ADVERTISEMENT

ಸಂಗತ | ಅನುವಾದಿತ ಕನ್ನಡದ ವಿರಾಟ್‌ರೂಪ!

ಫಲಕಗಳಲ್ಲಿನ ದೋಷಪೂರಿತ ಕನ್ನಡವನ್ನು ಗಮನಿಸಿದರೆ, ನಮ್ಮ ಕನ್ನಡ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕಾದುದು ಅನಿವಾರ್ಯ ಎಂಬುದು ಅರಿವಿಗೆ ಬರುತ್ತದೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 1:57 IST
Last Updated 8 ಜುಲೈ 2020, 1:57 IST
   

ಸಂಚಾರ ಪೊಲೀಸರು ‘ನಾಲ್ಕು ವಾಹನಗಳಿಗೆ ಮಾತ್ರ’ ಎಂದು ಬೋರ್ಡ್‌ ಹಾಕಿರುವುದನ್ನು ನೋಡಿ ನೀವು, ಹೇಗೂ ಅಲ್ಲಿ ಮೂರು ವಾಹನಗಳಿವೆ, ಇನ್ನೊಂದನ್ನು ನಿಲ್ಲಿಸಲು ಅವಕಾಶವಿದೆ ಎಂದುಕೊಂಡು ನಿಮ್ಮ ಸ್ಕೂಟರನ್ನು ನಿಲ್ಲಿಸೀರಿ, ಜೋಕೆ! ಅದರ ಕೆಳಗೆ ಇರುವ ಇಂಗ್ಲಿಷ್ ಬರಹದಲ್ಲಿ ‘For Four Wheelers Only’ ಎಂದಿರುವುದನ್ನು ನೋಡಿ.

ಕನ್ನಡವನ್ನು ರಾಜ್ಯದಲ್ಲಿ ಇಂಥ ಸಾವಿರಾರು ಫಲಕಗಳಲ್ಲಿ ಕುಲಗೆಡಿಸಿರುವುದನ್ನು ಕಾಣಬಹುದು. ‘ಇಲ್ಲಿ ಮೂತ್ರ ತೇರ್ಗಡೆ ಹೊಂದಿಲ್ಲ’, ‘ಮೂತ್ರದ ಜಾಗವನ್ನು ಹಿಂದಕ್ಕೆ ಬದಲಾಯಿಸಲಾಗಿದೆ’ ಇತ್ಯಾದಿ ಅನುವಾದಿತ ಸೂಚನೆಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಯಾವ ನಿಘಂಟೂ ನಿಮ್ಮ ಸಹಾಯಕ್ಕೆ ಬರುವುದಿಲ್ಲ. ರಿಪೇರಿಯಾಗಬೇಕಾಗಿರುವುದು ನಮ್ಮ ಕನ್ನಡ ಜ್ಞಾನ!

ಕೌಶಲ ಅಭಿವೃದ್ಧಿ ಇಲಾಖೆಯ ಜಾಲತಾಣದಲ್ಲಿ ಕನ್ನಡ ಭಾಷೆಯನ್ನು ಬೇಜವಾಬ್ದಾರಿಯಿಂದ ಬಳಸಿರುವುದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದುಕನ್ನಡ ಅಭಿವೃದ್ಧಿ ಪ್ರಾಧಿಕಾರವು ಉಪಮುಖ್ಯಮಂತ್ರಿಯವರನ್ನು ಆಗ್ರಹಿಸಿದೆ
(ಪ್ರ.ವಾ., ಜುಲೈ 5). ಈ ಬೆಳಕಿನಲ್ಲಿ ನಾವು, ಕನ್ನಡದ ಮರ್ಯಾದೆಯು ಸಾರ್ವಜನಿಕವಾಗಿ ಹೇಗೆ ಹೋಗುತ್ತಿದೆ ಎನ್ನುವುದನ್ನು ನೋಡೋಣ.

ADVERTISEMENT

ಸದ್ಯಕ್ಕೆ ಕೇವಲ ಹೊರಗೆ ಪ್ರದರ್ಶಿಸಲಾಗುವ ಫಲಕಗಳನ್ನು ಗಮನಿಸೋಣ. ರಾಜ್ಯದಲ್ಲಿನ ಅಂಗಡಿ, ಹೋಟೆಲು ಮತ್ತಿತರ ವಾಣಿಜ್ಯ, ಸೇವೆ ಹಾಗೂ ಸರ್ಕಾರಿ ಸಂಸ್ಥೆಗಳ ಸಾವಿರಾರು ಫಲಕಗಳಲ್ಲಿ ಅಶುದ್ಧ ಕನ್ನಡ ಪದಗಳ ಬಳಕೆಯಾಗುತ್ತಿದೆ.ಇದನ್ನು ಬರೀ ಕೆಲವು ಫಲಕಗಳಲ್ಲಿ ಕಂಡುಬರುವ ದೋಷ ಎಂದುಕೊಳ್ಳುವ ಬದಲಿಗೆ, ನಾವು ಪ್ರಾಥಮಿಕ ಮಟ್ಟದಲ್ಲಿ ಕನ್ನಡ ಕಲಿಸುತ್ತಿರುವ ಬಗೆಯನ್ನು ಇವು ಪ್ರತಿಬಿಂಬಿಸುತ್ತವೆ ಎಂದು ಗಂಭೀರವಾಗಿ ತೆಗೆದುಕೊಳ್ಳಬೇಕು.

ಇಂಥ ಫಲಕಗಳನ್ನು ವಿಶ್ಲೇಷಿಸಿದಾಗ ಕಂಡುಬರುವ ಸರಳವಾದ ದೋಷಗಳೆಂದರೆ: ಅಕ್ಷರಗಳನ್ನು ತಪ್ಪಾಗಿ ಗುರುತಿಸುವುದು ಮತ್ತು ಕಾಗುಣಿತ ತಪ್ಪುಗಳು (ಕಾನುನು, ಸಲಹೇಗಾರರು, ನಿವೇಷನ), ಇನ್ನು ಕೆಲವು ಪದಗಳ ವಿಂಗಡಣೆಯಲ್ಲಾಗುವ ತಪ್ಪುಗಳು (ಜಲ ಮಂಡಳಿ, ಪದವಿ ಪೂರ್ವ ಕಾಲೇಜು, ವಿಧಾನ ಸೌಧ). ಹೆಚ್ಚಿನ ದೋಷಗಳು ಕಂಡುಬರುವುದು ಉಚ್ಚಾರಣೆಯಲ್ಲಿ. ಹೆಚ್ಚಿನವರ ಮಾತಿನಲ್ಲಿ ಅಲ್ಪಪ್ರಾಣ ಬಳಸುವ ಕಡೆ ಮಹಾಪ್ರಾಣವನ್ನು ಬಳಸಲಾಗುತ್ತದೆ. ಪ್ರಾಥಮಿಕ ತರಗತಿಯಲ್ಲೇ ಇದನ್ನು ಸರಿಪಡಿಸಿಕೊಳ್ಳಬೇಕು. ವಿಪರ್ಯಾಸವೆಂದರೆ, ಅಲ್ಲಿ ಕಲಿಸುವ ಕೆಲವು ಶಿಕ್ಷಕರೂ ‘ಅಲ್ಪಪ್ರಾಣಿ’ಗಳೇ ಆಗಿರುತ್ತಾರೆ. ಮುಂದೆ ಇದು, ಬರವಣಿಗೆಯಲ್ಲಿನ ದೋಷವಾಗಿ ಪರಿವರ್ತಿತವಾಗುತ್ತದೆ. ವಿದಾನ ಸೌದ, ಸ್ವಚ್ಚ ಭಾರತ, ನಿದನವಾಗಿ ಚಲಿಸಿ, ಸಾಲ ಸೌಲಬ್ಯ, ದೂಮಪಾನ ನಿಷೇದಿಸಿದೆ ಇತ್ಯಾದಿ ಫಲಕಗಳು ಇದಕ್ಕೆ ಉದಾಹರಣೆಗಳು.

ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕನ್ನಡ ‘ಅಸೈನ್ಮೆಂಟ್’ ಕಳಿಸಿದ ಶಿಕ್ಷಕಿಯೊಬ್ಬರು ‘ಸರಿಯಾದ ಉಚ್ಛಾರಣೆಯನ್ನು ಮಕ್ಕಳಿಗೆ ಕಲಿಸಿ’ ಎಂದು ಬರೆದಿದ್ದರು. ಈ ಶಿಕ್ಷಕಿ ಬಿಡಿ, ರಾಜ್ಯದ ಹೈಕೋರ್ಟ್ ಕಟ್ಟಡದ ಹಣೆಪಟ್ಟಿಯ ಮೇಲೆ ದೊಡ್ಡದಾಗಿ, ‘ಉಚ್ಛ ನ್ಯಾಯಾಲಯ’ ಎಂದಿತ್ತು. ಇತ್ತೀಚೆಗೆ ಅದನ್ನು ‘ಉಚ್ಚ ನ್ಯಾಯಾಲಯ’ ಎಂದು ಸರಿಪಡಿಸಿದ್ದಾರೆ.

ಈಗ ಕೇಂದ್ರ ಸರ್ಕಾರದ ಕಚೇರಿಗಳಲ್ಲಿಯೂ ಫಲಕಗಳು ಮತ್ತು ಸೂಚನೆಗಳನ್ನು ಇಂಗ್ಲಿಷ್, ಹಿಂದಿ ಮತ್ತು ಕನ್ನಡದಲ್ಲಿ ಹಾಕಬೇಕು ಎಂದಿದೆ. ಆದರೆ, ಇಂಥ ಸಂಸ್ಥೆಗಳಲ್ಲಿ ಕನ್ನಡ ಸೂಚನೆಗಳನ್ನು ಕನ್ನಡದಲ್ಲಿಯೇ ಆಲೋಚಿಸಿ ಬರೆಯದೆ, ಇಂಗ್ಲಿಷ್ ಬರಹವನ್ನು ಅನುವಾದಿಸಿ ಹಾಕಲಾಗುತ್ತದೆ. ನೇರವಾಗಿ ಕನ್ನಡವನ್ನು ಬರೆಯುವುದಕ್ಕೇ ಬಾರದ ಸ್ಥಿತಿಯಲ್ಲಿ ಅನುವಾದ ಇನ್ನೂ ಕಷ್ಟ. ‘ಇಲ್ಲ, ಸುಲಭ’ ಎನ್ನುತ್ತಾರೆ ಇವರು. ಇವರೆಲ್ಲಾ ‘ಗೂಗಲ್ ಟ್ರಾನ್ಸ್‌ಲೇಟ್‌’ನಂಥ ಅದ್ಭುತದಲ್ಲಿ ಈ ಕಡೆಯಿಂದ ಹಾಕಿ ಆ ಕಡೆ ಬರುವುದನ್ನು ಯಥಾವತ್ ಒಪ್ಪಿಕೊಳ್ಳುವುದರಿಂದಲೂ ಹಲವಾರು ವಿರೂಪ ಬಳಕೆಗಳು ಚಾಲ್ತಿಗೆ ಬಂದುಬಿಡುತ್ತವೆ. ಗೂಗಲ್ ಟ್ರಾನ್ಸ್‌ಲೇಟ್‌ ತಂತ್ರಾಂಶವು ತಕ್ಕಮಟ್ಟಿಗೆ ಕೆಲಸ ಮಾಡುತ್ತದೆ, ಆದರೂ ಅದು ಒದಗಿಸಿದ ಅನುವಾದವನ್ನು ಪರಿಷ್ಕರಿಸಬೇಕಾಗುತ್ತದೆ. ಆಗ ನಮ್ಮ ಕನ್ನಡದ ಸಾಮರ್ಥ್ಯಕ್ಕೆ ಮತ್ತೆ ಸವಾಲು ಎದುರಾಗುತ್ತದೆ. ಇಲ್ಲವಾದರೆ, ಸೇವೆಯಿಂದ ಹೊರಬಂದಿದೆ (ಔಟ್ ಆಫ್ ಸರ್ವಿಸ್)’, ಧೂಮಪಾನ ವಲಯವಿಲ್ಲ (ನೋ ಸ್ಮೋಕಿಂಗ್ ಝೋನ್), ಇಲ್ಲಿ ಅಡ್ಡ ದಾನ ಮಾಡಬೇಡಿ (ಡು ನಾಟ್ ಕ್ರಾಸ್ ಹಿಯರ್) ಇತ್ಯಾದಿ ಪ್ರಯೋಗಗಳನ್ನು ಕನ್ನಡವೆಂದು ಒಪ್ಪಿಕೊಳ್ಳಬೇಕಾಗುತ್ತದೆ.

ಇಂಥ ಫಲಕಗಳ ಕುರಿತು ನಾವು ಬರೀ ಟೀಕೆ, ಟಿಪ್ಪಣಿ, ಅಪಹಾಸ್ಯವನ್ನು ಮಾಡುವುದಕ್ಕಿಂತ ಸ್ಥಿತಿಯನ್ನು ಉತ್ತಮಗೊಳಿಸಲು ಸಹಾಯ ಮಾಡಬಹುದಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಕಚೇರಿಗಳಿವೆ. ಒಂದು ಕಡೆ ಅವರು ತಮ್ಮ ಜಿಲ್ಲೆಯಲ್ಲಿರುವ ಭಾಷಾ ಪರಿಣತರನ್ನು ಗುರುತಿಸಿ ಒಂದು ಯಾದಿಯನ್ನು ತಯಾರಿಸುವುದು, ಅವರ ನೆರವನ್ನು ಪಡೆಯುವುದು; ಇನ್ನೊಂದು ಕಡೆ, ಸಾರ್ವಜನಿಕವಾಗಿ ಹೀಗೆ ಫಲಕಗಳನ್ನು ಹಾಕುವವರು ಅದರ ಒಕ್ಕಣೆಗೆ ಈ ಇಲಾಖೆಯ ಸಹಮತಿಯನ್ನು ಪಡೆಯಬೇಕು ಎಂಬ ನಿಬಂಧನೆಯನ್ನು ಹೇರುವುದು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಇಡೀ ಪ್ರಕ್ರಿಯೆಗೆ ಒಂದು ಆಡಳಿತಾತ್ಮಕ ರೂಪವನ್ನು ಕೊಡುವುದು. ಕನ್ನಡವು ಸಾರ್ವಜನಿಕ ವಲಯದಲ್ಲಿ ಸರಿಯಾಗಿ ಬಳಕೆಗೆ ಬರುವಂತಾಗಲು ಇದೊಂದು ಚಿಕ್ಕ, ಆದರೆ ಮಹತ್ವದ ಹೆಜ್ಜೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.