ADVERTISEMENT

25 ವರ್ಷಗಳ ಹಿಂದೆ: ಬುಧವಾರ 19–2–1997

ಪ್ರಜಾವಾಣಿ ವಿಶೇಷ
Published 18 ಫೆಬ್ರುವರಿ 2022, 20:15 IST
Last Updated 18 ಫೆಬ್ರುವರಿ 2022, 20:15 IST
   

ಆಲಮಟ್ಟಿ: ನಡೆಯದ ಸಭೆ ಪಟೇಲ್ ಗೈರುಹಾಜರಿ

ನವದೆಹಲಿ, ಫೆ. 18– ಆಲಮಟ್ಟಿ ಅಣೆಕಟ್ಟು ಎತ್ತರದ ವಿವಾದ ಕುರಿತಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು ಅವರು ಮಧ್ಯಸ್ಥಿಕೆಯಲ್ಲಿ ಇಂದು ನಡೆಯಬೇಕಾಗಿದ್ದ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಯಲಿಲ್ಲ.

ಕರ್ನಾಟಕದ ಮುಖ್ಯಮಂತ್ರಿ ಜೆ. ಎಚ್. ಪಟೇಲ್ ಅವರು ಗೈರುಹಾಜರಾದ ಕಾರಣ ಇಂದಿನ ಮಾತುಕತೆ ನಡೆಯಲು ಸಾಧ್ಯವಾಗಲಿಲ್ಲ. ಸಂಯುಕ್ತ ರಂಗದ ನಾಲ್ವರು ಮುಖ್ಯಮಂತ್ರಿಗಳ ಸಮಿತಿ ನೇಮಕ ಮಾಡಿದ್ದ ತಜ್ಞರ ಸಮಿತಿಯು ಈಗಾಗಲೇ ತನ್ನ ವರದಿಯನ್ನು ನೀಡಿದೆ. ಈ ವರದಿಯನ್ನು ಆಧರಿಸಿ ಕರ್ನಾಟಕದ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಾತುಕತೆ ನಡೆಸುವ ಕಾರ್ಯಕ್ರಮವಿತ್ತು.

ADVERTISEMENT

ನಿರೀಕ್ಷೆಯಂತೆ ಚಂದ್ರಬಾಬು ನಾಯ್ಡು ಅವರು ಸಂಯುಕ್ತ ರಂಗದ ಚಾಲನಾ ಸಮಿತಿ ಸಭೆಗೆ ಆಗಮಿಸಿದ್ದರಾದರೂ, ಪಟೇಲರ ಗೈರುಹಾಜರಿಯಿಂದ ಕುಪಿತರಾಗಿ ಸಭೆಯ ಅರ್ಧದಲ್ಲಿಯೇ ಎದ್ದು ಹೋರಟು ಹೋದರು. ಸಂಜೆ ಅವರು ಹೈದರಾಬಾದ್‌ಗೆ ತೆರಳಿದರು.

ದೆಹಲಿಯಲ್ಲಿ ಕರೆದಿರುವ ಸಭೆಗೆ ಹಾಜರಾಗಬಾರದು ಎಂದು ಕರ್ನಾಟಕ ವಿಧಾನಮಂಡಲದಲ್ಲಿ ಪ್ರತಿಪಕ್ಷಗಳು ಒತ್ತಾಯ ಮಾಡಿದ್ದರೂ, ಮಾತುಕತೆಯಲ್ಲಿ ಭಾಗವಹಿಸುವುದು ತಪ್ಪೇನೂ ಅಲ್ಲ ಎಂದು ನಿನ್ನೆ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದ ಪಟೇಲ್ ಅವರ ಗೈರುಹಾಜರಿ ಇಲ್ಲಿ ಕುತೂಹಲ ಉಂಟು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.