ADVERTISEMENT

ಸಂಗತ| ಶ್ವಾನ ಸಾಕಬೇಕೆ? ತುಸು ತಾಳಿ!

ಸಾಕುಪ್ರಾಣಿಯ ಮನಸ್ಸು ಅರಿತು ಅದಕ್ಕೆ ವರ್ತನಾ ತರಬೇತಿ ನೀಡಿದರಷ್ಟೇ ಅದರೊಂದಿಗಿನ ನಿರ್ವ್ಯಾಜ ಪ್ರೇಮವನ್ನು ಅನುಭವಿಸಲು ಸಾಧ್ಯ

ಡಾ.ಮುರಳೀಧರ ಕಿರಣಕೆರೆ
Published 27 ಸೆಪ್ಟೆಂಬರ್ 2021, 19:31 IST
Last Updated 27 ಸೆಪ್ಟೆಂಬರ್ 2021, 19:31 IST
Sangata 28.09.2021 Resize.jpg
Sangata 28.09.2021 Resize.jpg   

ಕರೆ ಮಾಡಿದ ಆ ಪರಿಚಿತ ವ್ಯಕ್ತಿ ತುಂಬಾ ಮುಜುಗರ ದಿಂದಲೇ ತಮ್ಮ ಸಮಸ್ಯೆಯನ್ನು ತೋಡಿಕೊಂಡಿದ್ದರು. ಪ್ರೀತಿಯಿಂದ ಸಾಕಿದ ಡಾಬರ್‍ಮನ್ ಶ್ವಾನದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ವಿಚಿತ್ರ ವರ್ತನೆಯಿಂದ ಮನೆಯವರು ರೋಸಿಹೋಗಿದ್ದರು. ಏನೇ ಪ್ರಯತ್ನಪಟ್ಟರೂ ಆ ಕೆಟ್ಟ ಚಾಳಿಯನ್ನು ಬಿಡಿಸಲಾಗದ ಅಸಹಾಯಕತೆ ಅವರ ಮಾತಿನಲ್ಲಿ ಎದ್ದು ತೋರುತ್ತಿತ್ತು! ಯಾವುದೇ ಬಟ್ಟೆ ಸಿಕ್ಕಿದರೂ ಆ ನಾಯಿ ಹರಿದು ಚೂರು ಮಾಡುತ್ತಿತ್ತು. ಮನೆಯವರ ಉಡುಪು, ಸಾಕ್ಸ್, ಸೋಫಾ ಕವರ್, ನೆಲಹಾಸು ಅದರ ಬಾಯಿಗೆ ಸಿಕ್ಕಿ ಛಿದ್ರ ಛಿದ್ರ!

ಹಾಗಂತ ಈ ದುರ್ಗುಣ ಅದಕ್ಕೆ ಮೊದಲಿ ನಿಂದೇನೂ ಇರಲಿಲ್ಲ. ಈಗ್ಗೆ ಒಂದೆರಡು ತಿಂಗಳ ಹಿಂದೆ ಏಕಾಏಕಿ ಕಾಣಿಸಿಕೊಂಡಿದ್ದು. ಬೆದರಿಕೆ, ಹೊಡೆತ, ಬಡಿತ, ಉಪವಾಸದ ಪ್ರಯೋಗ ವಿಫಲವಾಗಿದ್ದವು. ಮನೆಯಲ್ಲೇ ಸಾಕಿ ಸಲಹಿದ ಪ್ರೀತಿಯ ನಾಯಿಯನ್ನು ಯಾರಿಗಾದರೂ ಕೊಟ್ಟು ಕೈತೊಳೆದುಕೊಳ್ಳಲು ಮಕ್ಕಳು ಬಿಡುತ್ತಿಲ್ಲ. ಮಂಡೆಬಿಸಿಯನ್ನು ಮತ್ತಷ್ಟು ಹೆಚ್ಚಿಸುವಂತೆ ಬಿಸಿಲಿಗೆ ಹಾಕಿದ ಬಟ್ಟೆಗೆ ಬಾಯಿ ಹಾಕುವುದನ್ನು ತಪ್ಪಿಸಲು ಹೋದ ಇವರ ಹೆಂಡತಿಗೆ ಕಚ್ಚಿಬಿಟ್ಟಿದೆ!

ನಾಯಿಗೆ ರೇಬಿಸ್ ಲಸಿಕೆ ಮೊದಲೇ ಹಾಕಿದ್ದರಿಂದ ಕಡಿತದಿಂದ ಸಮಸ್ಯೆಯೇನೂ ಇಲ್ಲವೆಂದು ಆ ಯಜಮಾನರಿಗೆ ಮನವರಿಕೆ ಮಾಡಿ, ಆಳ ಗಾಯ ವಾದ್ದರಿಂದ ಟಿ.ಟಿ ಇಂಜಕ್ಷನ್ ತೆಗೆದುಕೊಳ್ಳುವಂತೆ ಸಲಹೆಯಿತ್ತಿದ್ದೆ. ಆದರೆ ಉಡುಪು ಹರಿಯುವ ನಾಯಿಯ ನಡತೆಗೆ ಪರಿಹಾರವೇನು?

ADVERTISEMENT

ಒಂದಷ್ಟು ವಿಚಾರಣೆಯ ನಂತರ, ದಿಢೀರೆಂದು ಕಾಣಿಸಿಕೊಂಡ ಈ ಚಾಳಿಗೆ ಕಾರಣ ಸಿಕ್ಕಿತ್ತು. ಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದ ಅವರ ಮಕ್ಕಳಿಬ್ಬರು ಕೋವಿಡ್ ಕಾರಣದಿಂದ ಹಳ್ಳಿಗೆ ಮರಳಿದ್ದರು. ಹೆಚ್ಚು ಕಮ್ಮಿ ಒಂದು ವರ್ಷ ಮುದ್ದು ಶ್ವಾನದ ಜೊತೆಗೆ ಪೂರ್ಣ ಪ್ರಮಾಣದಲ್ಲಿ ಕಾಲ ಕಳೆದಿದ್ದರು. ಎರಡು ತಿಂಗಳ ಹಿಂದೆ ಅವರು ಪಟ್ಟಣಕ್ಕೆ ಮರಳಿದ ನಂತರ ಈ ಸಮಸ್ಯೆ ಕಾಣಿಸಿಕೊಂಡಿದೆ. ಒಂಟಿತನ, ಬೇಸರ, ಆಪ್ತರ ಅಗಲಿಕೆಯಿಂದಾದ ಒತ್ತಡದ ಕಾರಣ ನಾಯಿಯ ಮನಃಸ್ಥಿತಿಯಲ್ಲಿ ಏರುಪೇರಾಗಿ ಹೀಗೊಂದು ದುರ್ಗುಣ ಅಂಟಿಕೊಂಡಿತ್ತು! ಇಂತಹದ್ದೊಂದು ವ್ಯಸನವನ್ನು ಬಿಡಿಸಲು ಬೇಕಾದ ತಾಳ್ಮೆ, ನಿರಂತರ ಪ್ರಯತ್ನದ ಬಗ್ಗೆ ತಿಳಿ ಹೇಳಿ ತಂತ್ರಗಳನ್ನು ವಿವರಿಸಿದ್ದೆ.

ಹೌದು, ಕೊರೊನಾ ಪ್ರಕರಣಗಳ ಇಳಿಮುಖ ದೊಂದಿಗೆ ಎಲ್ಲಾ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಇಷ್ಟು ದಿನ ಮಕ್ಕಳು, ದೊಡ್ಡವರ ಕಂಪನಿಯ ಖುಷಿಯಲ್ಲಿದ್ದ ಮುದ್ದುಪ್ರಾಣಿಗಳಿಗೆ ಮತ್ತೆ ಸಾಂಗತ್ಯ ತಪ್ಪಿದೆ. ಒಮ್ಮೆಲೇ ಆವರಿಸಿರುವ ಏಕಾಂಗಿತನ, ಬೇಸರ, ಒತ್ತಡದ ಕಾರಣ ಪ್ರಾಣಿಗಳ ವರ್ತನೆಯಲ್ಲಿ ಬದಲಾವಣೆ ಕಾಣಿಸುತ್ತಿದೆ. ಮನೆಯವರ ಒಡನಾಟ ಇಲ್ಲದೆ ಹಲವು ಶ್ವಾನಗಳನ್ನು ಮಂಕು ಆವರಿಸಿದೆ. ಕೂದಲು ಉದುರುವಿಕೆ, ದದ್ದು, ಗಾಯದಂತಹ ತ್ವಚೆಯ ಸಮಸ್ಯೆಗಳಿಗೆ ಅವುಗಳನ್ನು ಬಾಧಿಸುವ ಒತ್ತಡವೇ ಪ್ರಮುಖ ಕಾರಣ!

ಚಪ್ಪಲಿ ತಿನ್ನುವುದು, ಬಟ್ಟೆ ಹರಿಯುವುದು, ವಾಹನಗಳ ವೈರು, ಪೈಪುಗಳನ್ನು ತುಂಡರಿಸುವುದು, ಮನೆಯೊಳಗೆ ಮಲಮೂತ್ರ ವಿಸರ್ಜನೆ, ಅವುಗಳನ್ನು ತಿನ್ನುವುದು... ಇಂತಹದ್ದೇ ಅವುಗಳ ಹತ್ತಾರು ದುರ್ವ್ಯಸನಗಳಿಂದ ಸಾಕಿದವರು ಹೈರಾಣಾಗುತ್ತಿದ್ದಾರೆ.

ಶ್ವಾನಗಳು ತುಂಬಾ ಸೂಕ್ಷ್ಮ ಮನಸ್ಸುಳ್ಳವು. ಎಳವೆ ಯಲ್ಲಿಯೇ ಸೂಕ್ತ ತರಬೇತಿಯ ಮೂಲಕ ಪಳಗಿಸಿದರೆ ಅಸಹ್ಯ ವರ್ತನೆಗಳನ್ನು ಖಂಡಿತಾ ತಡೆಯಬಹುದು. ಅವುಗಳ ಮನಸ್ಸು ಅರಿತುಕೊಂಡು, ತಾಳ್ಮೆಯಿಂದ ತಿದ್ದಿ ಸಂಸ್ಕಾರ ಕಲಿಸಿದಾಗ ಮಾತ್ರ ಒಡನಾಟ ಮುದ ತರಬಲ್ಲದು.

ಬಾಡಿಗೆ ಮನೆಯಲ್ಲಿರುವ ನಮ್ಮ ಎದುರಿನವರು ಚಿಕ್ಕಮಕ್ಕಳ ಒತ್ತಾಯದ ಕಾರಣ ಮುದ್ದಾದ ಬೀದಿನಾಯಿ ಮರಿ ಸಾಕಿದ್ದರು. ಮೊದಲೇ ಚಿಕ್ಕ ಮನೆ, ಬಾಗಿಲು ತೆಗೆದರೆ ರಸ್ತೆ. ಹಾಗಾಗಿ ನಾಯಿ ಸದಾ ಮನೆಯೊಳಗೆ ಬಂದಿ. ಅದು ಬೆಳೆದು ದೊಡ್ಡದಾಯಿತು. ಮನೆಯೊಳಗೆ ಜಾಗ ಸಾಕಾಗಲಿಲ್ಲ. ಸದಾ ಉದ್ರೇಕದಿಂದ ಕೂಗಾಡುವ ಆ ಗಂಡುನಾಯಿಯನ್ನು ಸಂಬಾಳಿಸಲಾಗದೆ ಈಗ ಬೀದಿಗೆ ಬಿಟ್ಟಿದ್ದಾರೆ. ಮನೆಯೊಳಗೆ ಇದ್ದು ಅಭ್ಯಾಸವಾದ ಅದು ಈಗ ಯಾರ ಮನೆ ಬಾಗಿಲು ತೆರೆದಿದ್ದರೂ ಒಂದಿನಿತೂ ಅಳುಕಿಲ್ಲದೆ ಒಳಗೆ ಹೋಗಿ ಪೆಟ್ಟು ತಿನ್ನುತ್ತಿದೆ. ಕೆಲವರಿಗೆ ಕಡಿದಿದೆ. ಸದಾ ಕುಂಟುತ್ತಾ ಓಡಾಡುತ್ತಿರುವ ಆ ನಾಯಿಯನ್ನು ನೋಡುವಾಗ ಮಾಲೀಕ ಮಾಡಿದ ಎಡವಟ್ಟಿಗೆ ಅಮಾಯಕ ಪ್ರಾಣಿ ನರಳುವುದನ್ನು ಕಂಡು ನೋವಾಗುತ್ತದೆ.

ನಾಯಿ ಕಡಿತದ ಪ್ರಕರಣಗಳ ಏರುಗತಿಯ ನಡುವೆ ಮತ್ತೊಂದು ‘ವಿಶ್ವ ರೇಬಿಸ್ ದಿನ’ (ಸೆ. 28) ಬಂದಿದೆ. ಹುಚ್ಚುನಾಯಿ ರೋಗಕ್ಕೆ ಚುಚ್ಚುಮದ್ದು ಕಂಡುಹಿಡಿದ ಶ್ರೇಷ್ಠ ಸೂಕ್ಷ್ಮಾಣುಜೀವಿ ತಜ್ಞ ಲೂಯಿ ಪ್ಯಾಸ್ಟರ್‌ನ ಪುಣ್ಯತಿಥಿಯ ದಿವಸವಿದು. ನಾಯಿಗಳಿಗೆ ವರ್ತನಾ ತರಬೇತಿ ನೀಡಿ ಕಾಲಕಾಲಕ್ಕೆ ಅಗತ್ಯ ಲಸಿಕೆ ಹಾಕಿಸಿ, ಸೂಕ್ತ ರೀತಿಯಲ್ಲಿ ಪಾಲನೆ, ಪೋಷಣೆ ಮಾಡಿದರೆ ಮಾನವನ ಅತ್ಯುತ್ತಮ ಸಂಗಾತಿಯೊಂದಿಗಿನ ನಿರ್ವ್ಯಾಜ ಪ್ರೇಮವನ್ನು ಅನುಭವಿಸಬಹುದು.

ಮುದ್ದು ಪ್ರಾಣಿಗಳನ್ನು ಸಾಕಲು ಮುಂದಡಿ ಇಡುವ ಮುನ್ನ, ಹೊಂದುವ ತಳಿಯ ಆಯ್ಕೆ, ಮನೆ ಯಲ್ಲಿನ ಸ್ಥಳಾವಕಾಶ, ಕುಟುಂಬದವರ ಸಹಕಾರ, ಒಡನಾಟಕ್ಕೆ ಸಿಗುವ ಸಮಯ, ಅಗತ್ಯಗಳ ಪೂರೈಕೆ ಜೊತೆಯಲ್ಲಿ ಕೊನೆಯವರೆಗೂ ಅವುಗಳನ್ನು ಪ್ರೀತಿಯಿಂದ ನೋಡಿಕೊಳ್ಳಲು ಸಾಧ್ಯವೇ ಎಂದು ತುಸು ಯೋಚಿಸಿ ನಿರ್ಧರಿಸುವುದು ಒಳಿತು.

ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ ಸರ್ಕಾರಿ ಪಶು ಆಸ್ಪತ್ರೆ, ತೀರ್ಥಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.