ADVERTISEMENT

ಪಿವಿ ವೈಬ್ಸ್: ತಪ್ಪು ಮಾಡುತ್ತಿಲ್ಲ ಎಂದರೆ ನೀವು ನಾಲಾಯಕ್‌!

ಸಹನೆ
Published 19 ಜನವರಿ 2026, 23:30 IST
Last Updated 19 ಜನವರಿ 2026, 23:30 IST
   

ಅಯ್ಯೋ ತಲೆ ಕೆಡಿಸ್ಕೋಬೇಡ್ರಿ, ಜೀವನದಲ್ಲಿ ಒಂದಷ್ಟು ತಪ್ಪುಗಳನ್ನು ಮಾಡಲೇಬೇಕು, ಯಾರು ಬೇಡವೆನ್ನುತ್ತಾರೆ? ಬೇಡವೆಂದರೆ ಅನ್ನಲಿ ಬಿಡಿ. ಯಾರೋ ಬೇಡವೆನ್ನುತ್ತಾರೆಂಬ ಕಾರಣಕ್ಕೆ ನಾವು ತಪ್ಪನ್ನೇ ಮಾಡದೇ ಹೋದರೆ ಅಷ್ಟರ ಮಟ್ಟಿಗೆ ಜೀವನವನ್ನು ಕಳಕೊಂಡಂತೆಯೇ ಸರಿ. ಅಷ್ಟಕ್ಕೂ ತಪ್ಪೇ ಆಗದಂತೆ ಇರಲು ಜೀವನವೇನು ಕೋಡಿಂಗ್‌ ಮಾಡಿ ಇಟ್ಟ ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ ಅಲ್ಲವಲ್ಲ!? ಹಾಗೊಂದಮ್ಮೆ ಆಗಿದ್ದಿದ್ದರೆ ಯಾರ ಜೀವನವೂ ಹೆಚ್ಚೂ ಇರುತ್ತಿರಲಿಲ್ಲ, ಕಡಿಮೆಯೂ ಇರುತ್ತಿರಲಿಲ್ಲ. ಎಲ್ಲರೂ, ಎಲ್ಲವೂ ಒಂದೇ ರೀತಿಯಲ್ಲಿ ಒಳ್ಳೆ ಪ್ಲಾಂಟೇಷನ್‌ಗಳಲ್ಲಿ ಬೆಳೆಸಿಟ್ಟ ಗಿಡಗಳಂತೆ ಇರುತ್ತಿತ್ತು. ಒಮ್ಮೆ ನಮ್ಮ ಜೀವನವನ್ನು ಹಾಗೆ ಕಲ್ಪನೆ ಮಾಡಿಕೊಳ್ಳಿ, ಎಷ್ಟು ನೀರಸ ಅನ್ನಿಸುತ್ತಲ್ಲವೇ? ಜಗತ್ತಿನಲ್ಲಿ ಯಾರ ಬಗ್ಗೆ ಯಾರಿಗೂ ಆಸಕ್ತಿ ಇರುತ್ತಿರಲಿಲ್ಲ. ಯಾವುದೂ ವಿಶೇಷವಾಗೇ ಉಳಿದಿರುತ್ತಿರಲಿಲ್ಲ.

ಅದು ಯಾರು ಇಂಥವನ್ನೆಲ್ಲ ಅತಿ ಶಿಸ್ತಿನ ಬದುಕಿನ ಭ್ರಮೆಯನ್ನು ಬಿತ್ತಿಬಿಟ್ಟರೋ ಗೊತ್ತಿಲ್ಲ.ಹುಟ್ಟುತ್ತಲೇ ನಮಗೆ ಹಾಗೆ ಮಾಡಬೇಡ, ಹೀಗೆ ಮಾಡುವುದು ಸಲ್ಲ. ನೀನು ಹೀಗೆಯೇ ಇರಬೇಕು. ಇದನ್ನಷ್ಟೇ ಮಾಡಬೇಕು. ನಾವು ಹಾಕಿದ ಗೆರೆಯನ್ನು ಮೀರಲೇಬೇಡ... ಇಂಥವೆಲ್ಲ ಹೇರಿಕೆಯನ್ನು ಹೆತ್ತವರು ನಡೆಸುತ್ತಲೇ ಬರುತ್ತಿರುತ್ತಾರೆ. ತಪ್ಪಲ್ಲ ಬಿಡಿ. ಮಕ್ಕಳು ಎಲ್ಲಿ ಹಾಳಾಗಿಹೋಗುತ್ತಾರೋ ಎಂಬ ಭಯ, ಆತಂಕ ಹೆತ್ತವರನ್ನು ಕಾಡುವುದು ಸಹಜ. ಆದರೆ ತಪ್ಪಿನ ಅರಿವೇ ಇಲ್ಲದೇ ಬದುಕು ಸುಂದರ, ಸುಗಮವಾಗಲು ಸಾಧ್ಯವೇ ಇಲ್ಲ.

ಇದು ಹಾಗಿರಲಿ. ಒಮ್ಮೆ ಕೆಲ ತರಕಾರಿ ಬೆಳೆಯ ಬಗ್ಗೆ ಚರ್ಚಿಸಿ ಬರೋಣ. ಮನೆಯಲ್ಲೊಂದು ಕುಂಬಳ ಬೀಜವನ್ನು ಹಾಕಿದ್ದೀರಿ ಎಂದಿಟ್ಟುಕೊಳ್ಳಿ. ಸಾಕಷ್ಟು ಮಣ್ಣು, ನೀರು, ಗೊಬ್ಬರ ಎಲ್ಲವನ್ನೂ ಕೊಟ್ಟಿದ್ದೀರಿ. ಬೀಜ ಮೊಳಕೆಯೊಡೆದು, ಚಿಗುರಿ ಬಳ್ಳಿ ಹಬ್ಬಿ, ಸೊಕ್ಕಿ ಬೆಳೆಯುತ್ತದೆ. ಗಿಡದ ಬೆಳವಣಿಗೆಯನ್ನು ಕಂಡು ಸಾಕಷ್ಟು ಕಾಯಿಬಿಡಬಹುದೆಂಬ ಲೆಕ್ಕಾಚಾರ ಶುರುಮಾಡಿರುತ್ತೀರಿ. ಪ್ರತಿ ಗೆಲ್ಲಿಗೂ ಹೂವು ಕಾಣಿಸಿಕೊಳ್ಳುತ್ತದೆ. ಓಹ್, ಇನ್ನೇನು ತಿಂಗಳೊಪ್ಪತ್ತಿನಲ್ಲಿ ರಾಶಿರಾಶಿ ಕುಂಬಳದ ಫಸಲು ಎಂದು ಕಾಯುತ್ತಾ ಕೂತರೆ ನಿಮಗೆ ನಿರಾಸೆ ಕಟ್ಟಿಟ್ಟದ್ದು. ಏಕೆಂದರೆ ಅರಳಿದ ಹೂವು ಹೀಚಾಗಿ ಪರಿವರ್ತನೆಯಾಗದೇ ಉದುರಿ ಬಿದ್ದುಹೋಗುತ್ತದೆ. ಚಿಂತೆಗಿಟ್ಟುಕಳ್ಳುತ್ತದೆ. ಬಂಜೆ ಸಸಿಯಿರಬೇಕೆಂದುಕೊಳ್ಳುತ್ತೀರಿ. ಕೊನೆಗೆ ಯಾರೋ ತುಸು ತಜ್ಞರು ಹೇಳುತ್ತಾರೆ. ಸೊಕ್ಕಿ ಬೆಳೆದ ಬಳ್ಳಿಯ ಕುಡಿಯನ್ನೆಲ್ಲಾ ಚಿವುಟಿ ಸಾಂಬಾರೋ, ಪಲ್ಯವನ್ನೋ ಮಾಡಿಬಿಡಿ. ಮುಂದಿನ ಚಿಗುರಿಗೆ ಒಳ್ಳೆ ಕಾಯಿ ಕಚ್ಚುತ್ತದೆ ಎಂದು.

ADVERTISEMENT

ಅಷ್ಟು ಚೆಂದ ಬೆಳೆದ ಬಳ್ಳಿಯನ್ನು ಕತ್ತರಿಸುವುದೇ? ಹಾಗೆ ಕತ್ತರಿಸಿದರೆ ಗಿಡದ ಬೆಳವಣಿಗೆಗೆ ‘ಕ್ಕೆಯಾಗುವುದಿಲ್ಲವೇ? ಗಿಡ ಸೊರಗಿದರೆ ಕಾಯಿ ಬಿಡುವುದಾದರೂ ಹೇಗೆ? ಇಂಥವೆಲ್ಲ ಸಂದೇಹ ಸಹಜ. ಆದರೆ ನಿಜವಾಗಿ ಬಳ್ಳಿ ಹೀಗೆ ಸೊಂಪಾಗಿ ಬೆಳೆದದ್ದೇ ಫಸಲಿಗೆ ಮಾರಕ. ಒಂದೆರಡು ಸಲ ಹೀಗೆ ಚಿಗುರು ಚಿವುಟಿದ ಬಳಿಕ ಒಳ್ಳೆಯ ಬೆಳೆ ಬರುತ್ತದೆ.

ಜೀವನದಲ್ಲಿ ಮಾಡುವ ತಪ್ಪುಗಳೆಂದರೆ ಸೊಂಪಾಗಿ ಬೆಳೆದ ಬಳ್ಳಿಯ ಕುಡಿ ಚಿವುಟಿದ ಹಾಗೆಯೇ. ತಪ್ಪುಗಳು ಒಮ್ಮೊಮ್ಮೆ ನಮ್ಮ ಬೆಳವಣಿಗೆಯನ್ನು ಚಿವುಟುತ್ತವೆ. ಆದರೆ, ಅದು ಜೀವನವನ್ನು ಹೇಗೆ ಎದುರಿಸಬೇಕು ಎಂಬುದರ ಅನುಭವ ನೀಡುತ್ತವೆ. ಹಾಗೆಂದು ತಪ್ಪು ಮಾಡುವುದೇ ಜೀವನದ ಉದೇಶವೂ ಅಲ್ಲ. ಎಲ್ಲ ಪಾಠಗಳನ್ನೂ ನಾವು ತಪ್ಪು ಮಾಡಿಯೇ ಕಲಿಯಬೇಕೆಂದೇನೂ ಇಲ್ಲ. ಗೊತ್ತಿದ್ದೂ ತಪ್ಪು ಮಾಡುವುದು ಮೂರ್ಖತನವೆಂದೂ ಅನಿಸಿಕೊಳ್ಳುತ್ತದೆ. ಆದರೆ ಅರಿವಿಲ್ಲದೇ ತಪ್ಪು ಮಾಡುವ ಅವಕಾಶವನ್ನು ಮಿಸ್ ಮಾಡಿಕೊಳ್ಳುವಂತಿಲ್ಲ. ಏಕೆಂದರೆ ಈಗ ನಾವು ತಪ್ಪು ಮಾಡದೇ ಹೋದರೆ ನಿವೃತ್ತಿ ಜೀವನದಲ್ಲಿ ನೆನೆಪಿಸಿಕೊಂಡು ನಗುವ, ಕಿರಿಯರಿಗೆ ಉಪದೇಶ ಕೊಡುವ ಅವಕಾಶದಿಂದ ವಂಚಿತರಾಗುತ್ತೇವೆ. ಇನ್ನೊಂದು ಮಾತು ನೀವು ಜೀವನದಲ್ಲಿ ತಪ್ಪನ್ನೇ ಮಾಡಿಲ್ಲವೆಂದರೆ, ಯಾವ ಸಾಧನೆಯನ್ನೂ ಮಾಡಲಾಗದ ನಿಷ್ಪ್ರಯೋಜಕರು ಎಂದೇ ಅರ್ಥ. ಹಳೇ ಗಾದೆ ಗೊತ್ತಿಲ್ಲವೇ? ನಡೆವವರು ಎಡವದೇ, ಕುಳಿತವರು ಎಡವಿಯಾರೇ? ಹಾಗಾಗಿ ಆಗಿ ಹೋದ ತಪ್ಪಿಗೆ ತೆಲೆಕೆಡಿಸಿಕೊಂಡು ಕೊರಗುತ್ತಾ ಕೂರುವ, ಅದೇ ಕಾರಣಕ್ಕೆ ಏನೇನೋ ನಿರ್ಧಾರಗಳಿಗೆ ಮುಂದಾಗುವ ಬದಲು, ಹೊಸ ತಪ್ಪು ಮಾಡಲು ಅವಕಾಶ ನೀಡುವ ಪ್ರಯತ್ನಶೀಲತೆಯತ್ತ ಜೀವನವನ್ನು ಹೊರಳಿಸಿಕೊಳ್ಳೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.