ADVERTISEMENT

25 ವರ್ಷಗಳ ಹಿಂದೆ | ಮಂಗಳವಾರ 7–3–1995

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 20:00 IST
Last Updated 6 ಮಾರ್ಚ್ 2020, 20:00 IST

ಚುನಾವಣೆಯಲ್ಲಿ ಸಮನ್ವಯದ ಕೊರತೆ: ಬಿಹಾರ ಗೃಹ ಕಾರ‍್ಯದರ್ಶಿ, ಡಿಜಿಪಿ ವರ್ಗಾವಣೆಗೆ ಆಜ್ಞೆ
ಪಟ್ನಾ, ಮಾರ್ಚಿ 6 (ಪಿಟಿಐ, ಯುಎನ್‌ಐ)– ಬಿಹಾರದಲ್ಲಿ ಮೊದಲ ಹಂತದ ಮತದಾನಕ್ಕೆ ಕೇವಲ ಐದು ದಿನಗಳು ಉಳಿದಿರುವಂತೆ ಪೊಲೀಸ್‌ ಮಹಾನಿರ್ದೇಶಕ (ಡಿಜಿಪಿ) ವಿ.ಪಿ. ಜೈನ್‌ ಮತ್ತು ಗೃಹ ಕಾರ್ಯದರ್ಶಿ ಜಿಯಾಲಾಲ್‌ ಆರ್ಯ ಅವರ ವರ್ಗಾವಣೆಗೆ ಚುನಾವಣಾ ಆಯೋಗ ಒಪ್ಪಿಗೆ ನೀಡಿತು.

ಜಿಯಾಲಾಲ್‌ ಆರ್ಯ ಅವರ ಸ್ಥಾನದಲ್ಲಿ ಐಎಎಸ್‌ ಅಧಿಕಾರಿ ಡಿ.ಪಿ. ಮಹೇಶ್ವರಿ ಅವರ ನೇಮಕಕ್ಕೆ ಆಯೋಗವು ಸಮ್ಮತಿ ನೀಡಿದೆ.

‘ವಿರೋಧ ಪಕ್ಷದವರ ಹಸ್ತಕ್ಷೇಪ ಬೇಡ’
ಬೆಂಗಳೂರು, ಮಾರ್ಚಿ 6– ‘ಸರ್ಕಾರದ ದಿನನಿತ್ಯದ ವ್ಯವಹಾರಗಳಲ್ಲಿ ವಿರೋಧ ಪಕ್ಷದವರ ಹಸ್ತಕ್ಷೇಪ ಬೇಡ. ಸರ್ಕಾರ ಯಾವುದನ್ನೂ ಬಚ್ಚಿಟ್ಟುಕೊಳ್ಳುವುದಿಲ್ಲ. ನನಗೆ ಸದನವೇ ಸಾರ್ವಭೌಮ. ನಾನು ಸದನಕ್ಕೆ ಮಾತ್ರ ಮಾಹಿತಿ ಕೊಡಬೇಕು. ಯಾವುದೇ ದಾಖಲೆಗಳನ್ನಾಗಲೀ ವಿಧಾನಸಭಾಧ್ಯಕ್ಷರು ಅನುಮತಿ ಕೊಟ್ಟಲ್ಲಿ ನಾನು ಸದನದಲ್ಲಿ ಮಂಡಿಸುತ್ತೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡ ಅವರು ತಮ್ಮ ನಿಲುವನ್ನು ಇಂದು ಇಲ್ಲಿ ಸ್ಪಷ್ಟಪಡಿಸಿದರು.

ADVERTISEMENT

ಸಂವಿಧಾನದ ಚೌಕಟ್ಟಿಗೆ ಬಾರದ ಯಾವುದೇ ದಾಖಲೆ ಪತ್ರಗಳನ್ನು ವಿರೋಧ ಪಕ್ಷದವರಿಗೆ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಅವರು ಇಂದು ಇಲ್ಲಿ ತಿಳಿಸಿದರು.

ಬೀಡು ಕಬ್ಬಿಣ ಘಟಕಕ್ಕೆ ಅಸ್ತು
ಬೆಂಗಳೂರು, ಮಾರ್ಚಿ 6–ಹೈದರಾಬಾದ್‌ನ ಖಾಸಗಿ ಸಂಸ್ಥೆಯೊಂದು ರಾಯಚೂರಿನಲ್ಲಿ 495 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸುಮಾರು 4 ಲಕ್ಷ ಟನ್‌ ಉತ್ಪಾದನಾ ಸಾಮರ್ಥ್ಯದ ಬೀಡು ಕಬ್ಬಿಣ ಘಟಕವನ್ನು ಸ್ಥಾಪಿಸುವ ಯೋಜನೆಗೆ ರಾಜ್ಯ ಸಚಿವ ಸಂಪುಟ ಇಂದು ಒಪ್ಪಿಗೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.