ADVERTISEMENT

ಪಿವಿ ವೈಬ್ಸ್: ತಪ್ಪೇನಿಲ್ಲ, ಸ್ವಲ್ಪ ‘ರಾಜಿ’ ಮಾಡಿಕೊಂಡುಬಿಡಿ

ಸಹನೆ
Published 5 ಫೆಬ್ರುವರಿ 2026, 0:39 IST
Last Updated 5 ಫೆಬ್ರುವರಿ 2026, 0:39 IST
   

ಈ ಮಾತನ್ನು ನೀವು ಕೇಳಿಯೇ ಇರುತ್ತೀರಿ–ಯಶಸ್ಸಿಗೆ ಅಪ್ಪಂದಿರು ಹಲವರು. ಹಾಗೆಯೇ ನಿಮಗೆ ಗೊತ್ತಿದೆಯೋ ಇಲ್ಲವೋ, ಯಶಸ್ಸು ಅನ್ನೋದಕ್ಕೆ ಅರ್ಥಗಳೂ ಹಲವಾರು. ವ್ಯಕ್ತಿಯಿಂದ ವ್ಯಕ್ತಿಗೆ ಯಶಸ್ಸಿನ ವ್ಯಾಖ್ಯಾನ ಬದಲಾಗುತ್ತದೆ. ರಾಜಕಾರಣಿಗೆ ಅದು ಅದೃಷ್ಟವೆಂದೆನಿಸಿಕೊಳ್ಳಬಹುದು. ಉದ್ಯಮಿಗೆ ಪರಿಶ್ರಮದ ಫಲವಾಗಿ ಕಾಣುತ್ತದೆ. ವಿದ್ಯಾರ್ಥಿಗಳನ್ನು ಕೇಳಿ ನೋಡಿ ಬೇಕಿದ್ದರೆ, ಅವರು ಅದನ್ನು ಹಿರಿಯರ, ಶಿಕ್ಷಕರ ಮಾರ್ಗದರ್ಶನ– ಆಶೀರ್ವಾದ ಎಂದು ಮನಸ್ಸಿಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಹೇಳುತ್ತಾರೆ. ಮಹಿಳೆಯೊಬ್ಬಳು ತನ್ನ ಸಾಧನೆಯನ್ನು ಹೆತ್ತವರೋ, ಗಂಡನೋ ಮತ್ಯಾವುದೋ ಪುರುಷರ ಬೆಂಬಲ ಎಂದು ಬಿಂಬಿಸಿ ಅವರಿಂದ ಬರುವ ಅಡ್ಡಿಯನ್ನು ನಿವಾರಿಸಿಕೊಳ್ಳುತ್ತಾಳೆ. ಉದ್ಯೋಗಿಯನ್ನು ಕೇಳಿ ನೋಡಿ, ತಮ್ಮ ಸಕ್ಸಸ್‌ಗೆ ಬಾಸ್‌ನ ಹೆಸರನ್ನು ಸೇರಿಸಿ ಬಕೆಟ್‌ ಹಿಡಿದಿರುತ್ತಾನೆ. ಸಂತರು, ಧರ್ಮಭೀರುಗಳು ದೇವರ ಕೃಪೆಯೆಂದು ಬಣ್ಣಿಸುತ್ತಾರೆ. ಕ್ರೀಡಾಪಟುಗಳು, ಹೋರಾಟಗಾರರು ತಮ್ಮ ಛಲದ ಫಲವೆಂದು ಬೀಗುತ್ತಾರೆ. ಸಾಮ್ರಾಜ್ಯಶಾಹಿಗಳೋ, ಪ್ರಭುತ್ವದ ಮಂದಿಯೋ, ಅಧಿಕಾರಶಾಹಿಗಳೋ ತಮ್ಮ ಸಾಮರ್ಥ್ಯವೇ ಇದಕ್ಕೆಲ್ಲ ಕಾರಣವೆಂಬ ಹೊಗಳಿಕೆಯನ್ನು ಬಯಸುತ್ತಾರೆ. ಕೆಲವೊಮ್ಮೆ ಯಶಸ್ಸು ಪ್ರಾಮಾಣಿಕತೆಗೆ ಸಂದ ಗೌರವವೆಂದೂ, ಒಳ್ಳೆಯತನಕ್ಕೆ ಸಿಕ್ಕ ಬೆಲೆಯೆಂದೂ ಗುರುತಿಸಲಾಗುತ್ತದೆ. ಇಷ್ಟೇ ಅಲ್ಲ, ಬೇಕೋ ಬೇಡವೋ, ಅಥವಾ ಅದು ಸತ್ಯವೋ ಅಲ್ಲವೋ ಅಂತೂ ಯಶಸ್ವೀ ಪುರುಷನ ಹಿಂದೆ ಮಹಿಳೆಯೊಬ್ಬಳು ಇದ್ದೇ ಇರುತ್ತಾಳೆ ಅನ್ನೋದನ್ನೂ ನಮ್ಮಲ್ಲಿ ಬಿಂಬಿಸಿ ಇಟ್ಟುಬಿಟ್ಟಿದ್ದಾರೆ.

ಹಾಗಾದರೆ ಯಶಸ್ಸು ಅನ್ನುವುದು ಇದರಲ್ಲಿ ಯಾವುದು?

ಯಶಸ್ಸು ಅನ್ನುವುದಕ್ಕೆ ಇವೆಲ್ಲವೂ ಕಾರಣಗಳಲ್ಲಿ ಒಂದಾಗಿರಬಹದು ಅಥವಾ ಇವೆಲ್ಲದರ ಸಂಗಮವಾಗಿಯೂ ಇದ್ದಿರಬಹುದು. ಆದರೆ ನೈಜ ಯಶಸ್ಸು ಅಡಗಿರುವುದು ರಾಜಿಯಲ್ಲಿ. ಇವೆಲ್ಲವೂ ಇದ್ದೂ ಸಿದ್ಧಾಂತದ ಹೆಸರಿನ ಸಿನಿಕತನಕ್ಕೆ ಬಿದ್ದೋ, ಹಠಮಾರಿತನ ತೋರಿಯೋ, ಜಿಗುಟುತನದಿಂದಲೋ ಕುಳಿತುಬಿಟ್ಟರೆ ಯಶಸ್ಸು ಖಂಡಿತಾ ನಿಮ್ಮ ಪರಿಧಿಯೊಳಕ್ಕೆ ಸುಳಿಯಲಾರದು. ಹಾಗೆಂದು ಈ ರಾಜಿ ಎಂಬುದು ಅವಕಾಶವಾದಿ ಮನೋಭಾವ ಖಂಡಿತಾ ಅಲ್ಲ. ಇದು ಕೆಲವೊಂದು ಸನ್ನಿವೇಶ, ಬೆಳವಣಿಗೆ, ನಾವೇ ರೂಪಿಸಿಕೊಂಡ ವ್ಯವಸ್ಥೆಯ ಜತೆಗಿನ ಹೊಂದಾಣಿಕೆ. ಅಥವಾ ನಮ್ಮನ್ನು ನಾವು ಬೆಳವಣಿಗಳ ಜತೆಗೆ ಬೆಸೆದುಕೊಳ್ಳುವುದು. ನಮ್ಮತನವನ್ನು ಕಳೆದುಕೊಳ್ಳುವುದು ಎಂಬ ವ್ಯಾಖ್ಯಾನವನ್ನು ಎಲ್ಲ ಸಂದರ್ಭದಲ್ಲೂ ಕೊಡಲುಆಘುವುದಿಲ್ಲ. ಸಾಮಾನ್ಯವಾಗಿ ಸನ್ನಿವೇಶಕ್ಕನುಗುಣವಾಗಿ ವ್ಯಕ್ತಿಯೊಬ್ಬ ಅನಿವಾಯರ್ವಾಗಿ ರಾಜಿ ಮಾಡಿಕೊಂಡ ಎಂದಾಕ್ಷಣವೇ ಅವನ ಸುತ್ತಲಿನ ಸಮಾಜ ಅವನ ಬಗೆಗೆ ನಾನಾ ರೀತಿಯಲ್ಲಿ ಮಾತನಾಡಿಕೊಳ್ಳಲು ಆರಂಭಿಸುತ್ತದೆ. ‘ಅಯ್ಯೋ, ಅವನಿಗೆ ಸ್ವಲ್ಪವೂ ಸ್ವಾಭಿಮಾನ ಇಲ್ಲ’ ಎಂತಲೋ, ‘ಸ್ವ–ಲಾಭಕ್ಕಾಗಿ ಏನನ್ನು ಬೇಕಾದರೂ ಅವನು ಬಿಡುತ್ತಾನೆ’, ‘ಅವನಿಗೆ ನೈತಿಕತೆ, ಸಿದ್ಧಾಂತಗಳೇ ಇಲ್ಲ, ಲಾಭ ಆಗುತ್ತೆ ಅಂತ ಕಂಡರೆ ಎಲ್ಲಿಗೆ ಬೇಕಾದರೂ ಜಿಗಿಯುತ್ತಾನೆ’, ಅವನಾ ಬಿಡಿ, ಮೂರು ಕೊಟ್ಟರೆ ಮಾವನ ಕಡೆ, ಆರು ಕೊಟ್ಟರೆ ಅತ್ತೆ ಕಡೆ...’ ಎಂತಲೋ ಹೀಗೆ ಹತ್ತಾರು ರೀತಿಯಲ್ಲಿ ಮಂದಿ ಮಾತಾಡಿಕೊಳ್ಳುತ್ತಾರೆ. ಈ ಸಮಾಜ ಹೇಗಿದ್ದರೂ ಮಾತಾಡಿಕೊಳ್ಳುತ್ತದೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಲು ಹೋಗಬೇಡಿ.

ADVERTISEMENT

ಇಷ್ಟನ್ನು ಮನವರಿಕೆ ಮಾಡಿಕೊಳ್ಳಿ. ಯಶಸ್ವಿಯಾಗ ಬಯಸುವವರು ಬದಲಾವಣೆಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳಲು ಕಲಿಯಲೇಬೇಕು. ಮುಂದಾಗಬಹುದಾದುದನ್ನು ಮೊದಲೇ ಗ್ರಹಿಸಿಕೊಂಡು ಅಂತಹ ಬೆಳವಣಿಗೆಗಳಿಗೆ ತನ್ನನ್ನು, ಮನೋಭಾವವನ್ನು ಒಗ್ಗಿಸಿಕೊಳ್ಳಲು ಮುಂದಾಗಬೇಕು. ಅದು ಪಥ್ಯವೋ, ಅಪಥ್ಯವೋ ಅಂತೂ ಬಂದುದನ್ನು ಮೊದಲು ಸ್ವೀಕರಿಸಿ ನಂತರ ನಮ್ಮ ನೇರಕ್ಕೆ ಸನ್ನಿವೇಶವನ್ನು ಬದಲಿಸಿಕೊಳ್ಳುವ ಜಾಣ್ಮೆ ಮೆರೆಯಬೇಕು. ಬದುಕಿದ್ದರೆ ಬೆಲ್ಲ ಬೇಡಿ ತಿಂದೇನು ಅಂದರೆ ಇದೇ ಇರಬೇಕಲ್ಲವೇ? ಬದುಕು ಪ್ರಾಮುಖ್ಯವೇ ಹೊರತು ಬೇರಲ್ಲ. ಸೋತು ಜುಸುವವನೇ ಜಾಣ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.