‘ಹಳ್ಳಿಗಳಲ್ಲಿ, ಕೊಳೆಗೇರಿಗಳಲ್ಲಿ ಇರುವವರೇ ಮೇಲು. ಮಾಹಿತಿ ಜೊತೆಗೆ ಲೋಟ ನೀರಾದರೂ ಕೊಡುತ್ತಾರೆ. ಪ್ರೀತಿಯಿಂದ ಮಾತನಾಡುತ್ತಾರೆ. ನಗರ ಪ್ರದೇಶದಲ್ಲಿ, ಶ್ರೀಮಂತರು ಹೆಚ್ಚಿರುವ ಬಡಾವಣೆಗಳಲ್ಲಿ ಅವಮಾನ ಮತ್ತು ಅನುಮಾನ ಎದುರಾಗುವುದೇ ಹೆಚ್ಚು’ ಎಂದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತೊಡಗಿಕೊಂಡಿರುವ ಕೆಲವು ಸಮೀಕ್ಷಕರು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ.
ಬಂಗಲೆಗಳ ಒಳಗೆ ಹೋಗಲು ಅವಕಾಶವಿಲ್ಲ. ನಾಯಿ ಮತ್ತು ವಾಚ್‌ಮನ್ ದಾಟಿಕೊಂಡು ಒಳಗೆ ಹೋದರೂ ಅಲ್ಲಿನ ನಿವಾಸಿಗಳಿಗೆ ಸಮೀಕ್ಷೆ ಬಗ್ಗೆ ಯಾವ ಆಸಕ್ತಿ ಇಲ್ಲ, ನಂಬಿಕೆಯೂ ಇಲ್ಲ. ನಗರದಲ್ಲಿದ್ದರೂ ಅನಾಗರಿಕರಂತೆ ವರ್ತಿಸುತ್ತಾರೆ... ಹೀಗೆ, ನಗರಿಗರ ಕುರಿತು ಹತ್ತಾರು ದೂರುಗಳು ಕೇಳಿಬರುತ್ತಿವೆ. ಈ ವಿದ್ಯಮಾನವನ್ನು ನಗರದವರ ಅನಾಗರಿಕ ವರ್ತನೆ ಅಥವಾ ಸೌಜನ್ಯದ ಕೊರತೆ ಎಂದಷ್ಟೇ ನೋಡದೆ, ನಗರ ಮತ್ತು ಗ್ರಾಮೀಣ ಭಾರತದ ನಡುವಿನ ಮನೋವೈಜ್ಞಾನಿಕ ಮತ್ತು ಆರ್ಥಿಕ ಕಂದಕದ ದೃಷ್ಟಿಕೋನದಿಂದ ವಿಶ್ಲೇಷಿಸುವುದು ಅಗತ್ಯ.
ಹಳ್ಳಿಯ ಮತ್ತು ಬಡ ಸಮುದಾಯಗಳು ಸರ್ಕಾರದ ಯೋಜನೆಗಳು ಮತ್ತು ಸಬ್ಸಿಡಿಗಳ ಮೇಲೆ ಹೆಚ್ಚು ಅವಲಂಬಿತವಾಗಿರುತ್ತವೆ. ಪಡಿತರ, ನರೇಗಾ ಅಥವಾ ಸಂಧ್ಯಾ ಸುರಕ್ಷಾ ಸೇರಿದಂತೆ ಯಾವುದೋ ಒಂದು ಸರ್ಕಾರಿ ಯೋಜನೆಯ ಲಾಭವನ್ನು ಗ್ರಾಮೀಣ ಕುಟುಂಬಗಳು ಪಡೆಯುತ್ತಿರುತ್ತವೆ. ‘ಸರ್, ಒಂದು ಬಿಪಿಎಲ್ ಕಾರ್ಡ್ ಬರೋ ಹಾಗೆ ಮಾಡಿ’, ‘ಅರವತ್ತು ವರ್ಷ ಆಗಿದೆ, ಸಂಬಳ ಬರುವ ಹಾಗೆ ಮಾಡಿ’, ಈ ತರಹದ ಕೋರಿಕೆಗಳನ್ನು ಹಳ್ಳಿಗರು ಸಮೀಕ್ಷಾದಾರರ ಮುಂದಿಡುತ್ತಿದ್ದಾರೆ. ತಮ್ಮ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಸುಧಾರಿಸಲಿ ಎಂಬ ಆಶಾವಾದ ಅವರನ್ನು ಸಮೀಕ್ಷೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಂತೆ ಮಾಡುತ್ತಿರಬಹುದು. ಸರ್ಕಾರ ನಮಗೇನೊ ಒಳ್ಳೆಯದು ಮಾಡುತ್ತದೆ ಎಂಬ ನಂಬಿಕೆ ಅದು.
ಇದೆಲ್ಲಕ್ಕಿಂತ ಮುಖ್ಯವಾಗಿ, ಹಳ್ಳಿಗರ ಒಳ್ಳೆಯತನ ಬಂದದ್ದು ನೆಲದ ಮೂಲದಿಂದ. ಅವರು ಪ್ರಕೃತಿಗೆ ಹತ್ತಿರದ ಜನ. ಉಳುಮೆ, ಬೆಳೆ, ಪ್ರಾಣಿಗಳ ಒಡನಾಟ, ಕೂಡಿ ಬದುಕುವ ರೀತಿ, ಅವರಲ್ಲಿ ಇಂದಿಗೂ ಒಳ್ಳೆಯತನ ಉಳಿಸಿವೆ. ಅವರ ಮುಗ್ಧತೆ, ಪ್ರಾಮಾಣಿಕತೆಗಳು ಇನ್ನೂ ಉಳಿದಿವೆ.
ನಗರದ ಜನರಿಗೆ ‘ಸಮಾಜ’ ಎನ್ನುವುದಕ್ಕಿಂತ, ನನ್ನ ವೃತ್ತಿ, ನನ್ನ ಮನೆ ಮತ್ತು ನನ್ನ ಕುಟುಂಬ ಮುಖ್ಯ ಎನ್ನುವ ಭಾವನೆ ಹೆಚ್ಚು. ಸಮೀಕ್ಷೆಯು ಒಂದು ‘ಸಾಮಾಜಿಕ ಕಾರ್ಯ’ ಆಗಿದ್ದರೂ, ಅವರು ಅದನ್ನು ನನ್ನ ವೈಯಕ್ತಿಕ ಸಮಯವನ್ನು ಹಾಳು ಮಾಡುವ ಒಂದು ಕಿರಿಕಿರಿ ಎಂದು ಭಾವಿಸುವುದಿದೆ.
ಸಮೀಕ್ಷಕರು ಪ್ರಶ್ನೆ ಕೇಳಿದಾಗ, ‘ನೀವು ನಮ್ಮ ಸಾಲ ತೀರಿಸ್ತೀರಾ?’ ಎಂದು ಕೇಳುವ ಪ್ರಶ್ನೆ ಕೇವಲ ವ್ಯಂಗ್ಯದ್ದಲ್ಲ. ಆ ಪ್ರಶ್ನೆ, ಹಣಕಾಸಿನ ವಿಚಾರದಲ್ಲಿ ಅವರಲ್ಲಿರುವ ತೀವ್ರ ಅನುಮಾನ ಮತ್ತು ಅಸುರಕ್ಷಿತ ಭಾವನೆಯನ್ನು ಸೂಚಿಸುತ್ತದೆ. ಅವರು ತಮ್ಮ ಕಠಿಣ ಪರಿಶ್ರಮದಿಂದ ಗಳಿಸಿದ ಸಂಪತ್ತು ಅಥವಾ ಸಾಲದ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಇದು ‘ನಗರ ಮನಸು’.
ನಮ್ಮ ಈಗಿನ ಶಿಕ್ಷಣ ಕ್ರಮವು ಮೌಲ್ಯಕ್ಕಿಂತಲೂ ಹೆಚ್ಚಾಗಿ ‘ಲಾಭ’ ಕೇಂದ್ರೀಕೃತವಾಗಿದೆ. ಅದು ಪ್ರತಿ ಕೆಲಸವನ್ನೂ ‘ನನಗೆ ಇದರಿಂದ ಏನು ಪ್ರಯೋಜನ?’ ಎಂಬ ಮಾನದಂಡದಲ್ಲಿ ಅಳೆಯಲು ಕಲಿಸಿದೆ. ಶಿಕ್ಷಣವು ಬದುಕುವ ರೀತಿಯನ್ನು ಕಲಿಸುತ್ತಿಲ್ಲ. ಹೆಚ್ಚು ಓದಿದವರು ನಗರದಲ್ಲೇ ಇರುವುದರಿಂದ ಅವರ ಮನಸು ‘ಲಾಭ’ದ ಕಡೆ ಕೇಂದ್ರೀಕೃತವಾಗಿರುವುದು ಅಸಹಜವೇನಲ್ಲ.
ಸಮೀಕ್ಷೆಗೆ ಸಹಕರಿಸುವುದರಿಂದ ತಮ್ಮ ವೈಯಕ್ತಿಕ ವಿಚಾರಕ್ಕೆ ಯಾವುದೇ ನೇರ ಲಾಭವಿಲ್ಲದ ಕಾರಣ, ಅದನ್ನು ‘ನಿಷ್ಪ್ರಯೋಜಕ’ ಕೆಲಸ ಎಂದು ನಗರದವರು ತಳ್ಳಿಹಾಕಬಹುದು. ಲಾಭ–ನಷ್ಟದ ವಿಚಾರಗಳು ಅವರ ಸಾಮಾಜಿಕ ಬದ್ಧತೆಯನ್ನು ಮಸುಕುಗೊಳಿಸಿರುವಂತಿದೆ.
ನಗರದ ಕಾರ್ಪೊರೇಟ್ ಸಂಸ್ಕೃತಿಯಲ್ಲಿ, ಸೌಜನ್ಯವು ಒಂದು ವೃತ್ತಿಪರ ಅನಿವಾರ್ಯತೆ ಅಷ್ಟೇ. ತಮ್ಮ ವ್ಯಾಪ್ತಿಯ ಹೊರಗಿರುವ ವ್ಯಕ್ತಿಗಳ ಜೊತೆ ಮಾತನಾಡುವಾಗ, ಆ ಸೌಜನ್ಯದ ಪೋಷಾಕು ಕಳಚಿ ಹಾಕಿ, ತಮ್ಮ ನೈಜ ಗುಣವನ್ನು ಪ್ರದರ್ಶಿಸುತ್ತಾರೆ. ಅದು ಅನಿವಾರ್ಯದ ನಗರ ಸಂಸ್ಕೃತಿ. ಹಾಗೆಂದು, ಹಳ್ಳಿಯಲ್ಲಷ್ಟೇ ಒಳ್ಳೆಯತನವಿದೆ, ಮಾನವೀಯತೆ ಇದೆ ಎನ್ನಲಾಗದು; ನಗರದವರು ಅನಾಗರಿಕರು, ಹೃದಯವಿಲ್ಲದವರು ಎಂದು ಷರಾ ಬರೆಯಲಾಗದು. ಅವರು ಎದುರಿಸುವ ಕಷ್ಟ ಮತ್ತು ಸಂದರ್ಭಗಳು ಇದನ್ನು ತೀರ್ಮಾನಿಸುತ್ತವೆ. ನಾವು ಇನ್ನೂ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡಿಲ್ಲ ಎಂಬುದನ್ನು ಸಾಬೀತು ಮಾಡುವ ಎಷ್ಟೊಂದು ಘಟನೆಗಳು ನಮ್ಮ ನಡುವೆ ನಡೆಯುತ್ತಲೇ ಇವೆ.
ಸಮೀಕ್ಷಕರ ಅನುಭವಗಳು ಹಳ್ಳಿಯವರ ಒಳ್ಳೆಯತನದಷ್ಟೇ, ನಗರದ ಜನರ ‘ಅಸಹಾಯಕತೆ’ಯನ್ನೂ ಸೂಚಿಸುತ್ತಿವೆ. ಭದ್ರತೆ, ಗೋಪ್ಯತೆ ಮತ್ತು ಸ್ವಹಿತಾಸಕ್ತಿಗಳ ಬೇಲಿಯೊಳಗೆ ನಗರದ ಜನ ಸಿಲುಕಿಕೊಂಡಿದ್ದಾರೆ. ಆ ಕಾರಣಕ್ಕೆ ತಮ್ಮ ಮೂಲಭೂತ ಸೌಜನ್ಯವನ್ನೂ ಮರೆತಿದ್ದಾರೆ. ಇದು ಅವರ ದೊಡ್ಡ ಅಸಹಾಯಕತೆ. ಹಳ್ಳಿಯವರ ಒಳ್ಳೆಯತನವೂ ಒಂದು ಅಸಹಾಯಕತೆಯೇ ಇರಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.