ADVERTISEMENT

25 ವರ್ಷಗಳ ಹಿಂದೆ | ಶನಿವಾರ, ಜೂನ್‌ 24 1995

​ಪ್ರಜಾವಾಣಿ ವಾರ್ತೆ
Published 23 ಜೂನ್ 2020, 15:37 IST
Last Updated 23 ಜೂನ್ 2020, 15:37 IST

ಅಕಾಡೆಮಿ ನೇಮಕಾತಿಯಲ್ಲಿ ಹಸ್ತಕ್ಷೇಪ ನಡೆದಿಲ್ಲ– ಮುಖ್ಯಮಂತ್ರಿ

ಬೆಂಗಳೂರು, ಜೂನ್‌ 23– ವಿವಿಧ ಅಕಾಡೆಮಿಗಳ ನಾಮಕರಣದ ವಿಚಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಲಲಿತಾ ನಾಯಕ್‌ ವ್ಯಕ್ತಪಡಿಸಿರುವ ಅಸಮಾಧಾನವನ್ನು ದೊಡ್ಡದು ಮಾಡಬೇಕಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ದೇವೇಗೌಡರು ಇಂದು ಇಲ್ಲಿ ಹೇಳಿದರು.

ಸಚಿವ ಸಹೋದ್ಯೋಗಿಗಳು ಸಮಾಲೋಚಿಸಿ ಮಾಡಿದ ಶಿಫಾರಸಿನಂತೆ ವಿವಿಧ ಪ್ರಾಧಿಕಾರ, ಅಕಾಡೆಮಿಗಳಿಗೆ ನಾಮಕರಣ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ADVERTISEMENT

ಅಕಾಡೆಮಿಗಳ ಪುನರ್‌ರಚನೆಯಲ್ಲಿ ತಮ್ಮನ್ನು ಕಡೆಗಣಿಸಿ ಸಚಿವ ಸಹೋದ್ಯೋಗಿಗಳು ನಡೆಸಿದ ಹಸ್ತಕ್ಷೇಪ ನೋವುಂಟು ಮಾಡಿದೆ ಎಂದು ಲಲಿತಾ ನಾಯಕ್‌ ನಿನ್ನೆ ಪತ್ರಕರ್ತರ ಮುಂದೆ ಅಳಲು ತೋಡಿಕೊಂಡಿದ್ದರು. ಈ ಸನ್ನಿವೇಶದಲ್ಲಿ ಕನ್ನಡ ಮತ್ತು ಸಂಸ್ಕೃತಿ ಖಾತೆಯಲ್ಲಿ ಮುಂದುವರಿಯಬೇಕೇ ಬೇಡವೇ ಎಂದು ಚಿಂತಿಸುತ್ತಿರುವುದಾಗಿಯೂ ಅವರು ಹೇಳಿದ್ದರು.

ಕುಣಿಗಲ್‌ ಗುಂಡೇಟು ಪ್ರಕರಣ: ಪಾಟೀಲ್‌ ಆಯೋಗದ ವರದಿಗೆ ಸಂಪುಟ ಒಪ್ಪಿಗೆ

ಬೆಂಗಳೂರು, ಜೂನ್‌ 23– ಕುಣಿಗಲ್‌ ಗೋಲಿಬಾರ್ ಪ್ರಕರಣದ ವಿಚಾರಣೆಗೆ ನೇಮಿಸಲಾಗಿದ್ದ ನ್ಯಾಯಮೂರ್ತಿ ಎಂ.ಎಸ್‌.ಪಾಟೀಲ್‌ ಆಯೋಗ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಅಂಗೀಕರಿಸಲು ರಾಜ್ಯ ಸಚಿವ ಸಂಪುಟ ಇಂದು ತೀರ್ಮಾನಿಸಿತು.

ಆಯೋಗದ ವರದಿ ಸರ್ಕಾರಕ್ಕೆ ಬಂದ ನಂತರ ಅದರ ಬಗ್ಗೆ ಗೃಹ ಮತ್ತು ಕಾನೂನು ಇಲಾಖೆಯವರು ಬಹಳ ಸೂಕ್ಷ್ಮವಾಗಿ ಪರಿಶೀಲಿಸಿದರು. ಅವರು ನೀಡಿದ ಶಿಫಾರಸಿಗೆ ಅನುಗುಣವಾಗಿ ಸಂಪುಟ ಈ ನಿರ್ಧಾರ ಕೈಗೊಂಡಿತು ಎಂದು ಮುಖ್ಯಮಂತ್ರಿ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.