ಸಂಗತ .
ರಾಜ್ಯದಲ್ಲಿ 2025ರ ಆರಂಭದಲ್ಲಿ ನಡೆಯುತ್ತಿರುವ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇಲ್ಲೊಂದು ಸುಸ್ಥಿರ, ಪರಿಣಾಮಕಾರಿ ಆಡಳಿತ ವ್ಯವಸ್ಥೆ ಇದೆಯೇ ಎಂಬ ಅನುಮಾನ ಸಹಜವಾಗಿ ಮೂಡುತ್ತದೆ. ಪಕ್ಷ ರಾಜಕಾರಣವನ್ನು ಹೊರಗಿಟ್ಟು ನೋಡಿದಾಗ, ಶಾಸನ ಸಭೆಗೆ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ಒಂದು ಸಾಮೂಹಿಕ ಜವಾಬ್ದಾರಿ ಇರುತ್ತದೆ ಎಂಬ ಕನಿಷ್ಠ ಪರಿವೆಯೂ ಇಲ್ಲದಂತಹ ಒಂದು ರಾಜಕೀಯ ವ್ಯವಸ್ಥೆಯನ್ನು ನಾವು ರೂಢಿಸಿಕೊಂಡಿರುವುದು ತಿಳಿಯುತ್ತದೆ. ಇದರ ದುಷ್ಪರಿಣಾಮವನ್ನು ರಾಜ್ಯದಲ್ಲಿನ ಪ್ರಕರಣಗಳು ಬಿಂಬಿಸುತ್ತಿವೆ. ಸಮಾಜದಲ್ಲಿ ಹೆಚ್ಚುತ್ತಿರುವ ಕೊಲೆ, ದರೋಡೆ, ಸುಲಿಗೆ, ಅತ್ಯಾಚಾರ, ದೌರ್ಜನ್ಯದಂತಹ ಸಮಾಜಘಾತುಕ ಕೃತ್ಯಗಳನ್ನು ನಿಯಂತ್ರಿಸುವುದು ಅಥವಾ ನಿಗ್ರಹಿಸುವುದು ಆಡಳಿತಾರೂಢರ ಆದ್ಯ ಕರ್ತವ್ಯ.
ಇದಕ್ಕಾಗಿಯೇ ನಮ್ಮಲ್ಲಿ ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ಇವೆ. ಆದರೆ ರಾಜ್ಯದ ಮೂಲೆ ಮೂಲೆಯನ್ನೂ ಹಗಲಿರುಳೂ ಗಮನಿಸುತ್ತಿರುವಂತಹ ಕಣ್ಗಾವಲು ವ್ಯವಸ್ಥೆಯನ್ನು ಅಳವಡಿಸಲು ಸಾಧ್ಯವೇ? ಇದು ವಾಸ್ತವಿಕ ನೆಲೆಯಲ್ಲಿ ಅಸಾಧ್ಯದ ಮಾತು. ಆದಾಗ್ಯೂ ಕಾನೂನು ಸುವ್ಯವಸ್ಥೆಯನ್ನು ನಿರ್ವಹಿಸುವ ಇಲಾಖೆಗಳು ಸದಾ ಜಾಗರೂಕವಾಗಿ ಇರುವುದು ಅಪೇಕ್ಷಣೀಯ. ಈ ನಿರೀಕ್ಷೆಗಳ ಹೊರಗೆ ನಿಂತು ನೋಡಿದಾಗ, ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ದರೋಡೆಗಳು, ದಲಿತ ಮಹಿಳೆಯರ ಮೇಲಿನ ದೌರ್ಜನ್ಯದಂತಹ ಸಮಾಜಘಾತುಕ ಕೃತ್ಯಗಳನ್ನು ಯಾವ ನೆಲೆಯಲ್ಲಿ ನಿಂತು ನೋಡಬೇಕು ಎಂಬ ಪ್ರಶ್ನೆ ಮೂಡುತ್ತದೆ. ಆಡಳಿತಾರೂಢ ಪಕ್ಷಗಳನ್ನು ಚಕಿತಗೊಳಿಸುವ ರೀತಿಯಲ್ಲಿ ನಡೆಯುವ ಇಂತಹ ದುಷ್ಕೃತ್ಯಗಳು ಏಕಾಏಕಿ ಸಂಭವಿಸುವುದಿಲ್ಲ ಎಂಬ ವಾಸ್ತವವನ್ನು ಯಾವುದೇ ಪಕ್ಷದ ನೇತೃತ್ವದ ಸರ್ಕಾರ ಅರಿತಿರಬೇಕು.
ಬೀದರ್‌ನಲ್ಲಿ ನಡೆದ ಬ್ಯಾಂಕ್ ದರೋಡೆ ಮತ್ತು ಭದ್ರತಾ ಸಿಬ್ಬಂದಿಯ ಹತ್ಯೆ, ಮಂಗಳೂರಿನ ಬ್ಯಾಂಕಿನಲ್ಲಿ ನಡೆದ ಹಗಲು ದರೋಡೆ, ಹುಬ್ಬಳ್ಳಿಯ ಬ್ಯಾಂಕ್‌ನಲ್ಲಿ ನಡೆದ ದರೋಡೆ ಪ್ರಯತ್ನ, ನಂಜನಗೂಡಿನ ಬಳಿ ನಡೆದಿರುವ ಕಾರು ಅಪಹರಣ ಈ ಎಲ್ಲ ಪ್ರಕರಣಗಳಿಗೂ ಸಮಾಜದಲ್ಲಿ ಸೃಷ್ಟಿಯಾಗುತ್ತಿರುವ ಅರಾಜಕತೆಗೂ ನೇರ ಸಂಬಂಧ ಇರುತ್ತದೆ. ಸಣ್ಣಪುಟ್ಟ ಕಳ್ಳತನಗಳಿಂದ ಹಿಡಿದು ಬ್ಯಾಂಕ್ ದರೋಡೆಯವರೆಗೆ ನಡೆಯುವ ಪಾತಕ ಕೃತ್ಯಗಳಿಗೆ ನಮ್ಮ ಸಮಾಜ ಮತ್ತು ಆರ್ಥಿಕತೆ ಸೃಷ್ಟಿಸಿರುವ ಸಾಮಾಜಿಕ ಅಭದ್ರತೆ ಮತ್ತು ಆರ್ಥಿಕ ಅನಿಶ್ಚಿತತೆ ಮೂಲ ಕಾರಣವಾಗಿರುತ್ತವೆ. ಅಪರಾಧ ಎಸಗುವವರು ಹೊರ ರಾಜ್ಯದವರೋ ಒಳಗಿನವರೋ ಎಂಬ ಪ್ರಶ್ನೆಗಿಂತಲೂ ಸರ್ಕಾರವನ್ನು, ಸಾರ್ವಜನಿಕರನ್ನು ಕಾಡಬೇಕಿರುವುದು ಈ ಕೃತ್ಯಗಳ ಹಿಂದಿನ ಕಾರಣಗಳು.
ಇಂತಹ ಅಪರಾಧಗಳಿಲ್ಲದ ಸಮಾಜವನ್ನು ಯಾವ ಕಾಲಘಟ್ಟದಲ್ಲೂ ಕಂಡಿಲ್ಲ, ಊಹಿಸಲೂ ಸಾಧ್ಯವಿಲ್ಲ. ಆದರೆ ಯಾವುದೇ ಅಪರಾಧವು ಶೂನ್ಯದಲ್ಲಿ ಸಂಭವಿಸುವುದಿಲ್ಲ ಎಂಬ ಸಮಾಜಶಾಸ್ತ್ರೀಯ ಸೂತ್ರದ ನೆಲೆಯಲ್ಲಿ ನಿಂತು ನೋಡಿದರೆ, ಇಂತಹ ವಾತಾವರಣದ ಸೃಷ್ಟಿಗೆ ಕಾರಣಗಳನ್ನು ಶೋಧಿಸಬಹುದು. ಇದು ಬರೀ ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಆಗಲಾರದು. ನಾಗರಿಕ ಸಮಾಜ, ಶಾಸನಸಭೆಯ ಚುನಾಯಿತ ಜನಪ್ರತಿನಿಧಿಗಳು, ಪರಾಜಿತ ರಾಜಕೀಯ ನಾಯಕರು, ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳು ಈ ಎಲ್ಲಾ ಭೌತಿಕ ನೆಲೆಗಳಲ್ಲಿ ಈ ಜವಾಬ್ದಾರಿಯನ್ನು ಗುರುತಿಸಬೇಕಿದೆ. ಬಡತನ, ನಿರುದ್ಯೋಗ, ನಿರ್ವಸತಿಯಂತಹ ಜೀವನಾವಶ್ಯ ಸಮಸ್ಯೆಗಳಷ್ಟೇ ಅಲ್ಲದೆ, ನಮ್ಮ ಸಾಮಾಜಿಕ- ಸಾಂಸ್ಕೃತಿಕ ಪರಿಸರ ಸೃಷ್ಟಿಸುವಂತಹ ದುಷ್ಟ ಮನಃಸ್ಥಿತಿಯೂ ಇಂತಹ ಅಪರಾಧಗಳಿಗೆ ಕಾರಣವಾಗಿರುತ್ತದೆ. ಇದನ್ನು ಅರಿತು ಬಗೆಹರಿಸುವ ವ್ಯವಧಾನವನ್ನು ಸಮಾಜ ಮತ್ತು ಸರ್ಕಾರ ರೂಢಿಸಿಕೊಳ್ಳಬೇಕಿದೆ.
ಈ ಕೃತ್ಯಗಳಿಂದಾಚೆಗೆ ಸದಾಕಾಲ ನಮ್ಮ ಸಮಾಜವನ್ನು ಕಾಡುತ್ತಿರುವುದು ಜಾತಿ ಹೆಸರಿನಲ್ಲಿ ನಡೆಯುವ ದೌರ್ಜನ್ಯ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು. ವಿಜಯಪುರದ ಬಳಿ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಅನುಮತಿ ಇಲ್ಲದೆ ಕರ್ತವ್ಯಕ್ಕೆ ಗೈರುಹಾಜರಾದದ್ದಕ್ಕೆ, ಈ ಮೂವರ ಮೇಲೆ ಮಾಲೀಕರು ನಡೆಸಿರುವ ಅಮಾನುಷ ಹಲ್ಲೆ ಎಂತಹ ನಿರ್ದಯಿಗಳನ್ನೂ ವಿಚಲಿತಗೊಳಿಸುತ್ತದೆ. ಈ ಕಾರ್ಮಿಕರು ದಲಿತ ಸಮುದಾಯಕ್ಕೆ ಸೇರಿರುವುದು ಕಾಕತಾಳೀಯವೇನಲ್ಲ. ದಲಿತರು ಎಂಬ ಕಾರಣಕ್ಕಾಗಿ ಅವರ ಮೇಲಿನ ಹಲ್ಲೆ ಮತ್ತಷ್ಟು ಕ್ರೂರವೂ ಅಮಾನುಷವೂ ಆಗುತ್ತದೆ. ಏಕೆಂದರೆ ಭಾರತದ ಜಾತಿ ವ್ಯವಸ್ಥೆ ಮೇಲ್ವರ್ಗದವರಿಗೆ ಮತ್ತು ಊಳಿಗಮಾನ್ಯ ಯಜಮಾನಿಕೆಯ ಶಕ್ತಿಗಳಿಗೆ ಆ ಹಕ್ಕನ್ನು ಕೊಟ್ಟುಬಿಟ್ಟಿದೆ.
ಈ ಎಲ್ಲ ಪ್ರಕರಣಗಳನ್ನು ಒಂದು ಕೋಶದಲ್ಲಿಟ್ಟು ನೋಡಿದಾಗ, ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ವಿಷಾದ ಉಂಟಾಗುತ್ತದೆ. ಆಡಳಿತಾರೂಢ ಮತ್ತು ವಿರೋಧ ಪಕ್ಷಗಳು ತಮ್ಮ ಸ್ವಪ್ರತಿಷ್ಠೆ ಹಾಗೂ ನಾಯಕತ್ವದ ಸುತ್ತಲಿನ ವಿವಾದಗಳಲ್ಲೇ ಮುಳುಗಿರು ವಾಗ, ಇಂತಹ ಸಮಾಜಘಾತುಕ ಶಕ್ತಿಗಳಿಗೆ ಮುಕ್ತ ಪರವಾನಗಿ ಕೊಟ್ಟಂತೆ ಆಗುತ್ತದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ದ್ದನ್ನೂ ಒಳಗೊಂಡಂತೆ ರಾಜ್ಯದಲ್ಲಿ ನಡೆದಿರುವ ಈ ಪ್ರಕರಣಗಳು ನಾಗರಿಕರು ತಲೆತಗ್ಗಿಸುವಂತೆ ಮಾಡಿವೆ. ಜನಪ್ರತಿನಿಧಿಗಳು ಹಾಗೂ ಪರಾಜಿತ ಅಭ್ಯರ್ಥಿಗಳು ಪಕ್ಷಭೇದ ಮರೆತು, ಈ ವಾತಾವರಣವನ್ನು ಸರಿಪಡಿಸುವ ದಿಸೆಯಲ್ಲಿ ಕ್ರಿಯಾಶೀಲವಾಗಬೇಕಿದೆ. ಇದನ್ನೇ ‘ಆಡಳಿತ’ ಎನ್ನುವುದು ಅಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.