ಶಿಫಾರಸು ಹೇಳುತ್ತದೆ.

ಕುವೆಂಪು ಅವರು ‘ಮಾತೃಭಾಷಾ ಶಿಕ್ಷಣ ಸಂಪೂರ್ಣ ಯಶಸ್ವಿಯಾಗುವವರೆಗೂ ಸ್ಥಳೀಯರಿಗೆ ಉದ್ಯೋಗ ದೊರೆಯುವುದು ಕಷ್ಟವಾಗುತ್ತದೆ. ಇಂಗ್ಲಿಷ್‌ ಮೂಲಕ ಪಡೆಯುವ ಶಿಕ್ಷಣ ಗಾಳಿಗೋಪುರವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ನಾನು ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವ ಬದಲು ನನ್ನ ಮಾತೃಭಾಷೆಯಲ್ಲಿ ‍ಪಡೆದಿದ್ದರೆ ಇನ್ನಷ್ಟು ಉತ್ತಮ ಕವಿತೆಗಳನ್ನು ಬರೆಯುತ್ತಿದ್ದೆ’ ಎಂದು ಕವಿ ರವೀಂದ್ರನಾಥ ಟ್ಯಾಗೋರ್‌ ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ, ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಎಂಬುದು ಶಿಕ್ಷಣ ತಜ್ಞರು ಹಾಗೂ ಭಾಷಾ ತಜ್ಞರ ಆಗ್ರಹವಾಗಿದೆ. ಸರ್ಕಾರಗಳು ಸರ್ಕಾರಿ ಶಾಲೆಗಳನ್ನು ಬಲಗೊಳಿಸಿ ಮಾತೃಭಾಷಾ ಶಿಕ್ಷಣದ ಅರಿವನ್ನು ಮೂಡಿಸಬೇಕಿದೆ. ಖಾಸಗಿ ಶಾಲೆಗಳಿಗೆ ಮೂಗುದಾರ ಹಾಕಿ, ಮಾತೃಭಾಷೆಯಲ್ಲಿ ಶಿಕ್ಷಣ ನೀಡಿ, ಇಂಗ್ಲಿಷ್‌ ಅನ್ನು ಒಂದು ಭಾಷೆಯನ್ನಾಗಿ ಪರಿಣಾಮಕಾರಿಯಾಗಿ ಕಲಿಸುವಂತಹ ಜವಾಬ್ದಾರಿ ಹೊರಬೇಕಿದೆ. ಮಾತೃಭಾಷಾ ಶಿಕ್ಷಣದ ಪರ ಹೋರಾಟವು ಪ್ರಚಾರಕ್ಕಷ್ಟೇ ಸೀಮಿತವಾಗದೆ ಭಾಷೆಯ ಅಸ್ಮಿತೆ, ಶಿಕ್ಷಣದ ಹಕ್ಕು ಎಲ್ಲವನ್ನೂ ಒಳಗೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.