ಭಯೋತ್ಪಾದನೆ ತಡೆಯಲು ಸರ್ಕಾರಕ್ಕೆ ಮುಕ್ತ ಅವಕಾಶ
ನವದೆಹಲಿ, ಮೇ 12 (ಯುಎನ್‌ಐ, ಪಿಟಿಐ)– ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕಲು ಪ್ರತಿಪಕ್ಷಗಳು ಇಂದು ಸರ್ಕಾರಕ್ಕೆ ಮುಕ್ತ ಅವಕಾಶ ನೀಡಿದವಲ್ಲದೆ, ಕಣಿವೆಯಲ್ಲಿನ ದರ್ಗಾವನ್ನು ನಾಶ ಮಾಡುವಲ್ಲಿ ಪಾಕಿಸ್ತಾನ ವಹಿಸಿದ ಪಾತ್ರವನ್ನು ತೀವ್ರವಾಗಿ ಖಂಡಿಸಿದವು.
ಕಾಶ್ಮೀರದಲ್ಲಿ ರಾಜಕೀಯ ಪ್ರಕ್ರಿಯೆ ಮತ್ತೆ ನೆಲೆಗೊಳ್ಳುವಂತೆ ಮಾಡಲು ಸರ್ಕಾರ ನಡೆಸಿರುವ ಯತ್ನಗಳಿಗೆ ಪ್ರತಿಪಕ್ಷಗಳು ತಮ್ಮ ಪೂರ್ಣ ಬೆಂಬಲ ನೀಡಿದವು. ಈ ಸಂಬಂಧ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಹೇಳಿದ್ದನ್ನು ಪ್ರತಿಪಕ್ಷಗಳು ಒಪ್ಪಿಕೊಂಡವು.
ಭೂ ಆಕ್ರಮಣ ತನಿಖೆಗೆ ವಿಶೇಷ ಜಿಲ್ಲಾಧಿಕಾರಿ
ಬೆಂಗಳೂರು, ಮೇ 12– ರಾಜ್ಯದ ವಿವಿಧೆಡೆಗಳಲ್ಲಿ ಕೆರೆ ಅಂಗಳ, ಗೋಮಾಳ, ಸ್ಮಶಾನ ಸೇರಿದಂತೆ ಭಾರೀ ಪ್ರಮಾಣದ ಸರ್ಕಾರಿ ಭೂಮಿ ಪರಭಾರೆಯಾಗಿದ್ದು, ಅದನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲೆಂದೇ ಆಯ್ದ 15 ಜಿಲ್ಲೆಗಳಲ್ಲಿ ವಿಶೇಷ ಜಿಲ್ಲಾಧಿಕಾರಿ ಹುದ್ದೆಯನ್ನು ಸೃಷ್ಟಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಎಲ್.ಜಾಲಪ್ಪ ಇಂದು ಇಲ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.