ADVERTISEMENT

25 ವರ್ಷಗಳ ಹಿಂದೆ ಈ ದಿನ: ಜನತಾದಳ ಉಭಯ ಬಣಗಳ ವಿಲೀನಕ್ಕೆ ಹೆಗಡೆ ಹಸಿರು ನಿಶಾನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 19:20 IST
Last Updated 5 ಜನವರಿ 2026, 19:20 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಹೊಸ ಮೀಸಲಾತಿಗೆ ಆರು ವಾರ

ಬೆಂಗಳೂರು, ಜ. 5– ಈ ತಿಂಗಳು 28ರಂದು ನಡೆಯಬೇಕಿದ್ದ ನಗರ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇನ್ನು ಆರು ವಾರಗಳ ಒಳಗಾಗಿ, ಸಂವಿಧಾನದ ಪ್ರಕಾರ ವಾರ್ಡ್‌ಗಳ ಸರದಿ ಮೀಸಲಾತಿಯನ್ನು ನಿರ್ಧರಿಸುವ ಮಾನದಂಡಗಳನ್ನು ಗೊತ್ತುಪಡಿಸಿ, ಹೊಸ ಮೀಸಲಾತಿ ಅಧಿಸೂಚನೆ ಹೊರಡಿಸಬೇಕು ಎಂದು ರಾಜ್ಯ ಹೈಕೋರ್ಟ್‌ ಇಂದು ಮಹತ್ವದ ತೀರ್ಪು ನೀಡಿದೆ.

ರಾಜ್ಯದ ಎಲ್ಲ 147 ಸ್ಥಳೀಯ ಸಂಸ್ಥೆಗಳಿಗೆ ಈಗಾಗಲೇ ವಾರ್ಡ್‌ಗಳ ಮೀಸಲಾತಿ ನಿಗದಿಪಡಿಸಿ ಹೊರಡಿಸಿ
ರುವ ಅಧಿಸೂಚನೆಯನ್ನು ವಾಪಸುಪಡೆಯಲಾಗುವುದು ಎಂದು ಅಡ್ವೋಕೇಟ್‌ ಜನರಲ್‌ ಕೋರ್ಟ್‌ಗೆ ಭರವಸೆ ನೀಡಿದ ನಂತರ ನ್ಯಾಯಮೂರ್ತಿಗಳಿಂದ ಈ ಆದೇಶ ಬಂತು.

ADVERTISEMENT

ವಿಲೀನಕ್ಕೆ ಹೆಗಡೆ ಹಸಿರು ನಿಶಾನೆ

ಬೆಂಗಳೂರು, ಜ. 5– ಜನತಾದಳ ಉಭಯ ಬಣಗಳ ವಿಲೀನಕ್ಕೆ ಪ್ರಮುಖ ಅಡ್ಡಿಯಾಗಿದ್ದ ಕೇಂದ್ರದ ಮಾಜಿ ಸಚಿವ ರಾಮಕೃಷ್ಣ ಹೆಗಡೆ ಅವರೇ ಇಂದು ನಡೆದ ದಳ (ಯು) ಗುಂಪಿನ ಮುಖಂಡರ ಸಭೆಯಲ್ಲಿ ವಿಲೀನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ವಿಲೀನ ಪ್ರಕ್ರಿಯೆಯನ್ನು ಸುಗಮಗೊಳಿಸಿದ್ದಾರೆ.

ಇದರಿಂದ ಜನತಾದಳದ ಎರಡು ಬಣಗಳ ನಡುವೆ ಕೆಲವು ತಿಂಗಳಿಂದ ನಡೆಯುತ್ತಿದ್ದ ವಿಲೀನ ಪ್ರಕ್ರಿಯೆಯ ಮಾತುಕತೆಗೆ ಮಹತ್ವದ ಚಾಲನೆ ದೊರೆತಂತಾಗಿದೆ. ಇದೇ ನಿರ್ಧಾರವನ್ನು ಹೆಗಡೆಯವರು ನಾಳೆ ನಗರದಲ್ಲಿ ನಡೆಯಲಿರುವ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎತ್ತಿ ಹಿಡಿದರೆ ಮಾತ್ರ ವಿಲೀನ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರಕುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.