ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಭಾನುವಾರ, 4–1–1998

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 19:45 IST
Last Updated 3 ಜನವರಿ 2023, 19:45 IST
   

ಸರ್ಕಾರಿ ನೌಕರರ ಮುಷ್ಕರ ಬಗೆಹರಿಯದ ಕಗ್ಗಂಟು

ಬೆಂಗಳೂರು, ಜ. 3– ಕೇಂದ್ರ ಸರ್ಕಾರದ ಐದನೇ ವೇತನ ಆಯೋಗದ ಶಿಫಾರಸ್ಸು
ಗಳನ್ನು ತಮಗೂ ಅನ್ವಯಿಸಬೇಕೆಂಬ ಬೇಡಿಕೆ ಮುಂದಿಟ್ಟು ರಾಜ್ಯ ಸರ್ಕಾರಿ ನೌಕರರು ನಡೆಸುತ್ತಿರುವ ಅನಿರ್ದಿಷ್ಟ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ರಾಜ್ಯದ ಎಲ್ಲೆಡೆ ಇಂದೂ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಲಿಲ್ಲ.

ಈ ಮಧ್ಯೆ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ನಡುವೆ ಇಂದು ನಡೆದ ಮಾತುಕತೆ ಮತ್ತೆ ಮುರಿದು ಬಿದ್ದಿತು. ಇದರಿಂದಾಗಿ ಸೋಮವಾರವೂ ಮುಷ್ಕರ ಮುಂದುವರೆಯುವ ಸಾಧ್ಯತೆಯಿದೆ.

ADVERTISEMENT

ಪಂಪ ಸ್ಮಾರಕ ನಿರ್ಮಾಣಕ್ಕೆ ಪ್ರಶಸ್ತಿಯ ಹಣ

ಕಾರವಾರ, ಜ.3– ಆದಿ ಕವಿ ಪಂಪನ ನಾಡಾದ ಬನವಾಸಿಯಲ್ಲಿ ಇಂದು ‘ಪಂಪ ಪ್ರಶಸ್ತಿ’ ಸ್ವೀಕರಿಸಿದ ಹಿರಿಯ ಸಾಹಿತಿ ಡಾ. ಎಂ.ಎಂ. ಕಲಬುರ್ಗಿ ಅವರು, ಸರ್ಕಾರವು ಪ್ರಶಸ್ತಿಪತ್ರದ ಜೊತೆಗೆ ತಮಗೆ ನೀಡಿದ 1 ಲಕ್ಷ ರೂಗಳ ಚೆಕ್‌ ಅನ್ನು ಮರಳಿ ಸರ್ಕಾರಕ್ಕೆ ಒಪ್ಪಿಸಿದ ಅಪರೂಪದ ಘಟನೆ ಇಂದು ನಡೆಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಪಂಪನ ಜನ್ಮಸ್ಥಳವಾದ ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಪಂಪನ ಸ್ಮಾರಕ ನಿರ್ಮಾಣವಾಗಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.