ADVERTISEMENT

25 ವರ್ಷಗಳ ಹಿಂದೆ: ಶನಿವಾರ 3.5.1997

​ಪ್ರಜಾವಾಣಿ ವಾರ್ತೆ
Published 2 ಮೇ 2022, 19:30 IST
Last Updated 2 ಮೇ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗಕ್ಕೆ ಒಪ್ಪಿಗೆ

ನವದೆಹಲಿ, ಮೇ 2– ಹುಬ್ಬಳ್ಳಿ– ಅಂಕೋಲಾ ನೂತನ ರೈಲು ಮಾರ್ಗಕ್ಕೆ ಯೋಜನಾ ಆಯೋಗದ ಒಪ್ಪಿಗೆ ದೊರೆತಿದ್ದು, ಅದರ ಕಾಮಗಾರಿಯನ್ನು ಈ ಪ್ರಸ್ತುತ ವರ್ಷವೇ ಕೈಗೆತ್ತಿಕೊಳ್ಳುವುದಾಗಿ ರೈಲ್ವೆ ಸಚಿವ ರಾಂ ವಿಲಾಸ್ ಪಾಸ್ವಾನ್ ಇಂದು ಲೋಕಸಭೆಗೆ ತಿಳಿಸಿದರು.

1997–98ರ ರೈಲ್ವೆ ಬಜೆಟ್ ಇಂದು ಲೋಕಸಭೆಯಲ್ಲಿ ಮಂಜೂರಾಯಿತು. ಬಜೆಟ್‌ನ ಪ್ರಸ್ತಾವನೆಗಳನ್ನು ಸ್ಥಾಯಿ ಸಮಿತಿ ಪರಿಶೀಲಿಸಿದ ನಂತರ ಮತ್ತೆ ಬೇಡಿಕೆಯ ಮೇಲೆ ನಡೆದ ಚರ್ಚೆಗೆ ಸಚಿವ ಪಾಸ್ವಾನ್ ಅವರು ಸುಮಾರು ಎರಡೂ ಮುಕ್ಕಾಲು ಗಂಟೆಗಳ ಕಾಲ ಸುದೀರ್ಘ ಉತ್ತರ ನೀಡಿದರು.

ADVERTISEMENT

ಬೆಂಗಳೂರು– ಸತ್ಯಮಂಗಲ, ಮುನಿರಾ ಬಾದ್– ಮೆಹಬೂಬ್ ನಗರ, ಹುಬ್ಬಳ್ಳಿ– ಅಂಕೋಲಾ ನೂತನ ರೈಲು ಮಾರ್ಗಗಳ ನಿರ್ಮಾಣ ಯೋಜನೆಗಳನ್ನು ಯೋಜನಾ ಆಯೋಗದ ಒಪ್ಪಿಗೆ ದೊರೆತ ಕೂಡಲೇ ಕೈಗೆತ್ತಿ ಕೊಳ್ಳುವುದಾಗಿ ರೈಲ್ವೆ ಸಚಿವರು ತಮ್ಮ ಉತ್ತರದಲ್ಲಿ ಭರವಸೆ ನೀಡಿದರು.

ಸನ್ಯಾಸ ತ್ಯಜಿಸಿದ ಸ್ವಾಮೀಜಿ: ವಿವಾಹಕ್ಕೆ ‘ಲೌಕಿಕ ಮುದ್ರೆ’

ಬೆಂಗಳೂರು, ಮೇ 2– ಮಳವಳ್ಳಿ ಸಮೀಪದ ಮಾರೇಹಳ್ಳಿಯ ಜನಾರ್ದನನ (ಲಕ್ಷ್ಮಿನರಸಿಂಹ ದೇವಾಲಯ) ಮುಂದೆ ಗುರುವಾರದಂದು ಕೆಲವೇ ಜನರ ಸಮ್ಮುಖ ದಲ್ಲಿ ದಾಂಪತ್ಯಕ್ಕೆ ಪದಾರ್ಪಣ ಮಾಡಿದ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶರಾಗಿದ್ದ ವಿದ್ಯಾಭೂಷಣ ಸ್ವಾಮೀಜಿ ಹಾಗೂ ರಮಾ ಕುಲಕರ್ಣಿ ಅವರು ಇಂದು ಇಲ್ಲಿಯ ಕೋಟೆ ಶ್ರೀರಾಮ ಸೇವಾ ಮಂಡಲಿಯಲ್ಲಿ ನೆರೆದಿದ್ದ ಸಾವಿರಾರು ಜನತಾ ಜನಾರ್ದನರ ಮುಂದೆ ತಮ್ಮ ಕೌಟುಂಬಿಕ ಬದುಕಿಗೆ ಲೌಕಿಕ ಮುದ್ರೆ ಪಡೆದರು.

ಶ್ರೀರಾಮ ಸೇವಾ ಮಂಡಲಿಯ ಸಂಗೀತ ಕಾರ್ಯಕ್ರಮಕ್ಕೆ ಇಂದು ಎಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನತೆ ಈ ಮದುವೆಯನ್ನು ಹರ್ಷೋದ್ಗಾರದಿಂದ ಸ್ವಾಗತಿಸುವ ಮೂಲಕ ಮಾನ್ಯ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.