ADVERTISEMENT

ಸಂಗತ | ಯುಪಿಎಸ್‌ಸಿ: ಪರೀಕ್ಷೆಯೇ ಸೋತರೆ...

‘ಯುಪಿಎಸ್‌ಸಿ ಪರೀಕ್ಷೆ’ ಲಕ್ಷಾಂತರ ವಿದ್ಯಾರ್ಥಿಗಳ ಜೀವಮಾನದ ಕನಸು. ಈ ಪರೀಕ್ಷಾ ಪದ್ಧತಿಯನ್ನು ಪರಿಷ್ಕರಿಸುವುದು, ಮಾನವೀಯಗೊಳಿಸುವುದು ಅಗತ್ಯ.

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 20:38 IST
Last Updated 5 ಆಗಸ್ಟ್ 2025, 20:38 IST
.
.   

ಭಾರತದ ಬಹುಪಾಲು ವಿದ್ಯಾರ್ಥಿಗಳ ದೊಡ್ಡ ಕನಸುಗಳಲ್ಲಿ ‌
‘ಭಾರತೀಯ ನಾಗರಿಕ ಸೇವೆ’ಗಳ (ಯುಪಿಎಸ್‍ಸಿ) ಪರೀಕ್ಷೆಯನ್ನು ಪಾಸು ಮಾಡುವುದೂ ಒಂದು. ಯುಪಿಎಸ್‍ಸಿ ಪರೀಕ್ಷೆಯನ್ನು ಪಾಸು ಮಾಡುವುದು ದೇಶ ಸೇವೆಯ ಆದರ್ಶದೊಟ್ಟಿಗೆ ಒಂದು ಲಾಭದಾಯಕ ಉದ್ಯೋಗದ ಆಯ್ಕೆಯಾಗಿ ಕಾಣಿಸುತ್ತಿದ್ದ ದಿನಗಳಿದ್ದವು. ಪ್ರಸ್ತುತ, ಸೇವೆಯ ಅಂಶ ಉಳಿದಿದ್ದರೂ ಯುಪಿಎಸ್‍ಸಿ ಒಂದು ಲಾಭದಾಯಕ ಉದ್ಯೋಗದ ಆಯ್ಕೆಯಾಗಿಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲಗಳನ್ನು ಕಲಿತು ಗಳಿಸಬಹುದಾದ ಹಣ, ಅಂತಸ್ತಿಗೆ ಯುಪಿಎಸ್‍ಸಿ ಸರಿದೂಗುವುದಿಲ್ಲ. ಹಾಗಿದ್ದೂ ಲಕ್ಷಾಂತರ ಯುವಕ, ಯುವತಿಯರು ಈ ಪರೀಕ್ಷೆಯ ಹಿಂದೆ ಬಿದ್ದಿದ್ದಾರೆ. ಇದು ನಿರುದ್ಯೋಗದ ಲಕ್ಷಣದಂತೆಯೇ, ಸಾಮಾಜಿಕ ಸ್ಥಾನಮಾನದಲ್ಲಿ ಒಂದು ಜಿಗಿತವನ್ನು ಪಡೆಯುವ ಪ್ರಯತ್ನವೂ ಹೌದು.

ಯುಪಿಎಸ್‍ಸಿ ಪರೀಕ್ಷೆಯ ಸಾಗರಕ್ಕೆ ಜಿಗಿದ ಎಷ್ಟೋ ವಿದ್ಯಾರ್ಥಿಗಳಿಗೆ ಅದರ ಆಳ ಗೊತ್ತಿರುವುದಿಲ್ಲ. ವಿವಿಧ ಸಾಮಾಜಿಕ ಹಿನ್ನೆಲೆಯ ಅಭ್ಯರ್ಥಿಗಳ ನಡುವೆ ಕೆಲವರಿಗೆ ಮಾತ್ರ ಲಭ್ಯವಿರುವ ಕಲಿಕೆಯ ಅವಕಾಶಗಳು ‘ಲೈಫ್ ಜಾಕೆಟ್’ ಇದ್ದಂತೆ. ಲೈಫ್ ಜಾಕೆಟ್ ಇಲ್ಲದೆ ಈಜಲು ಹೊರಟ ಏಕಾಂಗಿವೀರರ ಕಥೆಯನ್ನು ಯಾರು ಕೇಳಬೇಕು.

ಯುಪಿಎಸ್‍ಸಿ ಪರೀಕ್ಷೆಯ ವಿಷಯದಲ್ಲಿ ಕನಿಷ್ಠ ಚರ್ಚೆಗೆ ಒಳಗಾಗಿರುವ ವಿಷಯ: ಪರೀಕ್ಷೆ ಪಾಸಾಗದೆ ಹೋದ ಅಭ್ಯರ್ಥಿಗಳು ಅನುಭವಿಸುವ ಮಾನಸಿಕ ಹಿಂಸೆ ಮತ್ತು ಹಿನ್ನಡೆ. ತನ್ನ ಸೋಲನ್ನು ಒಂದು ವ್ಯವಸ್ಥೆಯ ವೈಫಲ್ಯ ಎಂದು ಗ್ರಹಿಸಲಾಗದ ಅಭ್ಯರ್ಥಿ, ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ತನ್ನ ಮೇಲೆಯೇ ಹೇರಿಕೊಳ್ಳುವುದು ಮಾನಸಿಕ ಒತ್ತಡಕ್ಕೆ ಮತ್ತು ಹಿನ್ನಡೆಗೆ ಕಾರಣವಾಗುತ್ತದೆ.

ADVERTISEMENT

ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನಿಂದ ಪದವಿ ಪಡೆದು ಮೊದಲ ಬಾರಿ ಪರೀಕ್ಷೆ ಬರೆಯುತ್ತಿರುವ 21 ವರ್ಷ ವಯಸ್ಸಿನ ಮೇಲ್ಮಧ್ಯಮ ವರ್ಗಕ್ಕೆ ಸೇರಿದ ವಿದ್ಯಾರ್ಥಿಗೂ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ, ಹಿಂದುಳಿದ ಪ್ರದೇಶ ಮತ್ತು ಜಾತಿಗೆ ಸೇರಿದ ಹಾಗೂ ತನ್ನ ಕೊನೆಯ ಪ್ರಯತ್ನದಲ್ಲಿರುವ 30 ವರ್ಷದ ವಿದ್ಯಾರ್ಥಿಗೂ ಇರುವ ಸಂದರ್ಭ ಹಾಗೂ ಅನುಕೂಲದಲ್ಲಿ ಯಾವುದೇ ಸಾಮ್ಯತೆ ಇರುವುದಿಲ್ಲ. ಪರೀಕ್ಷೆ ಒಂದೇ ಆದರೂ, ಪರೀಕ್ಷೆಯ ಅನಿಶ್ಚಿತ ಅಂತ್ಯದಿಂದ ಅವರು ಎದುರುಗೊಳ್ಳಲಿರುವ ಭವಿಷ್ಯ ಬೇರೆ ಬೇರೆ. ಹೊರ ದೇಶದಲ್ಲಿ ಶಿಕ್ಷಣ ಪಡೆಯುವ ಸವಲತ್ತುಗಳು ಒಬ್ಬರಿಗಿದ್ದರೆ, ಸತತ ಸೋಲಿನಿಂದ ಕಂಗೆಟ್ಟು ನಿರುದ್ಯೋಗ ಪರ್ವಕ್ಕೆ ತಯಾರಾಗುವುದು ಇನ್ನೊಬ್ಬ ವಿದ್ಯಾರ್ಥಿಗೆ ಕಟ್ಟಿಟ್ಟ ಬುತ್ತಿ. ಈ ವಿಷಯ ಕೇವಲ ಜಾತಿ– ವರ್ಗಗಳಿಗಷ್ಟೇ ಸೇರದೆ ಲಿಂಗ, ವಯಸ್ಸನ್ನು ಮೀರಿದ ಜಟಿಲ ಸಮಸ್ಯೆಯಾಗಿದೆ.

ಯುಪಿಎಸ್‍ಸಿ ಪರೀಕ್ಷೆಯ ಇನ್ನೊಂದು ದುರಂತವೆಂದರೆ, ಪ್ರತಿಷ್ಠಿತ ಸೇವೆಗಳಾದ ಐಎಎಸ್, ಐಪಿಎಸ್, ಐಎಫ್ಎಸ್ ಸ್ಥಾನವನ್ನು ಸೇರುವ ಸಲುವಾಗಿ ಪರೀಕ್ಷೆಯನ್ನು ಪಾಸಾಗಿದ್ದರೂ, ಆ ಸೇವೆಗಳು ದೊರಕದ ಅಭ್ಯರ್ಥಿಗಳು ಮರು
ಪ್ರಯತ್ನದಲ್ಲಿ ತೊಡಗುವ ಅನಿವಾರ್ಯತೆ ರೂಪುಗೊಳ್ಳುವುದು.

ಹೊಸ ಅವಕಾಶಗಳಿಗೆ ತೆರೆದುಕೊಳ್ಳುವ, ಹೊಸ ಕೌಶಲಗಳನ್ನು ಕಲಿಯಬಹುದಾದ, ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳ ಬೇಕಾದ ಬದುಕಿನ ಮುಖ್ಯ ಕಾಲಘಟ್ಟ ದಲ್ಲಿ ಪರೀಕ್ಷೆಯೊಂದರ ಸಲುವಾಗಿ ಅಭ್ಯರ್ಥಿಯೊಬ್ಬ ದಿನದ ಎರಡನೇ ಒಂದು ಭಾಗವನ್ನು ಓದುತ್ತಾ ಕಳೆಯಬೇಕೆ? ಅಷ್ಟು ಕಷ್ಟಪಟ್ಟು ಪಾಸು ಮಾಡಬೇಕಾದ ಪರೀಕ್ಷೆಯನ್ನಾಗಿ ಯುಪಿಎಸ್‍ಸಿಯನ್ನು ಯಾಕೆ ರೂಪಿಸಿದ್ದೇವೆ? ಪರಾನುಭೂತಿ ಕಾಣೆಯಾಗುತ್ತಿರುವ ಈ ಜಗತ್ತಿನಲ್ಲಿ ಸೇವೆಯ ಉದ್ದೇಶ ಹೊಂದಿರುವ ವ್ಯಕ್ತಿಯೊಬ್ಬ ನಾಗರಿಕ ಸೇವೆ ಸೇರಲು ಇಂತಹ ಕಷ್ಟದ ಪರೀಕ್ಷೆಯನ್ನು ಯಾಕೆ ಬರೆಯಬೇಕು?

ಲಕ್ಷಾಂತರ ಜನರು ಬರೆಯುವ ಪೂರ್ವಭಾವಿ ಪರೀಕ್ಷೆಯನ್ನು ಇಂದು ಚಾಟ್‌ಜಿಪಿಟಿ ರೀತಿಯ ಕೃತಕ ಬುದ್ಧಿಮತ್ತೆ ತಂತ್ರಾಂಶವೂ ಬರೆದು ಪಾಸು ಮಾಡಬಲ್ಲದು. ಅದರ ಅರ್ಥ, ಲಕ್ಷಾಂತರ ಅಭ್ಯರ್ಥಿಗಳನ್ನು ಅಳೆಯುತ್ತಿರುವ ಮಾಪಕವನ್ನು ಒಂದು ಕೃತಕ ಬುದ್ಧಿಮತ್ತೆ ಸಲೀಸಾಗಿ ಮೀರಿ ಮುನ್ನುಗ್ಗಬಹುದು. ಸ್ಮರಣ ಶಕ್ತಿಯನ್ನು ಪರೀಕ್ಷಿಸುವಂತಿರುವ ಈ ವಿಧಾನ ಮನುಷ್ಯನಿಗೆ ಮಾಡುವ ಅವಮಾನ ಎನ್ನುವುದಕ್ಕಿಂತ, ಅವನ ಪರಿಶ್ರಮವನ್ನು ಅಲ್ಲಗಳೆಯುವ ಸಾಧನ ಎನ್ನಬಹುದು.

ಯುಪಿಎಸ್‍ಸಿ ಪರೀಕ್ಷೆಯಲ್ಲಿ ‘ನೀತಿಶಾಸ್ತ್ರ’ (ಎಥಿಕ್ಸ್) ಪತ್ರಿಕೆ ಬರೆದ ಎಲ್ಲರೂ ಇಂದು ಸತ್ಯಸಂಧರಾಗಿಯೇನೂ ಬದುಕುತ್ತಿಲ್ಲ. ಪರೀಕ್ಷೆ ಬರೆಯುವ ಎಳೆವಯಸ್ಸಿನಲ್ಲಿ ಅವರಿಗೆ ಇರಬಹುದಾದ ಲೋಕದೃಷ್ಟಿಗೂ, ಸೇವೆಯ ಭಾಗವಾದ ನಂತರದ ಲೋಕದೃಷ್ಟಿಗೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಹಾಗಾಗಿ, ಯುಪಿಎಸ್‍ಸಿ ಪರೀಕ್ಷೆಗೆ ನಿಗದಿಯಾಗಿರುವ ಅರ್ಹತಾ ವಯಸ್ಸನ್ನು ಮರು ಪರಿಶೀಲಿಸುವುದು ಉತ್ತಮ. ಆಗಷ್ಟೇ ಪದವಿ ಮುಗಿಸಿದ ವಿದ್ಯಾರ್ಥಿಗಳಿಗಿಂತ, ಒಂದಷ್ಟು ವರ್ಷ ಕೆಲಸ ಮಾಡಿ ಲೋಕಾನುಭವ ಪಡೆದ ಯುವ ವಯಸ್ಕರು ನಾಗರಿಕ ಸೇವೆಯಲ್ಲಿರುವುದು ಸೂಕ್ತ.  

ಜವಾಬ್ದಾರಿಯುತ ಸಮಾಜವೊಂದು ಯುಪಿಎಸ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಅಭ್ಯರ್ಥಿಗಳನ್ನು ಸನ್ಮಾನಿಸುವುದಕ್ಕಿಂತ ಮುಖ್ಯವಾಗಿ, ಪದೇ ಪದೇ ಪರೀಕ್ಷೆ ಎದುರಿಸುತ್ತ ಸೋಲಿನ ವಿಷ ವೃತ್ತದಲ್ಲಿ ಸಿಲುಕಿ
ಕಂಗೆಟ್ಟಿರುವವರ ಕಡೆ ಕಣ್ಣು ಹಾಯಿಸಬೇಕು. ಸಾರ್ವಜನಿಕ ಸೇವೆಯಲ್ಲಿ ಆಸಕ್ತಿ ಇರುವ ಯುವಶಕ್ತಿಯನ್ನು ಕಾರ್ಯಾಂಗದ ಭಾಗ ಆಗಿಸಿಕೊಳ್ಳುವ ಉದ್ದೇಶ ಸರ್ಕಾರಕ್ಕಿದ್ದಲ್ಲಿ, ಯುಪಿಎಸ್‍ಸಿ ಪರೀಕ್ಷೆಯ ಚಹರೆಯನ್ನು ಬದಲಿಸ ಬೇಕಾಗುತ್ತದೆ. ಯುವಶಕ್ತಿಯ ಸದ್ವಿನಿಯೋಗ ಸರ್ಕಾರಕ್ಕೆ ಬೇಕಾಗಿದ್ದಲ್ಲಿ ಸದ್ಯಕ್ಕೆ ಆಗಬೇಕಿರುವುದು ‘ಯುಪಿಎಸ್‍ಸಿ’ ಪರೀಕ್ಷೆಯ ನಿರ್ವಚನ ಹಾಗೂ ಪರಿಷ್ಕಾರ.

–ಲೇಖಕ: ‘ಐಐಟಿ ಬಾಂಬೆ’ಯಲ್ಲಿ ಪಿಎಚ್‌.ಡಿ. ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.