
ಅಯ್ಯೋ, ಹೇಳಿಕೊಳ್ಳಲಿ ಬಿಡಿ. ಅದಕ್ಯಾಕೆ ನೀವು ತಲೆಕೆಡಿಸಿಕೊಳ್ಳಬೇಕು? ನನಗೆ ಗೊತ್ತು ಅವರು ನಿಮ್ಮ ಬಗ್ಗೆಯೇ ಹಾಗೊಂದು ಹೇಳಿ ಇನ್ನಿಲ್ಲದಂತೆ ನಿಮ್ಮನ್ನು ಮುಜುಗರಕ್ಕೆ ಈಡು ಮಾಡಲು ಯತ್ನಿಸಿರುತ್ತಾರೆ. ಅದರಿಂದ ನಿಮಗೆ ಪಿತ್ತ ನೆತ್ತಿಗೇರಿರುತ್ತದೆ. ಅಂಥದ್ದನ್ನು ಕೇಳಿ ನಖಶಿಖಾಂತ ಉರಿದು ಹೋಗಿರುತ್ತದೆ. ಬಹುತೇಕರು ಎಡವುವುದೇ ಇಲ್ಲಿ ಅಂತ ಅನ್ನಿಸುತ್ತದೆ. ಯಾರೋ ಏನೋ ಹೇಳಿದರು ಎಂದಾಕ್ಷಣ ಇರಬಾರದ ಜಾಗದಲ್ಲಿ ಇರುವೆ ಹೊಕ್ಕ ರೀತಿಯಲ್ಲಿ ಆಡಲು ಆರಂಭಿಸಿ ಬಿಡುತ್ತಾರೆ. ಅದರ ಅಗತ್ಯವಾದರೂ ಏನು ಅಂತೀನಿ?
ನಮ್ಮ ಸಮಾಜದಲ್ಲಿ ಈ 'ಆರೋಪ ಮಾಡುವುದು', ಅಥವಾ ’ಆಡಿಕೊಳ್ಳುವುದು’ ಅನ್ನುವುದಿದೆಯಲ್ಲ ಅದೊಂದು ರೀತಿಯಲ್ಲಿ ಜೂಜಾಗಿಬಿಟ್ಟಿದೆ. ಕಳೆದುಕೊಳ್ಳುವುದು ಏನೂ ಇಲ್ಲವಲ್ಲಾ? ಅದಕ್ಕೇ ಹೀಗೆ ಬಾಯಿಗೆ ಬಂದಂತೆ ಮಾತನಾಡುವುದನ್ನು ರೂಢಿಸಿಕೊಂಡು ಬಿಟ್ಟಿದ್ದಾರೆ ನಮ್ಮ ಜನ. ಒಂದು ರೀತಿಯಲ್ಲಿ ಹಿಟ್ ಎಂಡ್ ರನ್ ಇದ್ದಂತೆ. ಯಾರೋ, ಎಲ್ಲೋ, ಯಾರ ಬಗ್ಗೆಯೋ, ಇನ್ಯಾರೊಂದಿಗೋ ‘ಹೀಗಂತೆ ಗೊತ್ತಾ...?’ ಎಂದೋ, ಇಲ್ಲವೇ ‘ಅಯ್ಯೋ, ಅವನ ಬಗ್ಗೆ ನಿನಗೆ ಗೊತ್ತಿಲ್ಲಾ...?’ ಎಂಬ ರೀತಿಯಲ್ಲೋ ಸುದ್ದಿಯೊಂದನ್ನು ತೇಲಿ ಬಿಟ್ಟು ಬಿಡುತ್ತಾರೆ. ಅಷ್ಟು ಮಾಡಿ ಕೈತೊಳೆದುಕೊಂಡು ಬಿಡುತ್ತಾರೆ. ಅದಕ್ಕೆ ಕಾಲೂ ಇರುವುದಿಲ್ಲ, ಬಾಲವೂ ಇರುವುದಿಲ್ಲ. ಹೀಗಂದರೆ ನಿಮಗರ್ಥವಾಗಿರಬಹುದು, ಇಂಥ ಆರೋಪಗಳಿಗೆ ಯಾವ ಆಧಾರವೂ ಇರುವುದಿಲ್ಲ.
ಇನ್ನೂ ವಿಚಿತ್ರ ಎಂದರೆ ಈ ಆರೋಪ ಎಂಬ ವಿಷಯದಲ್ಲಿ ಅದನ್ನು ಹೊರಿಸಿದವನ ಹೊಣೆಗಾರಿಕೆ ಏನೂ ಇರುವುದೇ ಇಲ್ಲ. ಅವನಿಗೆ ಗೊತ್ತು ನಾನು ಏನು ಹೇಳಿದರೂ ಜನ ಅದನ್ನು ಪ್ರಶ್ನೆ ಮಾಡದೇ ಕಿವಿಗೊಡುತ್ತಾರೆ ಎಂದು. ಹೀಗಾಗಿ ಅದಕ್ಕೆ ಯಾವುದೇ ಆಧಾರದ ಪರಿಶೀಲನೆಯನ್ನಾಗಲಿ, ವಿವೇಚನೆಯನ್ನಾಗಲೀ ಮಾಡುವ ಗೋಜಿಗೇ ಹೋಗದೇ ಯಾರ ಮೇಲೋ, ಏನೋ ಆರೋಪ ಮಾಡುತ್ತಾನೆ. ಅದು ನಿಜವಾಗಲಿ, ಸುಳ್ಳಾಗಲಿ, ಜನ ನಂಬಲಿ, ಬಿಡಲಿ ಮತ್ತವ ಕಳೆದುಕೊಳ್ಳುವುದೇನೂ ಇಲ್ಲ. ಅದೇನೋ ಹೇಳುತ್ತಾರಲ್ಲಾ, ಮಾವಿನ ಮರಕ್ಕೆ ಕಲ್ಲು ಹೊಡೆದಂತೆ ಅಂತ, ಹಾಗೆ. ಕಲ್ಲು ನಮ್ಮದೇನೂ ಅಲ್ಲ. ಹೋದರೆ ಹೋಗಲಿ. ಆಕಸ್ಮಾತ್ ಹಣ್ಣಿಗೆ ತಾಗಿ ಅದು ಬಿದ್ದರೆ ಲಾಭವಾದಂತಾಯಿತು! ಹೀಗಾಗಿ ಅವನು ಕಲ್ಲು ಹೊಡೆದು ನೆಮ್ಮದಿಯಾಗಿದ್ದು ಬಿಡುತ್ತಾನೆ.
ಆದರೆ ಆರೋಪ ಹೊರಿಸಿಕೊಂಡವ ಮಾತ್ರ ಹಾಗಿರಲು ಸಾಧ್ಯವೇ ಇಲ್ಲ. ತನ್ನ ವಿರುದ್ಧದ ಆರೋಪದಲ್ಲಿ ಸತ್ಯಾಂಶವಿದ್ದರೆ ಅದು ಸಾರ್ವಜನಿಕಗೊಂಡು ಇನ್ನಷ್ಟು ಅವಮಾನವಾಗದಂತೆ ತಡೆಯಲು ಇನ್ನಿಲ್ಲದ ಕಸರತ್ತು ಆರಂಭಿಸಬೇಕು. ಏನೋ ಆ ಕ್ಷಣದ ತಪ್ಪು ಅದು, ಅಸಲಿಗೆ ತಾನು ಅಂಥವನಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲು ಹೆಣಗಬೇಕು. ಒಂದೊಮ್ಮೆ ಆರೋಪದಲ್ಲಿ ಹುರುಳಿಲ್ಲದಿದ್ದರೆ, ಅದನ್ನು ಸುಳ್ಳೆಂದು ಸಾಬೀತುಪಡಿಸಲು ಗುದ್ದಾಡಬೇಕು. ಏನು ಮಾಡಿದರೂ ಮುಜುಗರವಂತೂ ತಪ್ಪಿದ್ದಲ್ಲ. ಸತ್ಯ ಸಾಬೀತಾದ ಮೇಲೂ ಒಮ್ಮೆ ಆರೋಪ ಬಂದುಬಿಟ್ಟರೆ ಮತ್ತೆ ಜನ ಅನುಮಾನದಿಂದಲೇ ನೋಡುತ್ತಿರುತ್ತಾರೆ.
ಹೀಗಾಗಿ ಆರೋಪಕ್ಕೆ ಜನ ಹೆದರುತ್ತಾರೆ. ಆದರೆ ಯಶಸ್ವಿ ವ್ಯಕ್ತಿ ಎಂದಿಗೂ ಆರೋಪಗಳ ಬಗ್ಗೆ, ಗಾಳಿ ಸುದ್ದಿಗಳ ಬಗ್ಗೆ, ಟೀಕೆಗಳ ಬಗ್ಗೆ ತಲೆ ಕೆಡಿಸಿಕೊಂಡು ಸಮಯ ವ್ಯರ್ಥ ಮಾಡುವುದೇ ಇಲ್ಲ. ತಾನು ಏನೆಂಬುದು ಜನಕ್ಕೆ ಗೊತ್ತಿದೆ ಎಂಬುದಕ್ಕಿಂತ, ತನ್ನ ಮೇಲೆ ತನಗೆ ವಿಶ್ವಾಸವಿದೆ. ಹೊಟ್ಟೆಕಿಚ್ಚಿಗೋ, ವಿದ್ರೋಹಕ್ಕೋ, ವಿಪರೀತ ಬುದ್ಧಿಯಿಂದಲೋ ಜನ ಮಾತನಾಡಿದರೆ ಅದಕ್ಕೆ ತಾನೇಕೆ ಹೊಣೆಯಾಗಬೇಕು? ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಬಗ್ಗೆ ಜನ ಮಾತನಾಡುತ್ತಿದ್ದಾರೆ ಎಂದರೆ ತನ್ನ ಕೆಲಸ ಗಮನಕ್ಕೆ ಬರುತ್ತಿದೆ ಎಂತಲೇ ಅರ್ಥ.... ಇಂಥ ಮನೋಭಾವದೊಂದಿಗೆ ಜತೆಗೊಂದು ಸಣ್ಣ ಆತ್ಮ ವಿಮರ್ಶೆಯೊಂದಿಗೆ ಮುನ್ನುಗ್ಗಬೇಕು.
ಅಷ್ಟಕ್ಕೂ ಇಂಥವಕ್ಕೆಲ್ಲ ಆಯುಷ್ಯ ತೀರಾ ಕಡಿಮೆ. ಅದನ್ನು ನಾವು ಗಂಭೀರವಾಗಿ ತೆಗೆದುಕೊಂಡು ನಾವೇ ಬಲ ತುಂಬಿ ಅತಿ ಹೆಚ್ಚು ಕಾಲ ಅದನ್ನು ಜೀವಂತವಾಗಿಡುತ್ತಿರುತ್ತೇವೆ. ಈಗ ನಿರ್ಧರಿಸಿ ನಿಮ್ಮ ಬಗೆಗಿನ ಆರೋಪಕ್ಕೆ, ಟೀಕೆಗೆ ನೀವೆಷ್ಟು ಪ್ರತಿಕ್ರಿಯಿಸಬೇಕು ಎಂಬುದನ್ನು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.