ADVERTISEMENT

ಚುರುಮುರಿ| ಮತಮೌಲ್ಯ!

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 19:30 IST
Last Updated 4 ನವೆಂಬರ್ 2020, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಚೆಡ್ಡಿ ದೋಸ್ತನ ತುರ್ತು ಸಂದೇಶದ ಮೇರೆಗೆ ಹೊರಟೆ. ದೂರದಲ್ಲಿ ಮೀಸೆ ಪೊಲೀಸ್ ಇನ್‌ಸ್ಪೆಕ್ಟರ್‌ ಕಾಣುತ್ತಿದ್ದಂತೆ ಮಾಸ್ಕ್ ಮರೆತು ಬಂದದ್ದು ನೆನಪಾಯಿತು. ಅವರು ಮಾಸ್ಕ್ ಇಲ್ಲದವರಿಗೆ ಬಸ್ಕಿ ಹೊಡೆಸುತ್ತಿದ್ದುದನ್ನು ನೋಡಿ ಬಳಸುದಾರಿ ಹಿಡಿದೆ.

ಪಾರ್ಕ್‌ನಲ್ಲಿದ್ದ ಮಾಸ್ಕ್‌ಧಾರಿ ಮಿತ್ರ ಮೊಬೈಲ್ ಹಿಡಿದುಕೊಂಡು ಬೈಯ್ಯುತ್ತಿದ್ದ- ‘ಟೈಮ್ ಸೈನ್ಸ್ ಇಲ್ಲ...’ ಕೇಳಿದೆ, ‘ರಾಜ್ಯೋತ್ಸವದ ಕಾಲದಲ್ಲಾದ್ರೂ ನನ್ನಂತೆ(!) ಕನ್ನಡದಲ್ಲಿ ಮಾತಾಡು. ಅದು ‘ಸೈನ್ಸ್’ ಅಲ್ಲ, ‘ಸೆನ್ಸ್’.

ಮಾಸ್ಕನ್ನು ಗಲ್ಲಕ್ಕೆಳೆದುಕೊಳ್ಳುತ್ತಾ ‘ನಾನು ಮಾಸ್ಕ್ ಬಿಗಿಯಾಗಿ ಕಟ್ಟಿಕೊಂಡಿರೋದ್ರಿಂದ ನಿಂಗೆ ಸರಿಯಾಗಿ ಕೇಳ್ಸಿಲ್ಲ’ ಎಂದ‌.

ADVERTISEMENT

‘ಅಷ್ಟೊಂದು ಬಿಗಿಯಾಗಿ ಯಾಕೋ ಕಟ್ಕೊಂಡೇ?’

‘ಕೊರೊನಾನ್ನ ಕರ್ನಾಟಕ ಕಂಟ್ರೋಲ್ ಮಾಡ್ತಿಲ್ಲಾಂತ ಕೇಂದ್ರ ರಾಂಗಾಗಿಲ್ವೇ? ನಮೋ ಸಾಹೇಬ್ರೂ ‘ಜಬ್ತಕ್ ದವಾಯಿ ನಹಿ, ತಬ್ತಕ್ ಢಿಲಾಯಿ (ಸಡಿಲ) ನಹಿ’ ಅಂತಿದಾರೆ!’

‘ಅದು ಮಾಸ್ಕ್ ಸಡಿಲಾಂತಲ್ಲ, ಕೋವಿಡ್ ನಿಯಂತ್ರಣಕ್ಕೆ ಎಸ್ಸೆಮ್ಮೆಸ್ ಪಾಲಿಸೀಂತ’.

‘ನಾನು ಅದನ್ನೇ ಬಳಸೋದು. ನೀನು ಬಂದದ್ದು ಅದನ್ನು ನೋಡ್ಕೊಂಡೇ ಅಲ್ವೇ?’

‘ಪೆದ್ದೇ, ಅದು ಎಸ್- ಸ್ಯಾನಿಟೈಸರ್, ಎಂ- ಮಾಸ್ಕ್, ಎಸ್- ಸೋಶಿಯಲ್ ಡಿಸ್ಟೆನ್ಸಿಂಗ್...! ಮೊನ್ನೆಯ ಚುನಾವಣಾ ಕುರುಕ್ಷೇತ್ರ ಟ್ರಂಪ್-ಬೈಡನ್ ಫೈಟ್ ಮೀರಿಸ್ತಿತ್ತಂತೆ!’

‘ನಾವೇ ಸ್ವೀಪ್ ಮಾಡೋದು ಗುರೂ.‌‌..’

‘ಅಮೆರಿಕದ ಪಾಪ್ ತಾರಾ ರಂಗಿನಂತೆ! ಜೊತೆಗೆ, ನಿಮ್ಮ ಆಶ್ವಾಸನೆ-ಗಿಫ್ಟ್‌ಗಳು, ಆದ್ರೂ ಕನಿಷ್ಠ ಮತದಾನ!’

‘ಜನರಿಗೆ ವೋಟಿನ ಬೆಲೆ ಗೊತ್ತು ಬಿಡು, ಅಂದಹಾಗೆ ನೀನೆಲ್ಲಿ ವೋಟು ಮಾಡಿದ್ದು?’

‘ಸಾರಿ ಬ್ರದರ್, ನನ್ನ ಮಾಸ್ಕ್ ಕಲರ್ ಬಗ್ಗೆ ತಕರಾರಾಯ್ತು‌. ಆಮೇಲೆ ನನ್ನದು ಬೇರೆ ಬೂತೂಂತ ಹೇಳಿದ್ರು. ಸಮಯವಾದದ್ರಿಂದ ಹೋಗೋಕಾಗ್ಲಿಲ್ಲ. ಎಲೆಕ್ಷನ್ ಆದ್ಮೇಲೆ ವಿತ್-ಫ್ಯಾಮಿಲಿ ರೆಸಾರ್ಟ್‌ಗೆ ಹೋಗೋಣಾಂದಿದ್ದೆ?’.

‘ರಿಸಲ್ಟ್ ಬಂದ್ಮೇಲೆ ನೋಡೋಣಪ್ಪಾ’.

ನಾನು ಪೆಚ್ಚು ಮೋರೆ ಹಾಕಿಕೊಂಡು ಕುಳಿತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.