ADVERTISEMENT

25 ವರ್ಷಗಳ ಹಿಂದೆ: ಶನಿವಾರ, 24–2–1996

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 17:23 IST
Last Updated 23 ಫೆಬ್ರುವರಿ 2021, 17:23 IST
   

ತನಿಖೆ ಮುಚ್ಚಿಹಾಕಲು ಯತ್ನ ಆರೋಪ: ಸಿಬಿಐಗೆ ನೋಟಿಸ್

ನವದೆಹಲಿ, ಫೆ. 23 (ಯುಎನ್‌ಐ)– 1993ರಲ್ಲಿ ಕೇಂದ್ರದಲ್ಲಿ ಅಲ್ಪಮತದೊಡನೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಲೋಕಸಭೆಯಲ್ಲಿ ವಿಶ್ವಾಸಮತ ಗಳಿಸಲು ಕೆಲ ಎಂ.ಪಿಗಳಿಗೆ ಹಣ ನೀಡಿತ್ತು ಮತ್ತು ಈ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆ ನಡೆಸದೇ ಮುಚ್ಚಿಹಾಕಲು ಯತ್ನಿಸಿತು ಎಂದು ಆರೋಪಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ದೂರಿನ ಸಂಬಂಧದಲ್ಲಿ ದೆಹಲಿ ಹೈಕೋರ್ಟ್ ಇಂದು ಸಿಬಿಐ ಮತ್ತು ಕೇಂದ್ರ ಗೃಹ ಖಾತೆಗೆ ನೋಟಿಸ್ ಜಾರಿ ಮಾಡಿದೆ.

1993ರಲ್ಲಿ ಪ್ರತಿಪಕ್ಷಗಳ 40 ಎಂ.ಪಿ ಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯದ ವಿರುದ್ಧ ಮತ ಚಲಾಯಿಸಿದ ಜೆಎಂಎಂ ಲೋಕಸಭಾ ಸದಸ್ಯ ಸೂರಜ್ ಮಂಡಲ್ ಅವರ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ‘ಹಠಾತ್ತನೇ ಅಪಾರ ನಗದು’ ಸೇರಿದ ಕುರಿತು ಏಕೆ ತನಿಖೆ ನಡೆಸಲಿಲ್ಲ ಎಂಬ ಬಗ್ಗೆ ಉತ್ತರಿಸುವಂತೆ ನ್ಯಾಯಮೂರ್ತಿಗಳಾದ ವೈ.ಕೆ.ಸಬರ್‌ವಾಲ ಮತ್ತು ಡಿ.ಕೆ.ಜೈನ್ ಅವರಿದ್ದ ವಿಭಾಗೀಯ ಪೀಠ ಸಿಬಿಐ ಮತ್ತು ಗೃಹ ಖಾತೆಗೆ ಆದೇಶಿಸಿದೆ.

ADVERTISEMENT

ಕೆಇಬಿ ಖಾಸಗೀಕರಣ ಇಲ್ಲ– ಪಟೇಲ್

ಬೆಂಗಳೂರು, ಫೆ. 23– ಕರ್ನಾಟಕ ವಿದ್ಯುತ್ ಮಂಡಳಿ ಖಾಸಗೀಕರಣ ಇಲ್ಲ ಹಾಗೂ ಕದ್ರಾ, ಕೊಡಸಳ್ಳಿ, ಗೇರುಸೊಪ್ಪೆ ಸೇರಿದಂತೆ ರಾಜ್ಯದ ಯಾವುದೇ ಜಲವಿದ್ಯುತ್ ಯೋಜನೆಯನ್ನು ಖಾಸಗಿ ಉದ್ಯಮಿಗಳಿಗೆ ವಹಿಸಿಲ್ಲ ಎಂದು ಉಪಮುಖ್ಯಮಂತ್ರಿ ಜೆ.ಎಚ್. ಪಟೇಲ್ ವಿಧಾನಪರಿಷತ್‌ನಲ್ಲಿ ಸ್ಪಷ್ಟಪಡಿಸಿದರು.

ಮರಿಲಿಂಗೇಗೌಡರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಹಿಂದಿನ ಸರ್ಕಾರ ಈ ಯೋಜನೆಗಳನ್ನು ಖಾಸಗಿ ಉದ್ಯಮಿಗಳಿಗೆ ಒಪ್ಪಿಸಲು ಟೆಂಡರ್ ಕರೆದಿತ್ತು. ಆದರೆ, ನಮ್ಮ ಸರ್ಕಾರ ಅದನ್ನು ರದ್ದುಪಡಿಸಿದೆ’ ಎಂದು ತಿಳಿಸಿದರು.

ಕಬ್ಬು: ಸರ್ಕಾರದ ವೈಫಲ್ಯ ಪ್ರತಿಭಟಿಸಿ ಸಭಾತ್ಯಾಗ

ಬೆಂಗಳೂರು, ಫೆ. 23– ರಾಜ್ಯದಲ್ಲಿ ಬೆಳೆದುನಿಂತು ನಾಶವಾಗುತ್ತಿರುವ ಲಕ್ಷಾಂತರ ಟನ್ ಕಬ್ಬನ್ನು ಅರೆಯುವ ಸೌಲಭ್ಯ ಸೃಷ್ಟಿಸುವಲ್ಲಿ ಮತ್ತು ಆತಂಕದ ಮಡುವಿಗೆ ಬಿದ್ದಿರುವ ಬೆಳೆಗಾರರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲ ವಾಗಿದೆ ಎಂದು ಆರೋಪಿಸಿ ವಿಧಾನ ಮಂಡಲದ ಉಭಯ ಸದನಗಳಲ್ಲಿ ಬಿಜೆಪಿ ಶಾಸಕರು ಮತ್ತು ವಿಧಾನ ಪರಿಷತ್ತಿನಲ್ಲಿ ಕಾಂಗೈ ಸದಸ್ಯರು ಇಂದು ಇಲ್ಲಿ ಸಭಾತ್ಯಾಗ ಮಾಡಿದರು.

ಮೂರು ತಾಸು ಕಾಲ ನಡೆದ ಚರ್ಚೆಗೆ ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡರು ಉತ್ತರಿಸುವ ಹಂತದಲ್ಲಿ ವ್ಯಕ್ತವಾದ ಸರ್ಕಾರದ ಅಸಹಾಯಕ ನಿಲುವನ್ನು ಪ್ರತಿಭಟಿಸಿ ವಿಧಾನಸಭೆಯಲ್ಲಿ ಶಾಸಕರಾದ ವಾಟಾಳ್ ನಾಗರಾಜ್ (ವಾಟಾಳ್ ಪಕ್ಷ) ಮತ್ತು ಕೆ.ಎಸ್.ಪುಟ್ಟಣ್ಣಯ್ಯ (ರೈತ ಸಂಘ) ದಿನದ ಕಲಾಪ ಮುಕ್ತಾಯಗೊಳ್ಳುವವರೆಗೂ ಧರಣಿಯನ್ನು ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.