ADVERTISEMENT

ಪಿವಿ ವೈಬ್ಸ್‌: ಮೂಗಿನ ಕೆಳಗೆ ಮೆತ್ತಿದ್ದನ್ನು ಒರೆಸಿಕೊಳ್ಳಿ!

ಸಹನೆ
Published 31 ಜನವರಿ 2026, 2:30 IST
Last Updated 31 ಜನವರಿ 2026, 2:30 IST
<div class="paragraphs"><p>ಕಾಲ್ಪನಿಕ ಚಿತ್ರ</p></div>

ಕಾಲ್ಪನಿಕ ಚಿತ್ರ

   

ಎಐ ಚಿತ್ರ

ಎಲ್ಲಿಯೋ, ಹೇಗೋ ಅಂತೂ ಮೀಸೆಗೆ (ಮೀಸೆ ಇಲ್ಲದವರು ಮೂಗಿನ ಕೆಳಭಾಗ ಎಂದುಕೊಳ್ಳಿ) ಎಂಥದ್ದೋ ಬಡಿದು ಹೋಗುತ್ತದೆ. ಅದು ಅರಿವಿಗೂ ಬರುವುದಿಲ್ಲ. ಆದರೆ ಅದರ ಪರಿಣಾಮ ಮಾತ್ರ ನಿಮ್ಮ ಮೇಲೆ ಆಗಲಾರಂಭಿಸುತ್ತದೆ. ಕೆಟ್ಟಾತಿಕೆಟ್ಟ ವಾಸನೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ತಕ್ಷಣವೇ ನೀವು ವಾಸನೆಯ ಮೂಲವನ್ನು ಹುಡುಕಲಾರಂಭಿಸುತ್ತೀರಿ. ಎಲ್ಲಿಂದ ಇಂಥ ದುರ್ನಾಥ ರಾಚುತ್ತಿರಬಹುದು ಎಂಬುದು ತಿಳಿಯದೇ, ಸಂದುಗೊಂದಿಗಳನ್ನು ಹುಡುಕುತ್ತೀರಿ.

ADVERTISEMENT

ಊಹೆಗಳು ಆರಂಭವಾಗುತ್ತವೆ. ಹೊರಗಡೆ ಹೋದಾಗ ಕಾಲಿಗೆ ಏನಾದರೂ ಮೆತ್ತಿಕೊಂಡುಬಿಟ್ಟಿದೆಯೇ ಎಂಬ ಅನುಮಾನ. ಅಥವಾ ಮಂಚದ ಕೆಳಗೋ, ಬೀರುವಿನ ಎಜ್ಜೆಯಲ್ಲೋ ಇಲಿಯೇನಾದರೂ ಸತ್ತು ಬಿದ್ದಿರಬಹುದೇ? ಮನೆಯ ಬೆಕ್ಕು ಹೊರಗಡೆಯಿಂದ ಏನನ್ನಾದರೂ ತಿಂದು ಬಂದಿರಬಹುದೇ? ನಾಯಿ ತಂದು ಹಾಕಿದ ಹೊಲಸಿರಬಹುದೇ? ಅಡುಗೆ ಮನೆಯಲ್ಲಿ ಏನಾದರೂ ಹಳಸಿ, ಕೊಳೆತು ಹೋಗಿರಬಹುದೇ? ಅರಿವಿಲ್ಲದೇ ಏನಾದರೂ ವಾಸನೆಯ ವಸ್ತುವನ್ನು ಮುಟ್ಟಿಬಿಟ್ಟಿರಬಹುದೇ? ಹಾಲು, ಮಜ್ಜಿಗೆ ಏನಾದರೂ ಚೆಲ್ಲಿ ಒರೆಸಿದ ಬಟ್ಟೆಯನ್ನು ತೊಳೆಯದೇ ಹಾಗೆಯೇ ಇಟ್ಟಿರಬಹುದೇ? ಪ್ರಿಡ್ಜ್‌, ಎ.ಸಿಯ ನೀರು ಕೊಳೆತು ಹೋಗಿರಬಹುದೇ? ಹೀಗೆ ಮನಸಿಗೆ ತೋಚಿದ ಕಡೆಯಲ್ಲೆಲ್ಲಾ ಹೋಗಿ ನೋಡಿ, ಏನೆಲ್ಲವನ್ನೂ ಹುಡುಕಾಡುತ್ತೇವೆ. ಆದರೆ ಅದ್ಯಾವುದೂ ಅಲ್ಲದಿದ್ದರೂ ವಾಸನೆ ಮಾತ್ರ ಹೆಚ್ಚುತ್ತಲೇ ಹೋಗುತ್ತಿರುತ್ತದೆ. ಹಾಳಾಗಿ ಹೋಗಲಿ ಎಂದು ಮನೆಯಿಂದ ಹೊರಗೆ ಹೋದರೆ ಅಲ್ಲಿಯೂ ವಾಸನೆ ಹಿಂಬಾಲಿಸುತ್ತದೆ. ಎಲ್ಲೋ ವಾಸನೆಯ ಭ್ರಮೆ ತುಂಬಿಕೊಂಡಿರಬಹುದೆಂಬ ನಿರ್ಧಾರಕ್ಕೆ ಬಂದಿರುತ್ತೀರಿ. ಕೊನೆಗೂ ನಿಮ್ಮನ್ನು ಕಾಡುತ್ತಿರುವ ವಾಸನೆಯ ಕೇಂದ್ರ ಬಿಂದು ಮೂಗಿನಿಂದ ತುಸುವೇ ಕೆಳಗಿದೆ ಎಂಬುದು ಗೊತ್ತಾಗುವುದೇ ಇಲ್ಲ.

ಇದೊಂದು ಘಟನೆಯಷ್ಟೆ. ಬದುಕಿನಲ್ಲೂ ಹಾಗೆಯೇ ಸಮಸ್ಯೆ ಎಂಬುದು ನಮ್ಮ ಮೂಗಿನ ಕೆಳಗೇ ಇರುತ್ತದೆ. ಆದರೆ ಅದನ್ನು ನಾವು ಗುರುತಿಸುವಲ್ಲಿ ವಿಫಲರಾಗುತ್ತೇವೆ. ಬಹುತೇಕ ಸಂದರ್ಭದಲ್ಲಿ ಸಮಸ್ಯೆಯ ಮೂಲ ಎಲ್ಲಿದೆ ಎಂಬುದು ಗೊತ್ತಾಗುವ ವೇಳೆಗಾಗಲೇ ಏನೆಲ್ಲ ಆಗಬಾರದೋ ಅದೆಲ್ಲವೂ ಆಗಿಬಿಟ್ಟಿರುತ್ತದೆ. ನಿಜವಾಗಿಯೂ ಸಮಸ್ಯೆಗೆ ಸಿಲುಕಿಕೊಂಡಿರುವ ಸಂದರ್ಭಗಳಲ್ಲಿ ನಾವು ನಮ್ಮ ವಿವೇಚನೆಯನ್ನೇ ಕಳೆದುಕೊಂಡುಬಿಟ್ಟಿರುತ್ತೇವೆ. ಹಾಗೆಂದು ನಮ್ಮ ಮನಸ್ಸು ಸುಮ್ಮೆನೆ ಕುಳಿತುಕೊಳ್ಳುವುದಿಲ್ಲವಲ್ಲಾ? ಹಾಗೆ ಸುಮ್ಮನೆ ಕುಳಿತುಕೊಳ್ಳಲು ಸಮಸ್ಯೆ ಬಿಡಬೇಕಲ್ಲ ! ಅದು ವಾಸನೆಯಂತೆಯೇ; ಮತ್ತೆ ಮತ್ತೆ ರಾಚಿಕೊಂಡು ಬಂದು ನಮ್ಮನ್ನು ಆವರಿಸಿಕೊಳ್ಳುತ್ತಿರುತ್ತದೆ. ಹೀಗಾಗಿ ಇಂಥ ಸನ್ನಿವೇಶದಲ್ಲಿ ನಮ್ಮ ಯೋಚನೆಗಳು ಎಲ್ಲೆಲ್ಲಿಯೋ ಸುತ್ತಾಡುತ್ತಿರುತ್ತದೆಯೇ ಹೊರತೂ, ನಮ್ಮ ಅವಲೋಕನಕ್ಕೆ ನಾವು ಒಡ್ಡಿಕೊಳ್ಳಲು ಹೋಗುವುದೇ ಇಲ್ಲ.

ಬಹುತೇಕ ಸಮಸ್ಯೆಗಳ ಮೂಲ ನಮ್ಮ ಬುಡದಲ್ಲಿಯೇ ಇರುತ್ತದೆ. ಒಮ್ಮೆ ಅದನ್ನು ಗ್ರಹಿಸಿ, ನಿವಾರಿಸಿಬಿಟ್ಟರೆ ಅದರ ಸುತ್ತಣ ಹತ್ತೆಂಟು ಸಂಕಟಗಳೂ ದೂರಾಗುತ್ತವೆ. ಅದನ್ನು ಬಿಟ್ಟು ಏನೆಲ್ಲವನ್ನೂ ಮಾಡುತ್ತಲೇ ಇರುತ್ತೇವೆ. ಹಾಗಾದರೆ, ಹೀಗಾದೀತು; ಹೀಗಾದರೆ ಹಾಗಾಬಹುದೇನೋ ಎಂಬ ಊಹಾತ್ಮಕ ಲೆಕ್ಕಾಚಾರಗಳಲ್ಲೇ ನಾವು ಸಮಯ ವ್ಯರ್ಥ ಮಾಡುತ್ತೇವೆಯೇ ವಿನಃ ವಾಸ್ತವವನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ.

ಬದುಕೆಂಬುದು ಊಹಾತ್ಮಕವಲ್ಲ. ಅದು ವಸ್ತುಸ್ಥಿತಿಯ ಮೇಲೆ ನಿಂತದ್ದು. ಎಲ್ಲ ಸಂದರ್ಭದಲ್ಲೂ ಕಲ್ಪನೆಯಲ್ಲೇ, ಭ್ರಮೆಯಲ್ಲೇ ಹೊರಟುಬಿಟ್ಟರೆ ಯಶಸ್ಸು ಸಿಗಲು ಸಾಧ್ಯವೇ ಇಲ್ಲ. ಅದಕ್ಕೆ ಒಂದಷ್ಟು ತಾಳ್ಮೆ, ವಿವೇಚನೆ ಮತ್ತೊಂದಿಷ್ಟು ಖಚಿತತೆ ಬೇಕು. ನಮ್ಮನ್ನು ಸುತ್ತಿಕೊಳ್ಳುವ ಸಮಸ್ಯೆಯ ಮೂಲಕ್ಕೇ ಕೈ ಹಾಕಬೇಕು. ಅಲ್ಲಿ ಅದನ್ನು ಬೇರು ಸಹಿತ ಕಿತ್ತೊಗೆಯಬೇಕು. ಆಗಲೇ ನೆಮ್ಮದಿಯ ಬದುಕು ಕಾಣಲು ಸಾಧ್ಯ. ಇವತ್ತೇ ನಿರ್ಧರಿಸಿ, ಎದ್ದು ಹೊರಟುಬಿಡಿ, ಆದದ್ದಾಗಲಿ. ತಾಳ್ಮೆ–ವಿವೇಚನೆಗಳನ್ನು ಕಳೆದುಕೊಳ್ಳದೇ ಧೈರ್ಯವಾಗಿ ಸನ್ನಿವೇಶವನ್ನು ಎದುರಿಸುವುದನ್ನು ರೂಡಿಸಿಕೊಳ್ಳಿ. ಸಮಸ್ಯೆಗಳು ತನ್ನಿಂದ ತಾನೆಯೇ ಕರಗಲಾರಂಭಿಸುತ್ತವೆ. ಈ ಜಗತ್ತಿನಲ್ಲಿ ಯಾವುದೂ ಶಾಸ್ವತವಲ್ಲ; ನಮಗೆದುರಾಗುವ ಸಮಸ್ಯೆಗಳು, ಕಷ್ಟಗಳಿಗೂ ಈ ಮಾತು ಅನ್ವಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.