ಸಕಾರಾತ್ಮಕ ಸಂಗತಿ
ಎಐ ಚಿತ್ರ
ಅವಮಾನ ಎಂಬುದು ರಾತ್ರಿಯಿದ್ದಂತೆ. ಸನ್ಮಾನ ಎಂಬುದು ಹಗಲಿದ್ದಂತೆ. ಇವೆರಡೂ ನಿರೀಕ್ಷಿತ. ಹಗಲಾದ ಮೇಲೆ ರಾತ್ರಿ ಆಗೇ ಆಗುತ್ತದೆ. ರಾತ್ರಿ ಕಳೆದು ಮತ್ತೆ ಬೆಳಗಾಗೇ ಆಗುತ್ತದೆ. ಮತ್ತು ಅದನ್ನು ಯಾವುದೇ ಕಾರಣಕ್ಕೂ ನಾವು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಯಾವ ವ್ಯಕ್ತಿಯೂ ಇದರಿಂದ ಹೊರತಲ್ಲ. ನಾವೀಗ ಬೆಳಕಿನಲ್ಲಿ ಇದ್ದೇವೆ ಎಂದರೆ ನಮ್ಮ ಮುಂದೆ ರಾತ್ರಿ ಬಂದೇ ಬರುತ್ತದೆ. ಕತ್ತಲು ಕವಿದೇ ಕವಿಯುತ್ತದೆ ಎಂದೇ ಅರ್ಥ. ಅದರಲ್ಲಿ ಅಪೇಕ್ಷಿತ– ಅನಪೇಕ್ಷಿತ ಎಂಬ ಪ್ರಶ್ನೆಯೇ ಇಲ್ಲ.
ಹಾಗಿದ್ದೂ ಯಾರೊಬ್ಬರೂ ಕತ್ತಲೆಯನ್ನು ಬಯಸುವುದೇ ಇಲ್ಲವಲ್ಲ ಏಕೆ? ಕತ್ತಲೇ ಬೇಡವೇ ಬೇಡ, ಸದಾ ಬೆಳಕೇ ಇರಲಿ ಎಂದು ನಮ್ಮಲ್ಲಿ ಬಹುತೇಕರು ಬಯಸುತ್ತಾರೆ. ಇನ್ನೊಂದು ವರ್ಗದ ಜನರಿರುತ್ತಾರೆ, ಅವರಿಗೆ ಬೆಳಕೆಂದರೆ ಅಲರ್ಜಿ. ಹಾಗೆ ಕತ್ತಲೆಯನ್ನು ಬಯುಸುವ ಮಂದಿ ಒಂದೋ, ಜಗತ್ತನ್ನು ಎದುರಿಸುವ ಮನಃಸ್ಥಿತಿಯಲ್ಲಿ ಇರುವುದಿಲ್ಲ ಅಥವಾ ಅವರ ‘ವ್ಯವಹಾರ’ಗಳೆಲ್ಲವೂ ನಡೆಯುವುದೇ ಕತ್ತಲೆಯಲ್ಲಿ ಮಾತ್ರ. ಅಂಥವರು ಸಹಜವಾಗಿ ಬೆಳಕನ್ನು ಬಯಸುವುದೇ ಇಲ್ಲ. ಅದು ಬೇರೆಯದೇ ವಿಷಯ.
ಅದೆಲ್ಲ ಹಾಗಿರಲಿ... ನಿಜವಾಗಿ ಬೆಳಕೆಂದರೆ ಚಟುವಟಿಕೆ. ಅದು ಜಾಗೃತಿ. ಅದು ಆಶಾಭಾವದ ಪ್ರತೀಕ. ಅದೇ ಸ್ಪಷ್ಟ. ಅಲ್ಲಿ ನಮಗೆ ಯಾವ ಕೆಲಸ ಮಾಡಲೂ ಕಷ್ಟವಾಗುವುದೇ ಇಲ್ಲ. ಹೀಗಾಗಿ ಎಲ್ಲರೂ ಬೆಳಕನ್ನು ಇಷ್ಟಪಡುವುದು ಸಹಜ. ಹಾಗೆಯೇ ಸನ್ಮಾನವನ್ನು ಸಹ. ನಮ್ಮನ್ನು ಎಲ್ಲರೂ ಹೊಗಳುತ್ತಿರಲಿ. ನಾವು ಎಲ್ಲರಿಂದ ಶ್ಲಾಘನೆಗೆ ಒಳಗಾಗುತ್ತಿರಬೇಕು. ನಮ್ಮನ್ನು ಎಲ್ಲರೂ ಗೌರವಿಸಬೇಕು... ಇದು ಎಲ್ಲರ ಬಯಕೆಯಾಗಿರುತ್ತದೆ. ತಪ್ಪೇನೂ ಇಲ್ಲ.
ಇನ್ನು ರಾತ್ರಿಯ ವಿಚಾರಕ್ಕೆ ಬಂದರೆ ಅಲ್ಲಿ ಎಲ್ಲವೂ ಅಸ್ಪಷ್ಟ. ಅದು ಎಷ್ಟೇ ತಣ್ಣಗಿದ್ದರೂ ರಾತ್ರಿಯ ಕತ್ತಲೆಯ ಬಗ್ಗೆ ಅದೇನೋ ಅವ್ಯಕ್ತ ಆತಂಕ, ಭಯ. ಏನೂ ಇಲ್ಲದಿದ್ದರೂ ಏನೋ ಇದ್ದಿರಬಹುದು ಎಂಬ ಶಂಕೆ. ಬೆಳಕಿಲ್ಲ ಎಂಬ ಪೂರ್ವಗ್ರಹ ಇದಕ್ಕೆ ಒಂದು ಕಾರಣವಾದರೆ ಕತ್ತಲೆಯ ದುರುಪಯೋಗ ಪಡೆಯುವ ಶಕ್ತಿಗಳಿವೆ ಎಂಬ ಎಚ್ಚರವೂ ನಮ್ಮ ನೆಮ್ಮದಿಯನ್ನು ಕೆಡಿಸುತ್ತದೆ. ಹೀಗಾಗಿ ರಾತ್ರಿಯ ಕತ್ತಲೆಯನ್ನು ಪ್ರೀತಿಸುವವರು ತೀರಾ ವಿರಳ. ಹಾಗೆಯೇ ಅವಮಾನವನ್ನು ಸಹ. ಜೀವನದಲ್ಲಿ ಎಲ್ಲಿ ಅವಮಾನವಾಗಿಬಿಡುತ್ತದೋ, ಇದರಿಂದ ನಮ್ಮ ವ್ಯಕ್ತಿತ್ವಕ್ಕೆ ಎಲ್ಲ ಕಂಟಕ ಬಂದು ಬಿಡುತ್ತದೋ. ನಮ್ಮದಲ್ಲದ ತಪ್ಪಿಗೆ ವೃಥಾ ಆರೋಪವನ್ನು ಹೊರಬೇಕಾಗಿ ಬಂದುಬಿಡುತ್ತದೋ ಎಂಬ ಆತಂಕ ನಮ್ಮನ್ನು ಕಾಡುತ್ತಲೇ ಇರುತ್ತದೆ. ಸನ್ನಿವೇಶದ ದುರ್ಲಾಭ ಪಡೆಯುವ ಶಕ್ತಿಗಳ ಕುಹಕ, ವ್ಯಂಗ್ಯ ಈ ಕ್ಷಣದಲ್ಲಿ ನಮ್ಮನ್ನು ಇನ್ನಷ್ಟು ಕಂಗೆಡಿಸುತ್ತದೆ. ಹೀಗಾಗಿ ಅವಮಾನಕ್ಕೆ ನಾವು ಹೆದರುತ್ತೇವೆ.
ಇದರ ಇನ್ನೊಂದು ಮುಖವನ್ನು ಗ್ರಹಿಸಿ. ರಾತ್ರಿ ಎಂಬುದು ವಿಶ್ರಾಂತಿಯ ದೃಷ್ಟಿಯಿಂದ, ದಿನದ ಕೆಲಸಕ್ಕೆ ಮತ್ತೆ ನವ ಚೇತನ ಪಡೆಯುವ ಕಾರಣಕ್ಕೆ ನಮಗೆ ತೀರಾ ಅನಿವಾರ್ಯ. ಎಲ್ಲವೂ ಬೆಳಕೇ ಆಗಿದ್ದರೆ ಅದರ ಮೌಲ್ಯ ನಮಗೆ ಅರ್ಥವೇ ಆಗುತ್ತಿರಲಿಲ್ಲ. ಜೀವನದ ಮರು ಹೊಂದಾಣಿಕೆ ಎನ್ನುವುದು ನಡೆಯುವುದು ಈ ರಾತ್ರಿಯಲ್ಲೇ. ದೇಹದ ಅಂತರ್ಗತ ಅಂಗಾಂಗಗಳೆಲ್ಲವೂ ರಿಪೇರಿಯಾಗುವುದು ರಾತ್ರಿಯಲ್ಲೇ. ಇಲ್ಲದಿದ್ದರೆ ನಿರಂತರ ಓಡುತ್ತಲೇ, ಕೆಲಸ ಮಾಡುತ್ತಲೇ ಇರಲು ಸಾಧ್ಯವಿತ್ತೇ? ಅದಕ್ಕಾಗಿ ರಾತ್ರಿಯೂ ಅಗತ್ಯ. ಹಾಗೆಯೇ ಅವಮಾನವೂ ಬದುಕಿನ ಒಂದು ಭಾಗ. ಅದನ್ನು ವಿವೇಚನೆ, ಮೌನ, ತಾಳ್ಮೆ, ದಿಟ್ಟತನದೊಂದಿಗೆ ಎದುರಿಸಿದಾಗ ಹೊಸ ಬೆಳಕು ಮೂಡಲು ಸಾಧ್ಯ. ಸಮಾಧಾನ ಚಿತ್ತವೇ ಅವಮಾನಕ್ಕೆ ತಕ್ಕ ಪರಿಹಾರ.
ಒಂದು ಮಾತನ್ನು ನೆನಪಿಡಿ, ಯಶಸ್ವಿ ವ್ಯಕ್ತಿ ಯಾವತ್ತೂ ಆತುರದಲ್ಲಿ ಮುನ್ನುಗ್ಗಿ ಮತ್ತಷ್ಟು ಅವಾಂತರಗಳನ್ನು ಸೃಷ್ಟಿಸಿಕೊಳ್ಳುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.