
ಓಶೋ
ಮುಲ್ಲಾ ನಸರುದ್ದೀನ್‌ನ ಮೇಲೆ ನ್ಯಾಯಾಲಯದಲ್ಲಿ ಒಂದು ದೂರು ದಾಖಲಾಯಿತು; ಆರೋಪದ ಬಗ್ಗೆ ವಿಚಾರಣೆಯೂ ಆರಂಭವಾಯಿತು. ಅವನು ಹಲವು ಮದುವೆಗಳನ್ನು ಮಾಡಿಕೊಂಡು, ಆ ಮೂಲಕ ಹಲವರು ಹೆಣ್ಣುಗಳಿಗೆ ವಂಚಿಸಿ ಅನ್ಯಾಯ ಮಾಡಿದ್ದಾನೆ ಎನ್ನುವುದು ಅವನ ಮೇಲೆ ಬಂದಿದ್ದ ದೂರು. ಇದು ನಿಜ ಎಂದು ಹಲವರಿಗೆ ತಿಳಿದಿದ್ದ ಸಂಗತಿಯೇ. ಆದರೆ ಯಾರಲ್ಲೂ ಅವನ ಈ ಅನ್ಯಾಯವನ್ನು ನಿರೂಪಿಸಬಲ್ಲ ಸಾಕ್ಷ್ಯಗಳು ಇರಲಿಲ್ಲ. ಆದರೂ ಯಾರೋ ಒಬ್ಬರು ಅವನ ಮೇಲೆ ದೂರನ್ನಂತೂ ಕೊಟ್ಟರು.
ವಿಚಾರಣೆಯ ದಿನ ನಸರುದ್ದೀನನಿಗೆ ಅವನ ವಕೀಲ ಎಚ್ಚರಿಕೆಯನ್ನು ಕೊಟ್ಟ: ’ನೀನು ಯಾವುದೇ ಕಾರಣಕ್ಕೂ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಎದುರಿನಲ್ಲಿ ಬಾಯಿ ತೆಗೆಯಬೇಡ; ಮೌನವಾಗಿದ್ದುಬಿಡು. ಉಳಿದ ಸಂಗತಿಗಳನ್ನು ನಾನು ನೋಡಿಕೊಳ್ಳುವೆ.’
ಮುಲ್ಲಾ ನಸರುದ್ದೀನ್ ಹಾಗೆಯೇ ವಿಚಾರಣೆಯ ವೇಳೆ ಮೌನವಾಗಿಯೇ ಇದ್ದ; ಆದರೆ ತುಂಬ ಕಷ್ಟಪಟ್ಟು ಸಂಯಮದಿಂದ ಇದ್ದ. ಅವನ ಒಳಗೆ ಹತಾಶೆ, ಕೋಪ, ಅಸಹನೆ – ಎಲ್ಲವೂ ಕುದಿಯುತ್ತಿದ್ದವು; ಆದರೂ ತುಟಿಯನ್ನು ಬಿಚ್ಚದೆ ಸುಮ್ಮನಿದ್ದ. ಅವನನ್ನು ತಪಿತಸ್ಥ ಎಂದು ಘೋಷಿಸಲು ಬೇಕಾದ ಯಾವೊಂದು ಸಾಕ್ಷ್ಯವೂ ನ್ಯಾಯಾಲಯಕ್ಕೆ ದಕ್ಕಲಿಲ್ಲ. ನ್ಯಾಯಾಧೀಶರಿಗೂ ಅವನ ಮದುವೆಗಳ ವಿಷಯ ಚೆನ್ನಾಗಿಯೇ ಗೊತ್ತಿತ್ತು. ಆದರೆ ಏನು ಮಾಡುವುದು, ಅವನ ವಿರುದ್ಧ ಯಾವೊಂದು ಸಾಕ್ಷ್ಯವೂ ದೊರೆಯುವಂತಿರಲಿಲ್ಲ. ಹೀಗಾಗಿ ಬೇರೆ ದಾರಿಯಿರದೆ, ನ್ಯಾಯಾಧೀಶರು ಮುಲ್ಲಾನನ್ನು ಬಿಡುಗಡೆಗೊಳಿಸಲೇ ಬೇಕಾಯಿತು.
ನ್ಯಾಯಾಧೀಶರು ಹೇಳಿದರು: ‘ಮುಲ್ಲಾ ನಸರುದ್ದೀನ್! ನಿನ್ನನ್ನು ಬಿಡುಗಡೆಗೊಳಿಸಿರುವೆ. ಈಗ ನೀನು ಮನೆಗೆ ಹೋಗಬಹುದು.’
ಒಂದು ಕ್ಷಣ ಮುಲ್ಲಾ ನಸರುದ್ದೀನನಿಗೆ ಗಲಿಬಿಲಿ ಉಂಟಾಯಿತು. ಗಡಿಬಿಡಿಯಲ್ಲೇ ನ್ಯಾಯಾಧೀಶರನ್ನು ಕೇಳಿದ: ’ಸ್ವಾಮಿ! ನಾನೀಗ ಯಾವ ಹೆಂಡತಿಯ ಮನೆಗೆ ಹೋಗಬೇಕು ಎಂದು ಅಪ್ಪಣೆಯಾಗಬೇಕು!!’
**
ಮಾತು–ಮೌನಗಳ ದಿಟವಾದ ಲಕ್ಷಣವನ್ನು ಹೇಳುವ ಸಂದರ್ಭದಲ್ಲಿ ಓಶೋ ಈ ಕಥೆಯನ್ನು ಹೇಳಿದ್ದಾರೆ.
ನಾವು ಎಷ್ಟು ಬಚ್ಚಿಟ್ಟುಕೊಂಡರೂ ನಮ್ಮ ನಿಜವಾದ ಸ್ವಭಾವ ನಮ್ಮಿಂದ ಮರೆಯಾಗದಲ್ಲವೆ? ಹಲಸಿನ ಹಣ್ಣನ್ನು ನಾವು ಯಾರಿಗೂ ಕಾಣದಂತೆ ಅಡಗಿಸಿಡಬಹುದು; ಆದರೆ ಅದು ಕಳತು ಹಣ್ಣಾದಾಗ ಅದರ ಪರಿಮಳವನ್ನು ಅಡಗಿಡಿಸಲಾದೀತೆ? ಹೀಗೆಯೇ ನಮ್ಮ ಸಹಜ ಗುಣಗಳನ್ನು ನಿಗ್ರಹಿಸುವುದೂ ಸುಲಭವಲ್ಲವಷ್ಟೆ.
ಉದಾಹರಣೆಗೆಂದು ಇಲ್ಲೊಂದು ವಿದ್ಯಮಾನವನ್ನು ವಿಶ್ಲೇಷಿಸಬಹುದು ಎನಿಸುತ್ತದೆ. ಶಬರಿಮಲೆಗೆ ಯಾತ್ರೆ ಹೋಗುವ ‘ಸ್ವಾಮಿ’ಗಳಿಗೆ ಕೆಲವೊಂದು ಕಟ್ಟುಪಾಡುಗಳಿರುತ್ತವೆ. ಅವುಗಳಲ್ಲಿ ಒಂದು, ಮಾಲೆಹಾಕಿರುವ ‘ಸ್ವಾಮಿ’ಗಳು ಎಲ್ಲರನ್ನೂ ಗೌರವದಿಂದ ಸಂಬೋಧಿಸಬೇಕು. ಇದು ಮೇಲ್ನೋಟಕ್ಕೆ ತುಂಬ ಸುಲಭದ ಕಟ್ಟುಪಾಡು ಎನಿಸುತ್ತದೆ. ಆದರೆ ನಾವು ಕೆಲವರು ‘ಸ್ವಾಮಿ’ಗಳನ್ನು ಗಮನಿಸಲು ತೊಡಗಿದರೆ ಆಗ ಈ ಸಾಧನೆ ಎಷ್ಟು ಕಷ್ಟ ಎಂಬುದು ಮನವರಿಕೆಯಾಗುತ್ತದೆ. ಎಲ್ಲರನ್ನೂ ಅಗೌರವದಿಂದಲೋ ಏಕವಚನದಲ್ಲೋ ವ್ಯವಹರಿಸುವ ದರ್ಪ ಕೆಲವರ ಸಹಜ ಸ್ವಭಾವವಾಗಿರುತ್ತದೆ. ಅಂಥವರು ಅಯ್ಯಪ್ಪನ ಮಾಲೆಯನ್ನು ಹಾಕಿಕೊಂಡರು ಎಂದಿಟ್ಟುಕೊಳ್ಳೋಣ. ಎದುರಿಗಿರುವವರನ್ನು ಇವರು ಹೇಗೆ ಮಾತನಾಡಿಸುತ್ತಾರೆ? ‘ನಾನು ಅಯ್ಯಪ್ಪನ ಮಾಲೆಯನ್ನು ಧರಿಸಿದ್ದೇನೆ’ ಎಂದು ನೆನಪಾಗಿ ಮೊದಲ ಸಲಕ್ಕೆ ನೆನಪಾಗಿ ಅವರನ್ನು ಗೌರವದಿಂದ ಕರೆದಾರು. ಎದುರಿಗಿನ ವ್ಯಕ್ತಿ ಅದಕ್ಕೆ ಸ್ಪಂದಿಸಲಿಲ್ಲ ಎಂದಿಟ್ಟುಕೊಳ್ಳಿ. ಆಗ ಈ ‘ಸ್ವಾಮಿ’ ಅ ಆಸಾಮಿಯನ್ನು ಹೆಸರಿಟ್ಟು ಕರೆಯಬಹುದು. ಆಗಲೂ ಸ್ಪಂದಿಸಲಿಲ್ಲ ಎಂದರೆ, ಆಗ ‘ಸ್ವಾಮಿ’ಗೆ ಸಿಟ್ಟು ಬರುವುದು ಸಹಜ. ಈ ಸಲ ಗೌರವವೂ ಇಲ್ಲ, ಹೆಸರೂ ಇಲ್ಲ, ನೇರ ಏಕವಚನವೋ ಅಥವಾ ಬೈಗುಳವೋ ‘ಸ್ವಾಮಿ’ಯ ವದನದಿಂದ ಹೊರಹೊಮ್ಮುವುದು! ಇದು ಸಹಜ; ಏಕೆಂದರೆ ಬಲವಂತದಿಂದ ನಮ್ಮೊಳಗೆ ಅದುಮಿಟ್ಟುಕೊಂಡಿರುವ ನಮ್ಮ ‘ಸಹಜ’ತೆಯನ್ನು ಹೆಚ್ಚಿನ ಸಮಯ ನಿಯಂತ್ರದಲ್ಲಿಡಲು ಆಗದು; ತಕ್ಕ ಅವಕಾಶ ಸಿಕ್ಕ ಕೂಡಲೇ ಅದು ಒಮ್ಮೆಲೇ ಪುಟ್ಟಿಯುತ್ತ ಹೊರಗೆ ಬಂದು ಕುಣಿಯತೊಡಗುತ್ತದೆ!
ಇತರರಿಗೆ ಯಾವಾಗಲೂ ಕೆಟ್ಟದ್ದನ್ನೇ ಬಯಸುವವರು ನಮ್ಮ ನಡುವೆ ಇರುತ್ತಾರೆ. ಅವರು ತಮ್ಮ ಆ ಅಯೋಗ್ಯತನವನ್ನು ಎಷ್ಟು ಮುಚ್ಚಿಟ್ಟುಕೊಳ್ಳಲು ಬಯಸಿದರೂ ಅದು ಅವರಿಂದ ಹೇಗಾದರೂ ಹೊರಹೊಮ್ಮುವುದು ಖಂಡಿತ. ಅವರ ಈ ನೀಚತನವನ್ನು ಬಯಲು ಮಾಡಲು ಅವರು ನಮ್ಮೊಂದಿಗೆ ಗಂಟೆಗಳ ಕಾಲ ಮಾತನಾಡಬೇಕಿಲಲ್ಲ; ಅವರ ಒಂದೇ ಮಾತು, ಅಷ್ಟೇಕೆ' ಒಂದೇ ಪದವೂ ಸಾಕಾಗುತ್ತದೆ, ಅವರ ಒಳಗಿನ ಗುಟ್ಟನ್ನು ರಟ್ಟು ಮಾಡಲು! ಅವರು ನಮಗೆ ಒಳಿತನ್ನು ಬಯಸುತ್ತ ಆಡುವ ಗಿಲೀಟು ಮಾತಿನಲ್ಲೇ ಅವರ ಅಂತರಂಗದ ದುಷ್ಟತನವನ್ನು ನಾವು ಗ್ರಹಿಸಬಹುದಾಗಿರುತ್ತದೆ.
ಮೌನ ಎನ್ನುವುದು ನಮ್ಮ ಸಹಜ ಗುಣವಾಗಿರದಿದ್ದರೆ ನಾವು ಮೌನದಲ್ಲಿ ಒಂದು ಕ್ಷಣವೂ ನಿಲ್ಲಲಾರೆವು; ಮಾತನ್ನು ಆಡದಿದ್ದ ಮಾತ್ರಕ್ಕೆ ನಮ್ಮಲ್ಲಿ ಮೌನ ನೆಲಸಿರುತ್ತದೆ ಎಂದೇನಲ್ಲ. ನಾವು ಹೊರಗೆ ಮಾತನ್ನು ಆಡದೆ ಇರಬಹುದು; ಆದರೆ ಅಂತರಂಗದಲ್ಲಿ ನಮ್ಮ ವಾಚಾಳಿತನ ತನ್ನ ಚೇಷ್ಟೆಗಳನ್ನು ನಡೆಸುತ್ತಲೇ ಇರುತ್ತದೆ. ಇದು ಯಾವುದೇ ಸಾಧನೆಯ ಸಂದರ್ಭಕ್ಕೂ ಅನ್ವಯವಾಗುವ ಮಾತು. ಹೀಗಾಗಿಯೇ ನಾವು ಒಳಿತನ್ನು ನುಡಿಯುವ, ಒಳಿತನ್ನು ಬಯಸುವ, ಒಳಿತನ್ನೇ ನೋಡುವ ಒಳಿತಿನ ಒಡತನವನ್ನು ತುಂಬ ಎಚ್ಚರಿಕೆಯಿಂದಲೂ ಕುಶಲತೆಯಿಂದಲೂ ಪರಿಶ್ರಮದಿಂದಲೂ ಸಂಪಾದಿಸಿಕೊಳ್ಳಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.