
ಯಶಸ್ಸು ಎಂಬುದಕ್ಕೆ ಸುಲಭದ ಮಾರ್ಗಗಳಾಗಲೀ, ಶಾರ್ಟ್‌ಕಟ್‌ಗಳಾಗಲೀ ಇರಲಿಕ್ಕೆ ಸಾಧ್ಯವೇ ಇಲ್ಲ. ಒಂದೊಮ್ಮೆ ಯಾರಾದರೂ ಅದಕ್ಕೊಂದು ಶಾರ್ಟ್‌ಕಟ್ ಹೇಳಿಕೊಡುತ್ತೇವೆ ಎಂದರೆ ಖಂಡಿತಾ ಅವರು ನಿಮ್ಮನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದೇ ಅರ್ಥ. ಹಾಗೊಮ್ಮೆ ಇರುವುದೇ ಆಗಿದ್ದರೆ ಜಗತ್ತಿನ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಈ ಸಂಬಂಧ ಒಂದೊಂದು ಕೋರ್ಸ್‌ಗಳು ಆರಂಭವಾಗಿ ಬಿಡುತ್ತಿದ್ದವು. ಮಾತ್ರವಲ್ಲ, ಎಲ್ಲ ವಿದ್ಯಾರ್ಥಿಗಳ ಮೊದಲ ಆಯ್ಕೆ ಇದೇ ಕೋರ್ಸ್ ಆಗಿರುತ್ತಿತ್ತು. ಈಗಲೂ ಪರ್ಸನಾಲಿಟಿ ಡೆವಲಪ್‌ಮೆಂಟ್ ಹೆಸರಿನಲ್ಲಿ ಅಲ್ಲಲ್ಲಿ ಒಂದಷ್ಟು ಸಂಸ್ಥೆಗಳು ನಾನಾ ಹೆಸರಿನ ಕೋರ್ಸ್‌ಗಳನ್ನು ನಡೆಸುತ್ತಿವೆ. ಸಾವಿರಾರು ರೂಪಾಯಿ ಶುಲ್ಕವನ್ನು ನಿಗದಿಪಡಿಸಿ ವ್ಯಕ್ತಿತ್ವ ವಿಕಸನದ ಹೆಸರಿನಲ್ಲಿ ಅತ್ಯಂತ ಲಾಭದಾಯಕ ಬ್ಯುಸಿನೆಸ್ ನಡೆಯುತ್ತಿದೆ.
ಒಂದು ಮಾತಂತೂ ಸತ್ಯ. ನಮ್ಮ ವ್ಯಕ್ತಿತ್ವ ವಿಕಾಸಗೊಳ್ಳುವುದು ಸ್ವತಃ ನಮ್ಮಿಂದಲೇ ಹೊರತೂ ಬೇರೊಬ್ಬರ ಪಾಠದಿಂದ ಅಲ್ಲವೇ ಅಲ್ಲ. ನಮ್ಮ ವ್ಯಕ್ತಿತ್ವನ್ನು ಹೇಗೆ ವಿಸ್ತರಿಸಿಕೊಳ್ಳಬೇಕು, ಹೇಗೆ ಬೆಳೆಸಿಕೊಳ್ಳಬೇಕೆಂಬುದು ನಮಗಲ್ಲದೇ ಬೇರೊಬ್ಬರಿಗೆ ಅದು ಹೇಗೆ ಗೊತ್ತಿರಲು ಸಾಧ್ಯ? ನಮ್ಮ ಬಗ್ಗೆ ಅತಿ ಹೆಚ್ಚು ಗೊತ್ತಿರುವುದು ನಮ್ಮ ನಂತರ ನಮ್ಮ ಹೆತ್ತವರಿಗೆ, ಅದು ಬಿಟ್ಟರೆ ನಮ್ಮನ್ನು ತಿದ್ದಿ ತೀಡುವ ನಮ್ಮ ಶಿಕ್ಷಕರಿಗೆ. ಇವರು ಮಾತ್ರವೇ ನಮ್ಮ ವ್ಯಕ್ತಿತ್ವವನ್ನು ಬೆಳೆಸಲು ಒಂದಷ್ಟು ಕೊಡೊಗೆಯನ್ನು ಕೊಡಬಲ್ಲರು. ಹಾಗೂ ಒಂದು ಹಂತದವರೆಗೆ ಮಾತ್ರವೇ ಇವಬರು ನಮ್ಮನ್ನು ಬೆಳೆಸಬಲ್ಲರು; ಕೈಗೆಟುಕುವವರೆಗೆ ಮರ ಹತ್ತಿಸಬಹುದು ಎನ್ನುತ್ತಾರಲ್ಲಾ, ಹಾಗೆ. ಉಳಿದಂತೆ ಜೀವನವೆಂಬ ಎತ್ತರವನ್ನು ನಾವೇ ನಮ್ಮ ನೈಪುಣ್ಯ–ಪರಿಶ್ರಮದಿಂದಲೇ ಹತ್ತಬೇಕಾದುದು ಅನಿವಾರ್ಯ ಸತ್ಯ.
ವಾಸ್ತವ ಏನು ಗೊತ್ತಾ? ಜೀವನದಲ್ಲಿನ ಅನುಭವಗಳು ನಮ್ಮನ್ನು ಅರಳಿಸಬೇಕು. ಸಂಕಷ್ಟದಲ್ಲಿ ಸಿಲುಕಿ ನಲುಗಬೇಕು. ಸವಾಲುಗಳನ್ನು ದಿಟ್ಟವಾಗಿ ಎದುರಿಸಬೇಕು. ಸಾಹಸಕ್ಕೆ ಮುನ್ನುಗ್ಗಬೇಕು. ತಪ್ಪುಗಳನ್ನೆಸಗಿ ಪಶ್ಚಾತ್ತಾಪದಲ್ಲಿ ಬೇಯಬೇಕು. ಎಡವಿ ಎದ್ದೇಳಬೇಕು. ಅನುಭವಗಳಲ್ಲಿ ಮಾಗಬೇಕು. ಇಷ್ಟಾದರೆ ಸಾಲದು ಈ ಎಲ್ಲ ಸಂದರ್ಭದಲ್ಲಿ ನಾವು ನಮ್ಮ ವಿವೇಚನೆಯ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತ ಸಾಗಬೇಕು.
ಜೀವನದಲ್ಲಿ ಬೇರೊಬ್ಬರ ಸಲಹೆ ಮಾರ್ಗದರ್ಶನಗಳು ಬೇಡವೇ ಬೇಡವಂತೇನೂ ಅಲ್ಲ. ಹಿರಿಯರ, ತಜ್ಞರ, ಯಶೋಗಾಥೆಯ ಸರದಾರರ ಬದುಕು ನಮಗೆ ಖಂಡಿತಾ ಮಾದರಿಯಾಗಿ ನಿಲ್ಲಲೇಬೇಕು. ಆದರೆ, ಇನ್ಯಾರೋ ಹೋದ ಮಾರ್ಗದಲ್ಲಿಯೇ ನಮಗೂ ಯಶಸ್ಸು ಸಿಗುತ್ತದೆ. ಅದೊಂದೇ ದಾರಿ ಎಂಬುದು ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಯಶಸ್ಸಿಗೆ ಸಿದ್ಧ ಮಾದರಿ, ಸೂತ್ರ, ಸಿದ್ಧ ಮಾರ್ಗ ಎಂಬುದು ಇಲ್ಲವೇ ಇಲ್ಲ. ಅದು ವ್ಯಕ್ತಿಯಿಂದ ವ್ಯಕ್ತಿಗೆ, ಸಮಯದಿಂದ ಸಮಯಕ್ಕೆ, ಸನ್ನಿವೇಶಗಳಿಂದ ಸನ್ನಿವೇಶಕ್ಕೆ ಬದಲಾಗುತ್ತಲೇ ಇರುತ್ತದೆ. ಯಾರೋ ಒಬ್ಬ ಹೋಟೆಲ್‌ಗಳೇ ಇಲ್ಲದ ಊರಿನಲ್ಲಿ ಮೊದಲಿಗೆ ದರ್ಶಿನಿ ಆರಂಭಿಸಿ ಯಶಸ್ವಿಯಾದ ಎಂದ ಮಾತ್ರಕ್ಕೆ ಆ ಊರಿನಲ್ಲಿ ಎಲ್ಲರೂ ಹೋಟೆಲ್ ಮಾಡಿ ಹಣ ಗಳಿಸಲು ಸಾಧ್ಯವಿಲ್ಲ. ಹಾಗೆಂದು ಬೇಕಷ್ಟು ಹೋಟೆಲ್‌ಗಳು ಇದ್ದರೂ ಹೊಸಬನೊಬ್ಬ ಮತ್ತೊಂದು ಹೋಟೆಲ್ ಆರಂಭಿಸಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂತಲೂ ಅಲ್ಲ. ಆತ ಇತರರಿಗಿಂತ ಹೇಗೆ ಭಿನ್ನವಾಗುತ್ತಾನೆ, ಹೇಗೆ ಗ್ರಾಹಕರನ್ನು ಸೆಳೆಯುತ್ತಾನೆ, ಎಂಥಾ ಗುಣಮಟ್ಟದ ಸೇವೆಯನ್ನು ನೀಡುತ್ತಾನೆ ಎಂಬುದರ ಮೇಲೆ ಉಳಿದೆಲ್ಲವೂ ನಿರ್ಧಾರಿತ.
ಇದು ವ್ಯವಹಾರದ ಮಾತಾಯಿತು. ಹೀಗೆಯೇ ಬದುಕಿನ ಎಲ್ಲ ಸ್ಪರ್ಧೆಗಳೂ. ಎಲ್ಲರಿಗಿಂತ ಭಿನ್ನ ಎಂಬುದೇ ಮಾನದಂಡವಾಗಿಯೂ ಪರಿಣಮಿಸುವುದಿಲ್ಲ. ಒಟ್ಟಾರೆ ನಮ್ಮ ಯಶಸ್ಸನ್ನು ಬೇರೊಬ್ಬರು ವ್ಯಾಖ್ಯಾನಿಸಲು ಸಾಧ್ಯವೇ ಇಲ್ಲ. ಅದನ್ನು ನಮಗೆ ನಾವೇ ಬರೆದುಕೊಳ್ಳಬೇಕು ನೆನಪಿರಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.