ADVERTISEMENT

25 ವರ್ಷಗಳ ಹಿಂದೆ: ಭಾನುವಾರ 26.1.1997

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 19:30 IST
Last Updated 25 ಜನವರಿ 2022, 19:30 IST
   

ಪ್ರಯಾಣಿಕರಿಗೆ ಪರಿಹಾರ ತರದಸಚಿವ– ಸಿಬ್ಬಂದಿ ಜಗಳ

ಬೆಂಗಳೂರು, ಜ. 25– ‘ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾದಂತೆ’ ಎಂಬ ಗಾದೆಯಂತಾಗಿದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (ಸೋರಿಕೆ) ಸಂಸ್ಥೆಯನ್ನೇ ನಂಬಿರುವ ರಾಜ್ಯದ ಲಕ್ಷಾಂತರ ಮಂದಿ ಅಮಾಯಕ ಪ್ರಯಾಣಿಕರ ಪಾಡು.

ಸಾರಿಗೆ ಸಚಿವ ಪಿ.ಜಿ.ಆರ್. ಸಿಂಧ್ಯಾ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಮಿಕ ಸಂಘಗಳ ಕಲಹ ಪರಾಕಾಷ್ಠೆ ತಲುಪಿದೆ. ಇದು ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ADVERTISEMENT

ಕಾರ್ಮಿಕ ಸಂಘದಿಂದ ತನಗೆ ಪ್ರಾಣ ಬೆದರಿಕೆ ಇದೆ ಎಂದು ಸಿಂಧ್ಯಾ ಬಹಿರಂಗವಾಗಿ ಹೇಳಿಕೆ ನೀಡಿ ಪೊಲೀಸ್ ಭದ್ರತೆ ಯಾಚಿಸಿ ದರೆ, ಸಚಿವರು ಕಾರ್ಮಿಕ ನಾಯಕರ ಬಗ್ಗೆ ಅತ್ಯಂತ ಅಸಹ್ಯವಾಗಿ ಮಾತನಾಡಿದ್ದಾರೆ ಎಂದು ಕಾರ್ಮಿಕ ಸಂಘಗಳು ಪ್ರತ್ಯಾರೋಪ ಮಾಡಿವೆ. ಇವರಿಬ್ಬರ ಕಚ್ಚಾಟ ಬೀದಿಗೆ ಬಂದಿದೆ.

ಹೊಸ ಪಕ್ಷ: ಹೆಗಡೆ ಇನ್ನೂ ಮೀನ–ಮೇಷ

ಜನತಾದಳದ ಸ್ಥಾಪಕರಲ್ಲಿ ಪ್ರಮುಖರಾಗಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಆರು ವರ್ಷ ಆಡಳಿತ ನಡೆಸಿದ ರಾಷ್ಟ್ರದ ಹಿರಿಯ ರಾಜಕಾರಣಿ ರಾಮಕೃಷ್ಣ ಹೆಗಡೆ ಅವರು ಈಗ ಹೊಸದಾಗಿ ಸ್ಥಾಪಿಸಿರುವ ರಾಷ್ಟ್ರೀಯ ನವ ನಿರ್ಮಾಣ ವೇದಿಕೆ ಮೂಲಕ ತಮ್ಮ ಜನಪ್ರಿಯತೆ ಬಗ್ಗೆ ‘ರಾಜಕೀಯ’ ಪ್ರಯೋಗ ನಡೆಸುತ್ತಿರುವಂತಿದೆ.

ಎಚ್‌.ಡಿ.ದೇವೇಗೌಡರು ಪ್ರಧಾನಿಯಾದ ನಂತರ ಹೆಗಡೆಯವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಹೆಗಡೆಯವರ ಮೇಲೆ ಕೈಗೊಂಡ ಕ್ರಮದ ಬಗ್ಗೆ ಬಹಳಷ್ಟು ಮಂದಿ ಬೇಸರ ಹಾಗೂ ಅನುಕಂಪ ವ್ಯಕ್ತಪಡಿಸಿದ್ದರು. ಇಂಥ ಅವಕಾಶ ಉಪಯೋಗಿಸಿಕೊಂಡು ಹೆಗಡೆಯವರು ಹೊಸ ರಾಜಕೀಯ ಪಕ್ಷ ಕಟ್ಟಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಆಡಳಿತ ಜನತಾದಳಕ್ಕೆ ವಿಶೇಷವಾಗಿ ದೇವೇಗೌಡರಿಗೆ ಕಿರಿಕಿರಿ ಉಂಟು ಮಾಡುತ್ತಾರೆಂಬ ನಿರೀಕ್ಷೆಯಿತ್ತು.

ಆದರೆ, ಯಾವಾಗಲೂ ವಿಭಿನ್ನ ರೀತಿಯಲ್ಲಿ ನಡೆದುಕೊಳ್ಳುವ ಜಾಯಮಾನದ ಹೆಗಡೆಯವರು ಎಲ್ಲರ ನಿರೀಕ್ಷೆ ಹುಸಿಗೊಳಿಸಿ ಚುನಾವಣೆಯಿಂದ ಹೊರಗುಳಿದರು. ಅಷ್ಟರಲ್ಲಿ ಸ್ಥಾಪಿಸಿದ್ದ ರಾಷ್ಟ್ರೀಯ ನವ ನಿರ್ಮಾಣ ವೇದಿಕೆ ರಾಜಕೀಯ ಪಕ್ಷವಲ್ಲ ಎಂಬುದನ್ನು ಸ್ಪಷ್ಪಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.