
ಗೆಳೆಯರೊಬ್ಬರು ನನ್ನೊಂದಿಗೆ ಹೀಗೇ ಊಟ ಮಾಡುತ್ತಿರುವಾಗ ಒಂದು ಸ್ವಾರಸ್ಯಕರ ಹಳೆಯ ಘಟನೆಯನ್ನು ಮೆಲುಕು ಹಾಕಿದರು. ನಮ್ಮೆಲ್ಲರ ಬದುಕಿಗೆ ತೀರಾ ಹತ್ತಿರದಲ್ಲಿದೆ ಎನಿಸಿ, ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕೆನಿಸಿತು.
ಎ.ಎನ್ ಮೂರ್ತಿರಾಯರು ನಿಮಗೆ ಗೊತ್ತಿರಬೇಕು. ಕನ್ನಡದ ಅತ್ಯಂತ ವಿವೇಚನಾಶೀಲ ಸಾಹಿತಿಗಳೆನಿಸಿಕೊಂಡಿದ್ದವರು. ಅವರ ‘ದೇವರು’ ಪುಸ್ತಕ ಎಷ್ಟು ಜನಪ್ರಿಯವೆಂದರೆ ಆ ಪುಸ್ತಕ ಪ್ರಕಾಶಗೊಂಡಮೇಲೆ ‘ದೇವರು ಮೂರ್ತಿರಾಯರು‘ ಎಂದೇ ಜನ ಅವರನ್ನು ಗುರುತಿಸುವಂತಾಯಿತು. ಇಂದಿಗೂ ಅವರನ್ನು ಆ ಪುಸ್ತಕದಿಂದಲೇ ನೆನಪಿಸಿಕೊಳ್ಳಲಾಗುತ್ತದೆ. ವೈಯಕ್ತಿಕವಾಗಿ ಮೂರ್ತಿರಾಯರು ನಮ್ಮ–ನಿಮ್ಮಂತೆ ಆಸ್ತಿಕ(?)ರಾಗಿರಲಿಲ್ಲ. ಅಂದರೆ ನಾವು ನಂಬುವ ದೇವರುಗಳನ್ನು ಅವರು ನಂಬುತ್ತಿರಲಿಲ್ಲ. ದೈವಿಕತೆಯ ಬಗೆಗಿನ ಅವರ ವ್ಯಾಖ್ಯಾನವೇ ಬೇರೆ. ಅದನ್ನೇ ಅವರು ತಮ್ಮ ದೇವರು ಪುಸ್ತಕದಲ್ಲಿ ಸಾದ್ಯಂತ ವಿವರಿಸಿದ್ದಾರೆ.
ಆ ಹೊತ್ತಗೆ ಹೊರಬಂದ ಹೊತ್ತಿಗೆ ಅದು ಕರ್ನಾಟಕದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿತು. ಸೋಕಾಲ್ಡ್ ಆಸ್ತಿಕವಂತರು, ಕರ್ಮಠರು ಭಾರೀ ಗುಲ್ಲನ್ನು ಎಬ್ಬಿಸಿದರು. ‘ದೇವರನ್ನು ಬಹಿರಂಗವಾಗಿ ಹೀಗೆ ನಿರಾಕರಿಸಿದ ಮೂರ್ತಿರಾಯರನ್ನು ಕನ್ನಡ ಸಾರಸ್ವತ ಲೋಕದಿಂದಲೇ ಬಹಿಷ್ಕರಿಸಬೇಕು, ಈ ವಯಸ್ಸಿನಲ್ಲಿ (ಆಗಲೇ ಅವರಿಗೆ 70ರ ಆಸುಪಾಸು) ರಾಮ–ಕೃಷ್ಣ ಎನ್ನುತ್ತಾ ಇರುವ ಬದಲು ಮೂರ್ತಿರಾಯರಿಗೆ ಇದೆಲ್ಲ ಬೇಕಿತ್ತಾ? ಅವರ ಉದ್ಧಟತನದಿಂದಾಗಿ ನಮ್ಮೆಲ್ಲರ ಭಾವನೆಗಳಿಗೆ ಧಕ್ಕೆಯಾಗಿದೆ. ಇದರ ವಿರುದ್ಧ ಬಹುದೊಡ್ಡ ಚಳವಳಿ–ಆಂದೋಲನವನ್ನು ಹುಟ್ಟುಹಾಕಬೇಕು’ ಎಂದು ಸಾಹಿತಿಗಳ ಒಂದು ವಲಯವೂ ಸೇರಿದಂತೆ ಒಂದಷ್ಟು ಧರ್ಮಭೀರುಗಳು ಒಟ್ಟಾಗಿ ಸಮಾಲೋಚಿಸಿದರು. ತಮ್ಮ ಚಳವಳಿಗೆ ನಾಯಕತ್ವ ವಹಿಸಲು ಅವರಷ್ಟೇ ಹಿರಿಯ, ಅಷ್ಟೇ ಖ್ಯಾತ ಇನ್ನೊಬ್ಬ ಸಾಹಿತಿಯ ಹುಡುಕಾಟದಲ್ಲಿದ್ದಾಗ ಅವರ ಕಣ್ಣಿಗೆ ಬಿದ್ದುದು ಪು.ತಿ.ನರಸಿಂಹಾಚಾರ್.
ಪುತಿನ ಪಕ್ಕಾ ವೈಷ್ಣವ ಸಂಪ್ರದಾಯದವರಾಗಿದ್ದು, ತಮ್ಮ ಉಡುಗೆ–ತೊಡುಗೆ, ಹಣೆಯಲ್ಲಿನ ನಾಮ, ಶುಭ್ರ ಕಚ್ಚೆಪಂಚೆ...ಹೀಗೆ ಒಟ್ಟಾರೆ ಭೌತಿಕ ನೋಟದಲ್ಲೂ ತಮ್ಮ ಸಂಪ್ರದಾಯಸ್ಥಿಕೆಯನ್ನು ಬಿಟ್ಟುಕೊಟ್ಟಿರಲಿಲ್ಲ. ಹೀಗಾಗಿ ಮೂರ್ತಿರಾಯರ ದೇವರ ನಿರಾಕರಣೆ ವಿರುದ್ಧದ ಹೋರಾಟಕ್ಕೆ ಅವರೇ ಸೂಕ್ತವೆಂದು ಭಾವಿಸಿ ಅವರನ್ನು ಭೇಟಿಯಾಗಲು ಮೇಲುಕೋಟೆಯ ಅವರ ಮನೆಗೆ ದೊಡ್ಡದೊಡ್ಡವರ ನಿಯೋಗ ತೆರಳಿತು. ಅತ್ಯಂತ ಸಜ್ಜನಿಕೆಯಿಂದ ಬಂದವರನ್ನು ಸ್ವಾಗತಿಸಿದ ಪುತಿನ ಸಾವಧಾನದಿಂದ ಅವರ ದೂರನ್ನು ಆಲಿಸಿದರು. ಬಳಿಕ ಒಂದರೆಕ್ಷಣ ಯೋಚಿಸಿ, ‘ಮೂರ್ತಿರಾಯರು ಸರಿಯಾಗೇ ಹೇಳಿದ್ದಾರಲ್ಲ. ಹೌದು ದೇವರಿಲ್ಲ. ಅವನನ್ನು ನಾವೇ ಸೃಷ್ಟಿಸಿಕೊಳ್ಳಬೇಕು, ನಡೆಯಿರಿ’ ಎಂದುಬಿಡಬೇಕೇ?! ರಾಯರ ವಿರುದ್ಧ ಹೋರಾಟದ ನಾಯಕತ್ವ ಕೋರಿ ಹೋದವರು ಪೆಚ್ಚು!
ಇದೇ ಧಾಟಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರೂ ಎಲ್ಲೋ ಒಂದೆಡೆ ಮಾತನಾಡುತ್ತ, ’ಆಸ್ತಿಕರು–ನಾಸ್ತಿಕರು ಇಬ್ಬರೂ ಒಂದೇ. ಯಾವುದೇ ವ್ಯತ್ಯಾಸವಿಲ್ಲ. ಹಾಗೆ ನೋಡಿದರೆ ಆಸ್ತಿಕರಗಿಂತ ನಾಸ್ತಿಕರೇ ದೇವರನ್ನು ಹೆಚ್ಚು ಜೀವಂತ ಇಡುವವರು. ಆಸ್ತಕರು ಪೂಜೆಯ ಸಂದರ್ಭದಲ್ಲಷ್ಟೇ ದೇವರನ್ನು ಸೃಷ್ಟಿಕೊಂಡು (ಆವಾಹಿಸಿಕೊಂಡು) ಆಮೇಲೆ ಕಳುಹಿಸಿ (ಉದ್ವಾಸನೆ) ಬಿಟ್ಟುಬಿಡುತ್ತಾರೆ. ನಾಸ್ತಿಕರು ಹಾಗಲ್ಲ, ದಿನವಿಡೀ ದೇವರಿಲ್ಲ ಎಂದು ಪ್ರತಿಪಾದಿಸುವ ಭರದಲ್ಲಿ ತಮ್ಮೊಳಗೆ ಸದಾ ದೇವರು ಜೀವಂತವಾಗಿರುವಂತೆ ನೋಡಿಕೊಳ್ಳುತ್ತಾರೆ’ ಎಂದಿದ್ದರು.
ಎರಡೂ ಅಭಿಪ್ರಾಯಗಳೂ ಬಹುತೇಕ ಒಂದೇ ಧ್ವನಿಯಲ್ಲಿವೆ. ನಮ್ಮ ಜೀವನದಲ್ಲೂ ಹೀಗೆಯೇ ಚಿಂತೆಗಳು ಇರುವುದಿಲ್ಲ. ಅವನ್ನು ನಾವೇ ಸೃಷ್ಟಿಸಿಕೊಳ್ಳುತ್ತೇವೆ. ಬೇಕಿದ್ದರೆ ನೋಡಿ, ನಮ್ಮನ್ನು ಚಿಂತೆಗೀಡು ಮಾಡಿರುವ ಯಾವುದೇ ಘಟನೆಯೋ, ಬೆಳವಣಿಗೆಯೋ, ವಿಷಯವೋ ಒಂದ ಕ್ಷಣದಲ್ಲಿ ಬಂದು ಹೋಗಿರುತ್ತದೆ. ಅಷ್ಟಕ್ಕೂ ಬಹುತೇಕ ಸಂದರ್ಭದಲ್ಲಿ ಅದರ ಅಸ್ತಿತ್ವಕ್ಕೇ ಕಾರಣವಿರುವುದಿಲ್ಲ. ಅದನ್ನು ನಾವೇ ಮತ್ತೆ, ಮತ್ತೆ ನಮ್ಮೊಳಗೆ ಮಥಿಸುತ್ತಾ, ಇನ್ನಷ್ಟು ಗಂಭೀರವಾಗಿಸಿಕೊಂಡು ಬಿಡುತ್ತೇವೆ. ಜೀವನದಲ್ಲಿ ಚಿಂತನೆ ಮಾಡಬೇಕಾದ ಅದೆಷ್ಟೋ ವಿಷ್ಯಗಳಿದ್ದರೂ ಅವನ್ನೆಲ್ಲ ಬಿಟ್ಟು, ಒಂದಿಲ್ಲೊಂದು ಚಿಂತೆಯನ್ನೇ ತಲೆ ಹಚ್ಚಿಕೊಂಡು ಕೊರಗುತ್ತಲೇ ಇರುತ್ತೇವೆ. ಮೊದಲಿನ ಘಟನೆಯಲ್ಲಿ ಪುತಿನರ ಮಾತಿನ ಒಳಮರ್ಮವೇ ಬೇರೆಯಾದಾಗಿತ್ತು. ಮೂರ್ತಿರಾಯರ ‘ದೇವರು’ ಪುಸ್ತಕಕ್ಕೆ ವಿರೋಧದ ಮೂಲಕ ನೀವೇ ಹೆಚ್ಚು ಪ್ರಚಾರ ನೀಡುತ್ತಿದ್ದೀರಿ ಎಂಬುದನ್ನು ಗ್ರಹಿಸದೇ ಹೋದ ನಿಯೋಗದ ಸದಸ್ಯರಂತೆ ನಾವೂ ಅನಗತ್ಯವಾಗಿ ಯಾವುದೋ ಸಣ್ಣ ಸಂಗತಿಯನ್ನು ಬೆಟ್ಟದಂತೆ ಮಾಡಿಕೊಂಡು ಚಿಂತಿಸುತ್ತಾ, ಸಲ್ಲದ ಕಲ್ಪನೆ, ವೃಥಾ ಭಯದೊಂದಿಗೆ ನಮ್ಮ ಅಮೂಲ್ಯ ಸಮಯ, ಶ್ರಮವನ್ನು ಕಳೆದುಕೊಳ್ಳುತ್ತಿದ್ದೇವೆ ಅನಿಸುವುದಿಲ್ಲವೇ?
ಬಿಟ್ಟು ಬಿಡ್ರೀ, ಜೀವನದಲ್ಲಿ ಯಾವುದೂ ತಲೆ ಹೋಗುವುದು ಇರುವುದಿಲ್ಲ. ಸುಮ್ಮನೆ ತಲೆ ಕಡಿಸಿಕೊಳ್ಳುವುದರಲ್ಲಿ ಏನಿದೆ ಹೇಳಿ ಪುರುಷಾರ್ಥ? ಎಲ್ಲಿಯವರೆಗೆ ಅದದನ್ನೇ ಯೋಚಿಸುತ್ತಾ ಇರುತ್ತೀರೋ, ಅಲ್ಲೀಯವರೆಗೆ ನಿಮ್ಮನ್ನು ಬಿಟ್ಟು ಆ ಚಿಂತೆ ತೊಲಗುವುದಿಲ್ಲ, ನೆನಪಿಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.