ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ: ಮಂಗಳವಾರ, 10–10–1995

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 19:30 IST
Last Updated 9 ಅಕ್ಟೋಬರ್ 2020, 19:30 IST
ಪ್ರಜಾವಾಣಿ 25 ವರ್ಷಗಳ ಹಿಂದೆ
ಪ್ರಜಾವಾಣಿ 25 ವರ್ಷಗಳ ಹಿಂದೆ   

ಚಂದ್ರಾಸ್ವಾಮಿ ಹಾರಿಕೆ ಉತ್ತರ, ಜೈನ್ ಎಚ್ಚರಿಕೆ

ನವದೆಹಲಿ, ಅ. 9 (ಯುಎನ್ಐ)– ವಿವಾದಾತ್ಮಕ ಸಾಧು ಚಂದ್ರಾಸ್ವಾಮಿ ಅವರು ಇಂದು ಜೈನ್ ಆಯೋಗದ ಮುಂದೆ ಪಾಟೀ ಸವಾಲಿಗೆ ಹಾರಿಕೆಯ ಉತ್ತರ ನೀಡಿದಾಗ, ಆಯೋಗದ ಅಧ್ಯಕ್ಷರು ಅವರಿಗೆ ಎಚ್ಚರಿಕೆ ಹೇಳಿ ನೇರ ಉತ್ತರ ಕೊಡುವಂತೆ ಆದೇಶಿಸಿದರು.

‘ಇಂಗ್ಲೆಂಡಿನ ಹೈಕೋರ್ಟಿನಲ್ಲಿ ಲಕ್ಕೂಭಾಯಿ ಪಾಠಕ್ ಎಂಬುವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಿರಾ?’ ಎಂಬ ಪ್ರಶ್ನೆಗೆ ‘ನನಗೆ ನೆನಪಿಲ್ಲ’ ಎಂದು ಉತ್ತರಿಸಿದಾಗ ಜೈನ್ ಅವರು ಹೀಗೆ ಎಚ್ಚರಿಸಿದರು.

ADVERTISEMENT

‘ಸಾಧು ಆಗುವ ಮೊದಲು ಎಷ್ಟುಬಾರಿ ಜೈಲಿಗೆ ಹೋಗಿದ್ದಿರಿ?’ ಎಂದು ಪಾಟೀಸವಾಲಿನಲ್ಲಿ ಪದೇಪದೇ ಕೇಳಿದಾಗ ಸ್ವಾಮಿ ಹಾರಿಕೆಯ ಉತ್ತರ ನೀಡಿದಾಗಲೂ ಈ ಎಚ್ಚರಿಕೆ ನೀಡಿ, ‘ಸರಿಯಾಗಿ ಉತ್ತರ ಕೊಡದಿದ್ದರೆ ಸುಳ್ಳುಹೇಳುತ್ತಿದ್ದೀರಿ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ’ ಎಂದು ನ್ಯಾಯಾಧೀಶರು ಎಚ್ಚರಿಸಿದರು.

ಕೆ.ಕೆ. ತಿವಾರಿ ಅವರು ಕೇಳಿದ ಇಂತಹ ಪ್ರಶ್ನೆಗಳಿಗೆ ಚಂದ್ರಾಸ್ವಾಮಿ ಉತ್ತರ ನೀಡದೆ ಸುಮ್ಮನೆ ನಿಂತಾಗ ‘ನೀವು ದೇವರ ಹತ್ತಿರ ಇದ್ದೀರಿ, ನಿಜ ಹೇಳಿ’ ಎಂದು ನ್ಯಾಯಾಧೀಶರು ಹೇಳಿದರು.

ಆಯೋಗದ ಅಧ್ಯಕ್ಷರು ತರಾಟೆಗೆ ತೆಗೆದುಕೊಂಡ ಮೇಲೆ, ತಾವು ಹಿಂದೆ ಎರಡು ಬಾರಿ ಜೈಲಿಗೆ ಹೋಗಿದ್ದಾಗಿ ತಿಳಿಸಿದರು.

ರಾಜೀನಾಮೆ ಕೊಡುವುದಿಲ್ಲ: ದೇವೇಗೌಡರ ಸವಾಲು

ಮೈಸೂರು, ಅ. 9– ತಮ್ಮ ಮೇಲೆ ‘ವಿಶ್ವಾಸವಿಟ್ಟ ಜನತೆಯ ಋಣ ತೀರಿಸಿಯೇ ಹೋಗಲು’ ನಿರ್ಧರಿಸಿರುವ ಮುಖ್ಯಮಂತ್ರಿ ದೇವೇಗೌಡ ಅವರು ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿದು ‘ರಾಜೀನಾಮೆ ಕೊಡುವ ತಪ್ಪು ಮಾಡುವುದಿಲ್ಲ’ ಎಂಬ ತಮ್ಮ ತೀರ್ಮಾನವನ್ನು ಇಂದಿಲ್ಲಿ ಪ್ರಕಟಿಸಿದರು.

ಇಲ್ಲಿನ ಪುರಭವನದ ಮೈದಾನದಲ್ಲಿ ಹದಿನೈದು ಸಾವಿರಕ್ಕೂ ಮಿಕ್ಕಿ ಜನರು ಭಾಗವಹಿಸಿದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ಭಾರತೀಯ ಜನತಾ ಪಕ್ಷ, ಕಾಂಗ್ರೆಸ್, ರೈತ ಸಂಘ ಮತ್ತು ಕನ್ನಡ ಚಳವಳಿ ಪಕ್ಷಗಳು ತಮ್ಮ ರಾಜೀನಾಮೆಗೆ ಒತ್ತಾಯಿಸುತ್ತಿರುವುದನ್ನು ಪ್ರಸ್ತಾಪಿಸಿ, ಈ ಪ್ರಶ್ನೆಗೆ ಉತ್ತರ ಕೇಳಲು ತಾವು ‘ಜನತಾ ನ್ಯಾಯಾಲಯ’ಕ್ಕೆ ಬಂದಿರುವುದಾಗಿ ತಿಳಿಸಿದರು.

‘ನಾನು ರಾಜೀನಾಮೆ ಕೊಡಬೇಕೋ ಬೇಡವೋ ಎಂಬುದನ್ನು ನೀವೇ ಹೇಳಿ?’ ಎಂದು ಸಭಿಕರಿಗೆ ಪ್ರಶ್ನೆ ಹಾಕಿದ ಮುಖ್ಯಮಂತ್ರಿ ಉತ್ತರಕ್ಕಾಗಿ ಕಾದರು. ‘ಬೇಡ, ಬೇಡ’ ಎಂದು ಸಭಿಕರು ಹೇಳಿ ದಾಗ ಅವರಿಂದ ಕೈ ಎತ್ತಿಸಿ ತಮ್ಮ ಬೆಂಬಲ ವನ್ನು ಖಚಿತಪಡಿಸಿಕೊಂಡು ಕೂತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.