ಪ್ರಕರಣ ಒಂದು: ಚುಮು ಚುಮು ಚಳಿ. ಅದೇ ತಾನೆ ಬಳ್ಳಾರಿಯಿಂದ ಬಂದ ಬಸ್‌ನಿಂದ ಯಜಮಾನರೊಬ್ಬರು ಬೆಂಗಳೂರಿನ ಗೊರಗುಂಟೆ ಪಾಳ್ಯದಲ್ಲಿ ಇಳಿದರು. ಅವರಿಗೆ ಮೂತ್ರ ವಿಸರ್ಜನೆ ಮಾಡುವುದಿತ್ತು. ಎಲ್ಲಿಯೂ ಮುಕ್ತ ಜಾಗ ಕಾಣಲಿಲ್ಲ. ಒಂದಾದ ನಂತರ ಒಂದರಂತೆ ಬರುತ್ತಿದ್ದ ಬಸ್‌ಗಳಲ್ಲಿ ಜನ ಇಳಿಯುತ್ತಿದ್ದರು. ಅವರು ಕೇಳಿಯೇಬಿಟ್ಟರು-
‘ಇಲ್ಲಿ ಮೂತ್ರ ಮಾಡುವ ಜಾಗ ಎಲ್ಲಿದೆ?’ ಅರ್ಧಕಿ.ಮೀ. ದೂರದಲ್ಲಿದ್ದ ಮೆಟ್ರೊ ನಿಲ್ದಾಣಕ್ಕೆ ಹೋಗಬೇಕಷ್ಟೇ ಎಂದು ಹೇಳುವುದರ ವಿನಾ ಬೇರೆ ದಾರಿ ಕಾಣಲಿಲ್ಲ. ‘ಅಲ್ಲಿಯವರೆಗೆ ಡ್ರಾಪ್ ಮಾಡಬಹುದೇ?’ ಎಂದು ವಿನಂತಿಸಿಕೊಂಡ ಅವರು, ಆಮೇಲೆ ಮೆಟ್ರೊ ನಿಲ್ದಾಣದಲ್ಲಿ ಟಿಕೆಟ್ ಖರೀದಿಸಿ, ಶೌಚಾಲಯ ಹುಡುಕಿಕೊಂಡು ಹೋಗಬೇಕಾಯಿತು. ಅಷ್ಟರಲ್ಲಿ ಅವರಿಗೆ ಅದೆಷ್ಟು ಸುಸ್ತಾಗಿತ್ತೋ ಏನೋ.
ಪ್ರಕರಣ ಎರಡು: ಮಂತ್ರಿ ಮಾಲ್ ಮೆಟ್ರೊ ನಿಲ್ದಾಣ. ಟಿಕೆಟ್ ತೆಗೆದುಕೊಂಡು ಒಳಗೆ ಪ್ರವೇಶಿಸಿದ ನಂತರವಷ್ಟೇ ಶೌಚಾಲಯಕ್ಕೆ ಪ್ರವೇಶ. ಮದುವೆಗೆ ಜವಳಿ ಖರೀದಿಗೆಂದು ಬಂದಿದ್ದ ದಂಪತಿ ಅಲ್ಲಿಯಾದರೂ ಒತ್ತಡ ನೀಗಿಕೊಳ್ಳಬಹುದೆಂದು ಕುತೂಹಲಿಗಳಾಗಿದ್ದರು. ಟಿಕೆಟ್ ಕೌಂಟರ್ ಎದುರು ನಿಂತಿದ್ದ ಹತ್ತು ಮಂದಿಯನ್ನು ದಾಟುವಷ್ಟರಲ್ಲಿ ಅವರೂ ಮುಖ ಕಿವುಚಿಕೊಂಡೇ ನಿಂತಿದ್ದರು.
ಪ್ರಕರಣ ಮೂರು: ಯಶವಂತಪುರ ಮೆಟ್ರೊ ನಿಲ್ದಾಣ. ಟಿಕೆಟ್ ಖರೀದಿಸಿ, ಗೇಟು ಹಾದು ಒಳಗೆ ಹೋದ ಒಬ್ಬರು, ‘ಶೌಚಾಲಯ ಎಲ್ಲಿ?’ ಎಂದು ಕೇಳಿದರು. ‘ಅದು ಒಳಭಾಗದಲ್ಲಿ ಇಲ್ಲ, ಹೊರಗೆ ಹೋದ ನಂತರ ಸಿಗುತ್ತದೆ’ ಎಂದು ಭದ್ರತಾ ಸಿಬ್ಬಂದಿ ಹೇಳಿದರು. ಕಾರ್ಡ್ ತೋರಿಸಿದರೆ ಯಂತ್ರವು ‘ಅದೇ ನಿಲ್ದಾಣದಲ್ಲಿ ಪ್ರವೇಶ ಆಗಿದ್ದರಿಂದ ತಕ್ಷಣಕ್ಕೆ ಹೊರಗೆ ಬಿಡಲಾಗದು’ ಎಂಬ ಅರ್ಥದ ಇಂಗ್ಲಿಷ್ ಸಂದೇಶ ತೋರಿಸಿತು. ಅವರು ಭದ್ರತಾ ಸಿಬ್ಬಂದಿಯನ್ನು ವಿನಂತಿಸಿಕೊಂಡರು. ಅವರು, ‘ಏನೂ ಮಾಡಲು ಸಾಧ್ಯವಿಲ್ಲ, ಮುಂದಿನ ನಿಲ್ದಾಣದಲ್ಲಿ ಇಳಿದು ಹೋಗಿ’ ಎಂದುಬಿಟ್ಟರು.
ಪ್ರಕರಣ ನಾಲ್ಕು: ಮಹಾತ್ಮ ಗಾಂಧಿ ರಸ್ತೆಯಲ್ಲಿ ಬ್ರಿಗೇಡ್ ಜಂಕ್ಷನ್ ಕಡೆಯಿಂದ ಕುಂಬ್ಳೆ ಸರ್ಕಲ್ ಕಡೆಗೆ ಹೋಗುವ ಮಾರ್ಗದ ಮೆಟ್ರೊ ನಿಲ್ದಾಣದ ಪ್ರವೇಶ ದ್ವಾರದ ಬಳಿ ಓಡೋಡಿ ಬಂದ ಒಬ್ಬರು, ‘ರೆಸ್ಟ್ ರೂಮ್ ಎಲ್ಲಿದೆ?’ ಎಂದು ಕೇಳಿದರು. ರಸ್ತೆ ದಾಟಿಕೊಂಡು ಎದುರಿನ ಭಾಗಕ್ಕೆ ಹೋಗುವಂತೆ ಸೂಚಿಸಿದಾಗ, ಅವರು ಎಲ್ಲಿಯೂ ಬೋರ್ಡ್ ಕೂಡ ಇಲ್ಲವಲ್ಲ ಎಂದು ಸಂಕಟಪಡುತ್ತಾ ಹೆಜ್ಜೆ ಹಾಕಿದರು.
ಪ್ರಕರಣ ಐದು: ವೋಲ್ವೊ ಬಸ್‌ನಲ್ಲಿ ದಾವಣಗೆರೆಯಿಂದ ಬೆಂಗಳೂರಿಗೆ ಹೊರಟಿದ್ದು. ಹಿರಿಯೂರು ಬಳಿಯ ಹೋಟೆಲ್ ಒಂದರ ಎದುರು ಕೆಎಸ್ಆರ್‌ಟಿಸಿ ಬಸ್ ನಿಂತಿತು. ಕೆಟ್ಟ ಕಾಫಿಗೆ 30 ರೂಪಾಯಿ, ಇಡ್ಲಿ- ವಡೆಗೆ 80 ರೂಪಾಯಿ. ಅಲ್ಲಿ ಶೌಚಾಲಯ ಇರಲಿಲ್ಲ. ಪಕ್ಕದಲ್ಲಿ ಶುಲ್ಕ ಕೊಟ್ಟು, ಶೌಚಾಲಯಕ್ಕೆ ಹೋಗುವ ಇನ್ನೊಂದು ವ್ಯವಸ್ಥೆ ಇತ್ತು. ಬೆಂಗಳೂರಿನಿಂದ ದಾವಣಗೆರೆಗೆ ಹೋಗುವಾಗ ಬಸ್ ನಿಲ್ಲಿಸಿದ್ದ ಹೋಟೆಲ್ ಬಳಿ ಇದ್ದ ಶೌಚಾಲಯದಲ್ಲಿ ಶುಲ್ಕವನ್ನು ಕೊಟ್ಟಿರಲಿಲ್ಲ. ‘ಇಲ್ಲಿ ಮಾತ್ರ ಯಾಕೆ ಹೀಗೆ?’ ಎನ್ನುವುದಕ್ಕೆ ಕಂಡಕ್ಟರ್ ಬಳಿ ಉತ್ತರ ಇರಲಿಲ್ಲ.
ಇವೆಲ್ಲವೂ ನಮ್ಮ ಸಾರ್ವಜನಿಕ ಸಾರಿಗೆ ಹೇಗೆ ದೀರ್ಘಕಾಲಿಕ ಸಮಸ್ಯೆಯೊಂದನ್ನು ಇದುವರೆಗೆ ಉಪೇಕ್ಷಿಸಿದೆ ಎನ್ನುವುದಕ್ಕೆ ಕೆಲವು ಉದಾಹರಣೆಗಳಷ್ಟೆ. ಇತ್ತೀಚೆಗೆ ಲೋಕಸಭೆ ಕಲಾಪದಲ್ಲಿ ಮಾತನಾಡುತ್ತಾ, ಹೆದ್ದಾರಿಗಳಲ್ಲಿ ಪ್ರತಿ 40 ಕಿ.ಮೀ.ಗೆ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸುವ ಗುರಿ ಇದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭರವಸೆ ಕೊಟ್ಟರು. ಎಲ್ಲಾ ಟೋಲ್‌ಗಳ ಬಳಿಯಲ್ಲೂ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿಯೂ ತಿಳಿಸಿದರು. ಇದು ಎಷ್ಟರಮಟ್ಟಿಗೆ ಜಾರಿಗೆ ಬರುವುದೋ ನೋಡಬೇಕು.
ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್) ಇತ್ತೀಚೆಗೆ ಟಿಕೆಟ್ ದರವನ್ನು ವಿಪರೀತ ಏರಿಕೆ ಮಾಡಿದೆ. ಆದರೆ, ಎಲ್ಲ ನಿಲ್ದಾಣಗಳಲ್ಲಿ ಶೌಚಾಲಯಗಳನ್ನು ಗುಟ್ಟಾದ ಜಾಗಗಳಲ್ಲಿ ನಿರ್ಮಾಣ ಮಾಡಲಾಗಿದೆ. ಅದು ಎಲ್ಲಿದೆ ಎಂದು ಹುಡುಕುವುದು ಒಂದು ರೀತಿಯಲ್ಲಿ ‘ಟ್ರೆಷರ್ ಹಂಟ್’ ಆಟದಂತೆ.
ಒಂದು ನಿಲ್ದಾಣದಲ್ಲಿ ಟಿಕೆಟ್ ತೋರಿಸಿ ಪ್ರವೇಶ ಮಾಡಿದ ಮೇಲೆ ಶೌಚಾಲಯ ಇದ್ದರೆ, ಇನ್ನೊಂದು ನಿಲ್ದಾಣದಲ್ಲಿ ಟಿಕೆಟ್ ತೋರಿಸಿ ಒಳಕ್ಕೆ ಹೋಗುವ ಮೊದಲೇ ಶೌಚಾಲಯ ಇದೆ. ಇದರಲ್ಲಿಯೂ ಏಕಪ್ರಕಾರದ ವ್ಯವಸ್ಥೆ ಇಲ್ಲ.
ವಯಸ್ಸಾದವರು, ಮಧುಮೇಹ ಇರುವವರು ಶೌಚಾಲಯ ಬಳಸುವುದು ಅನಿವಾರ್ಯ. ಅದರಲ್ಲೂ ವಾತಾನುಕೂಲಿ ವ್ಯವಸ್ಥೆ ಇರುವ ಮೆಟ್ರೊದಲ್ಲಿ ಮೂತ್ರಕ್ಕೆ ಹೋಗಬೇಕು ಎಂದು ಅನಿಸುವುದು ಸಹಜವೇ ಆಗಿದೆ.
ಸಾರ್ವಜನಿಕರಿಂದ ಸಾರಿಗೆ ನಿಗಮಗಳು, ಬಿಎಂಆರ್‌ಸಿಎಲ್‌ನಂತಹ ವ್ಯವಸ್ಥೆಗಳು ಇಷ್ಟೆಲ್ಲ ಹಣವನ್ನು ಪೀಕುತ್ತಾ ಇದ್ದರೂ ಶೌಚಾಲಯದಂತಹ ಮೂಲಸೌಕರ್ಯ ಇನ್ನೂ ಮರೀಚಿಕೆಯೇ ಆಗಿರುವುದು ವ್ಯವಸ್ಥೆಯ ದೊಡ್ಡ ವ್ಯಂಗ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.