ADVERTISEMENT

ಗುರುವಾರ, 12–05–1994

​ಪ್ರಜಾವಾಣಿ ವಾರ್ತೆ
Published 11 ಮೇ 2019, 20:15 IST
Last Updated 11 ಮೇ 2019, 20:15 IST

‘ಪೃಥ್ವಿ’ ಪರೀಕ್ಷೆ ಸ್ಥಗಿತ: ರಾಜ್ಯ ಸಭೆಯಲ್ಲಿ ಗದ್ದಲ
ನವದೆಹಲಿ, ಮೇ 11(ಯುಎನ್‌ಐ, ಪಿಟಿಐ)– ಪೃಥ್ವಿ ಕ್ಷಿಪಣಿ ಪರೀಕ್ಷಾ ಕಾರ್ಯಕ್ರಮ ಮುಂದೂಡಿಕೆ ವಿಷಯದ ಪ್ರಸ್ತಾಪದಿಂದ ಇಂದು ರಾಜ್ಯಸಭೆಯಲ್ಲಿ ಭಾರಿ ಕೋಲಾಹಲ ಉಂಟಾಯಿತು. ಈ ಬಗ್ಗೆ ಪ್ರಧಾನಿ ಸದನಕ್ಕೆ ಬಂದು ಹೇಳಿಕೆ ನೀಡುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದ ಕಾರಣ ಸುಮಾರು ಒಂದು ತಾಸು ಯಾವುದೇ ಕಲಾಪ ನಡೆಯಲಿಲ್ಲ.

ವಿರೋಧ ಪಕ್ಷಗಳ ಸದಸ್ಯರ ಬೇಡಿಕೆಗೆ ಮಣಿದ ಸರ್ಕಾರ, ಕ್ಷಿಪಣಿ ಪರೀಕ್ಷೆ ಮುಂದೂಡಿಕೆ ಬಗ್ಗೆ ನಾಳೆ ಹೇಳಿಕೆ ನೀಡುವುದಾಗಿ ಪ್ರಕಟಿಸಿದ ನಂತರ ಸದನದಲ್ಲಿ ಶಾಂತ ಸ್ಥಿತಿ ಮರಳಿತು. ಶೂನ್ಯ ಕಾಲದಲ್ಲಿ ವಿಷಯ ಪ್ರಸ್ತಾಪಿಸಿದ ಜನತಾ ದಳದ ಎಸ್‌. ಜೈಪಾಲ್‌ ರೆಡ್ಡಿ ಅವರು, ಪ್ರಧಾನಿ ನರಸಿಂಹರಾವ್‌ ಅವರ ವಾಷಿಂಗ್ಟನ್‌ ಭೇಟಿ ಹಿನ್ನೆಲೆಯಲ್ಲಿ ಅಮೆರಿಕದ ಒತ್ತಡಕ್ಕೆ ತಲೆಬಾಗಿ ಸರ್ಕಾರ ಪೃಥ್ವಿ ಕ್ಷಿಪಣಿ ಪರೀಕ್ಷೆ ಸ್ಥಗಿತಗೊಳಿಸಿದೆ ಎಂದು ಆರೋಪಿಸಿದರು. ಈ ಆರೋಪಕ್ಕೆ ಕೂಡಲೆ ಉತ್ತರಿಸುವಂತೆ ಪ್ರತಿಪಕ್ಷಗಳ ಸದಸ್ಯರು ಪಟ್ಟು ಹಿಡಿದರು.

ಪುತಿನ, ಮೂರ್ತಿರಾವ್‌ಗೆ ಪಂಪ ಪ್ರಶಸ್ತಿ
ಬೆಂಗಳೂರು, ಮೇ 11– ಆದಿ ಕವಿ ಪಂಪನ ಹೆಸರಿನಲ್ಲಿ ರಾಜ್ಯ ಸರ್ಕಾರ ನೀಡುತ್ತಿರುವ ಪ್ರತಿಷ್ಠಿತ ಪಂಪ ಪ್ರಶಸ್ತಿಯು 1991ನೇ ಸಾಲಿಗೆ ಪ್ರಸಿದ್ಧ ಸಾಹಿತಿ ಪ್ರೊ. ಎ.ಎನ್‌. ಮೂರ್ತಿರಾವ್ ಅವರಿಗೆ ದೊರೆತಿದೆ.

ADVERTISEMENT

1991ನೇ ಸಾಲಿನ ಸೃಜನಶೀಲ ಪ್ರಕಾರಕ್ಕೆ ಈ ಪ್ರಶಸ್ತಿ ನೀಡಿದ್ದು, ಪು.ತಿ.ನ ಅವರ ‘ಶ್ರೀ ಹರಿಚರಿತೆ’ ಕೃತಿಗೆ ಪ್ರಶಸ್ತಿ ದಕ್ಕಿದೆ. 1988ರಲ್ಲಿ ಈ ಕೃತಿ ಪ್ರಕಟವಾಗಿದೆ.

1992ನೇ ಸಾಲಿನ ಪ್ರಶಸ್ತಿ ಸೃಜನೇತರ ಕೃತಿಯಾದ ಮೂರ್ತಿರಾಯರ ‘ದೇವರು’ ಕೃತಿಗೆ ದೊರೆತಿದೆ.

ವೀರಪ್ಪನ್‌ ಪತ್ತೆ ಕಾರ್ಯ: ಜೂ. 30ರವರೆಗೆ ಗಡಿ ಭದ್ರತಾ ಪಡೆ ನೆರವು
ಬೆಂಗಳೂರು, ಮೇ 11– ದಂತ ಚೋರ ಹಾಗೂ ಶ್ರೀಗಂಧ ಕಳ್ಳಸಾಗಣೆದಾರ ವೀರಪ್ಪನ್‌ ಸೆರೆ ಹಿಡಿಯಲು ಮಲೈ ಮಹದೇಶ್ವರ ಬೆಟ್ಟದಲ್ಲಿ ಬಿಡಾರ ಹೂಡಿರುವ ಗಡಿ ಭದ್ರತಾ ಪಡೆಯು ಜೂನ್‌ 30ರವರೆಗೆ ಮಾತ್ರ ಕಾರ್ಯಾಚರಣೆ ನಡೆಸಿ, ನಂತರ ಹಿಂದಿರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.