ADVERTISEMENT

ಸಂಗತ: ಬೆಲೆಯೇರಿಕೆ- ಸೊಲ್ಲೆತ್ತದವರ ಕೊಡುಗೆ!

ಬೆಲೆ ಏರಿಕೆ ವಿರುದ್ಧ ದನಿ ಎತ್ತಲು ಹಿಂಜರಿಕೆ ಏಕೆ? ಸಂಕಷ್ಟ ಅನುಭವಿಸುತ್ತಿರುವ ಜನರನ್ನು ಮೌನಕ್ಕೆ ದೂಡಿರುವುದರ ಹಿಂದೆ ಇರುವ ಅಂಶಗಳಾವುವು?

ಡಾ.ಎಂ.ವೆಂಕಟಸ್ವಾಮಿ
Published 12 ಅಕ್ಟೋಬರ್ 2021, 19:31 IST
Last Updated 12 ಅಕ್ಟೋಬರ್ 2021, 19:31 IST
ಸಂಗತ
ಸಂಗತ   

ಬೆಂಗಳೂರಿನ ನಿವಾಸಿಯಾದ ನಾನು, ಆಯುರ್ವೇದ ವೈದ್ಯರನ್ನು ಕಾಣುವ ಸಲುವಾಗಿ ಮೊನ್ನೆ ಬೆಳಿಗ್ಗೆ ಕಾರ್ ‘ಸ್ಟಾರ್ಟ್‌’ ಮಾಡಲು ಮುಂದಾದೆ. ಆಗಲಿಲ್ಲ. ಮೆಕ್ಯಾನಿಕ್‍ನನ್ನು ಕರೆತಂದೆ. ಆತ ಪರಿಶೀಲಿಸಿದಾಗ, ಒಳಗೆ ಕೆಲವು ತಂತಿಗಳು ತುಂಡರಿಸಿಹೋಗಿ
ದ್ದುದು ಕಂಡುಬಂತು. ಕೊನೆಗೆ, ಅವನು ಒಂದು ಕಾರ್‌ ತಂದು ನನ್ನ ಕಾರಿಗೆ ಅದನ್ನು ಸೇರಿಸಿ ಹಗ್ಗ ಕಟ್ಟಿ ಗ್ಯಾರೇಜ್‍ಗೆ ಎಳೆದುಕೊಂಡು ಹೋದ.

ಗೇರ್‌ಬಾಕ್ಸ್ ಮೇಲಿದ್ದ ಕವಚವನ್ನು ತೆಗೆದು ನೋಡಿದರೆ ಇಲಿಗಳ ಕುಟುಂಬವೇ ಅಲ್ಲಿವಾಸಿಸುತ್ತಿದ್ದುದು ತಿಳಿಯಿತು. ಈರುಳ್ಳಿ, ತರಕಾರಿ, ಬಿಸ್ಕತ್ತು, ಕಾಗದದ ರಾಶಿಯೇ ಅಲ್ಲಿತ್ತು. ಆದರೆ ಇಲಿಗಳು ಮಾತ್ರ ಜಿಗಿದು ಓಡಿಹೋಗಿದ್ದವು. ಮನುಷ್ಯನಂತೆ ಇಲಿಗಳು ದುರಾಲೋಚನೆಯುಳ್ಳ ಪ್ರಾಣಿಗಳು. ಮನುಷ್ಯ ತನ್ನ ಮುಂದಿನಪೀಳಿಗೆಗೆ ಸಂಪನ್ಮೂಲಗಳನ್ನು ಹೇಗೆ ಗುಡ್ಡೆ ಹಾಕಿಕೊಳ್ಳುತ್ತಾನೋ ಅದೇ ರೀತಿ ಇಲಿಗಳೂ ಗುಡ್ಡೆ ಹಾಕಿಕೊಂಡಿದ್ದವು.

ಆತಂಕಗೊಂಡ ನಾನು, ‘ಬಿಲ್ ಎಷ್ಟಾಗುತ್ತೆ?’ ಎಂದು ಕೇಳಿದೆ. ‘ಆರೇಳು ಸಾವಿರ ಆಗಬಹುದು’ ಎಂದ. ನಾನು ‌‘ಆಯಿತು ಸ್ವಲ್ಪ ಕಡಿಮೆ ಮಾಡಿಕೊಳ್ಳಿ’ ಎಂದೆ. ಮೆಕ್ಯಾನಿಕ್ ನಗುತ್ತಾ, ‘ನಿಮಗೆ ಜಾಸ್ತಿ ಮಾಡಲ್ಲ ಬಿಡಿ ಸರ್’ ಎಂದ. ಕಂಪನಿ ಶೋರೂಂ ಗ್ಯಾರೇಜ್‍ಗೆ ಹೋಗಿದ್ದರೆ ಎಷ್ಟು ಸಾವಿರ ಬಿಲ್ ಆಗುತ್ತಿತ್ತೋ ಏನೋ ಎಂದು ಒಳಗೊಳಗೇ ಸ್ವಲ್ಪ ಸಮಾಧಾನಗೊಂಡು, ‘ರೆಡಿ ಮಾಡಿದ ಮೇಲೆ ಫೋನ್ ಮಾಡಿ’ ಎಂದು ಮನೆಗೆ ವಾಪಸಾದೆ.

ADVERTISEMENT

ಬಳಿಕ, ಆಯುರ್ವೇದ ವೈದ್ಯರಿರುವ ವಾಣಿವಿಲಾಸ ರಸ್ತೆಗೆ ಹೋಗಲು ಓಲಾ ಮತ್ತು ಉಬರ್ ಆ್ಯಪ್ ಓಪನ್ ಮಾಡಿ ಟ್ಯಾಕ್ಸಿ ದರ ಪರಿಶೀಲಿಸಿದೆ. ನಮ್ಮ ಮನೆಯಿಂದ ವೈದ್ಯಾಲಯಕ್ಕೆ 16 ಕಿ.ಮೀ. ದೂರವಿದ್ದು, ಓಲಾ ವಾಹನಗಳಲ್ಲಿ ₹ 552- 687ರ ನಡುವೆಮೂರು ವಿಧದ ದರ ಕಾಣಿಸುತ್ತಿತ್ತು. ಆಟೊದಲ್ಲಿ ₹ 230 ತೋರಿಸುತ್ತಿತ್ತು. ಇನ್ನು ಉಬರ್ ಆ್ಯಪ್‍ನಲ್ಲಿಯೂ ₹ 481ರಿಂದ 581 ಮತ್ತು ಆಟೊದಲ್ಲಿ
₹ 217 ತೋರಿಸುತ್ತಿತ್ತು.

ಈ ದರಗಳನ್ನು ನೋಡಿ ಆತಂಕವಾಯಿತು. ಯಾಕೆಂದರೆ ಒಂದೆರಡು ವರ್ಷಗಳ ಹಿಂದಕ್ಕೆ ಹೋದರೆ ಓಲಾ, ಉಬರ್‌ ಪ್ರಯಾಣ ದರ 16 ಕಿ.ಮೀ.ಗಳ ದೂರಕ್ಕೆ ಸರಾಸರಿ ₹ 200-300ರ ಒಳಗಿತ್ತು.

ಈಗ ಈ ಪರಿ ಜಿಗಿತ. ವಾಪಸ್‌ ಬರಲು ಅಷ್ಟೇ ಹಣ ಕೊಟ್ಟರೂ ಹೆಚ್ಚುಕಡಿಮೆ ₹ 1,000 ಕೊಡಬೇಕಾಗಿತ್ತು. ಆಟೊದಲ್ಲಿ ಹೆಚ್ಚಿಗೆ ಓಡಾಡದ ನಾನು ಸ್ವಲ್ಪ ಯೋಚಿಸಿ, ₹ 230ಕ್ಕೆ ಆಟೊ ಬುಕ್ ಮಾಡಿಕೊಂಡು ಹೋದೆ. ವಾಪಸಾಗುವಾಗಲೂ ಅಷ್ಟೇ ಮೊತ್ತ ತೆತ್ತೆ.

ಚಾಲಕನನ್ನು ‘ಆಟೊಗಳಿಗೆ ಹಾಕುವ ಗ್ಯಾಸ್ ಬೆಲೆ ಎಷ್ಟು?’ ಎಂದು ಕೇಳಿದಾಗ, ಆತ ಬಹಳ ದುಃಖದಿಂದ ‘ಸರ್, ಮೂರು ತಿಂಗಳ ಹಿಂದೆ 30 ರೂಪಾಯಿ ಇದ್ದಿದ್ದು ಈಗ 62 ರೂಪಾಯಿ ಆಗಿದೆ’ ಎಂದ. ‘ಒಂದು ಲೀಟರ್ ಗ್ಯಾಸ್‍ಗೆ ಆಟೊ ಎಷ್ಟು ಕಿ.ಮೀ. ಓಡುತ್ತೆ?’ ಎಂದಿದ್ದಕ್ಕೆ ‘15ರಿಂದ 18 ಕಿ.ಮೀ.’ ಎಂದ.

ಅಂದರೆ 62 ರೂಪಾಯಿಗಳ ಅನಿಲದಿಂದ ಆಟೊ ಸರಾಸರಿ 16 ಕಿ.ಮೀ. ದೂರ ಓಡುತ್ತದೆ ಎಂದು ಕೊಳ್ಳೋಣ. ಇದರ ಜೊತೆಗೆ ಆನ್‌ಲೈನ್‌ ಮೂಲಕ ಗ್ರಾಹಕಸೇವೆ ಒದಗಿಸುವ ಕಂಪನಿಗಳು (ಓಲಾ, ಉಬರ್ ಇತ್ಯಾದಿ) ಶೇ 20ರಿಂದ 30 ಕಮಿಷನ್ (₹ 60– 70) ಮುರಿದುಕೊಂಡರೆ ಆಟೊದವರಿಗೆ ಉಳಿಯುವುದು ಸುಮಾರು ₹ 100 ಎಂದುಕೊಳ್ಳ
ಬಹುದು.

ಇನ್ನು ಟ್ಯಾಕ್ಸಿಗಳ ಲೆಕ್ಕಕ್ಕೆ ಬಂದರೆ, ಡೀಸೆಲ್ ಲೀಟರ್‌ಗೆ ₹ 100 ಎಂದರೆ 16 ಕಿ.ಮೀ. ದೂರಕ್ಕೆ₹ 100ರಿಂದ 120 ಬೀಳುತ್ತದೆ ಎಂದುಕೊಳ್ಳೋಣ. ಕಂಪನಿಗಳು 500 ರೂಪಾಯಿಗೆ ₹ 100– 120 ಕಮಿಷನ್ ಮುರಿದುಕೊಂಡರೆ, ಒಟ್ಟು 16 ಕಿ.ಮೀ.ಗಳಿಗೆ ₹ 240 ಹೋಗಿ ಟ್ಯಾಕ್ಸಿಯವರಿಗೆ ₹ 260 ಉಳಿಯಬಹುದು.

ಆಟೊ ಮತ್ತು ಟ್ಯಾಕ್ಸಿಗಳು ಗಿರಾಕಿಗಳನ್ನು ಹುಡುಕಿಕೊಂಡು ಖಾಲಿ ಸುತ್ತಾಡುವುದು ಎಷ್ಟೋ? ವಾಹನಗಳು ರಿಪೇರಿಗೆ ಬಂದರೆ? ಅವುಗಳ ದಿನನಿತ್ಯ ನಿರ್ವವಣೆ? ಇನ್ನು ಸಾಲದಲ್ಲಿ ವಾಹನ ಕೊಂಡುಕೊಂಡಿದ್ದರೆ...? ಎರಡು ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಪೆಟ್ರೋಲ್‌, ಡೀಸೆಲ್ ಹಾಗೂ ಅಡುಗೆ ಅನಿಲ ಸಿಲಿಂಡರ್‌ ಬೆಲೆಯಲ್ಲಿ ಈಗ ಭಾರೀ ಪ್ರಮಾಣದ ಹೆಚ್ಚಳವಾಗಿದೆ.

ಇದಕ್ಕೆಲ್ಲ ಕೊರೊನಾ ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟೇ ಕಾರಣವೆ ಅಥವಾ ಇಂದಿನ ಸರ್ಕಾರದ ನೀತಿಗಳು ಕಾರಣವೇ ಎನ್ನುವುದರ ಬಗ್ಗೆ ಪರಾಮರ್ಶೆ ನಡೆಯಬೇಕಾಗಿದೆ. ಯಾವುದೇ ದೇಶದಲ್ಲಿ ಇಂಧನದ ಬೆಲೆ ಹೆಚ್ಚಾದರೆ ಎಲ್ಲ ರೀತಿಯಲ್ಲೂ ಬೆಲೆಗಳು ಹೆಚ್ಚಾಗುತ್ತವೆ ಎನ್ನುವುದು ಜಗತ್ತಿಗೆ ಗೊತ್ತಿರುವ ಸಾಮಾನ್ಯ ವಿಷಯ. ಹೀಗಿದ್ದರೂ ಸರ್ಕಾರವು ಜನರ ಸಂಕಷ್ಟ ನಿವಾರಣೆಗೆ ಸ್ಪಂದಿಸುತ್ತಿಲ್ಲ.

ಬೆಲೆ ಪ್ರತಿದಿನ ಏರುತ್ತಲೇ ಇದೆ. ವಿರೋಧ ಪಕ್ಷಗಳು ಇದನ್ನು ಪ್ರತಿಭಟನಾ ಅಸ್ತ್ರವಾಗಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿಲ್ಲ ಏಕೆ? ಸಂಕಷ್ಟ ಅನುಭವಿ ಸುತ್ತಿರುವ ಜನರೇಕೆ ಇದರ ವಿರುದ್ಧ ದನಿ ಎತ್ತುತ್ತಿಲ್ಲ? ಸಂಘ–ಸಂಸ್ಥೆಗಳು, ವಿದ್ಯಾರ್ಥಿಗಳು, ನಿರುದ್ಯೋಗಿಗಳು ಇಂದಿನ ರಾಜಕಾರಣದ ವರಸೆಗಳಿಗೆ ಹೆದರಿಬಿಟ್ಟಿದ್ದಾರೆಯೇ? ಸೊಲ್ಲು ಎತ್ತಲು ಸಾಧ್ಯವಾಗದೇ ಇರುವುದಕ್ಕೆ ಇನ್ನೇನಾದರೂ ಕಾರಣಗಳು, ಸಮಸ್ಯೆಗಳು ಇವೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.