ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ: ಸೋಮವಾರ, 16-10-1995

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 19:31 IST
Last Updated 15 ಅಕ್ಟೋಬರ್ 2020, 19:31 IST
   

ಖಾತೆ ಮೇಲೆ ಸಿಬಿಐ ನಿಗಾ:ಪೈಲಟ್ ಕೋರಿಕೆ

ನವದೆಹಲಿ, ಅ. 15 (ಯುಎನ್‌ಐ): ಕೇಂದ್ರೀಯ ತನಿಖಾ ದಳದ (ಸಿಬಿಐ) ಪತ್ತೇದಾರರು ತಮ್ಮ ಖಾತೆಯ ಮೇಲೆ ನಿಗಾ ಇರಿಸಬೇಕು ಎಂದು ಪರಿಸರ ಹಾಗೂ ಅರಣ್ಯ ಸಚಿವ ರಾಜೇಶ್ ಪೈಲಟ್ ಬಯಸಿದ್ದು ಈ ಸಂಬಂಧ ತಮ್ಮ ಲಿಖಿತ ಕೋರಿಕೆಯನ್ನು ಸದ್ಯವೇ ಗೃಹ ಖಾತೆಗೆ ಸಲ್ಲಿಸಲಿದ್ದಾರೆ.

ತಮ್ಮ ಕಚೇರಿಯಿರುವ ಪರ್ಯಾವರಣ ಭವನ ಹಾಗೂ ಖಾತೆಯ ಇತರ ವಿಭಾಗಗಳ ಮೇಲೆ ಸಿಬಿಐ ಕಾವಲು ನಡೆಸಬೇಕು ಎಂದು ಪೈಲಟ್ ಬಯಸಿರುವುದರ ಉದ್ದೇಶ ತಮ್ಮ ಖಾತೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಲಂಚದ ಹಾಗೂಸ್ವಜನಪಕ್ಷಪಾತದ ಆರೋಪಕ್ಕೆ ಒಳಗಾಗಬಾರದು ಎಂಬುದೇ ಆಗಿದೆ.

ADVERTISEMENT

ಪರಿಸರ ಖಾತೆಯು ಉದ್ಯಮಗಳ ಸ್ಥಾಪನೆಗೆ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಪರವಾನಗಿ ನೀಡುವ ಸಂಸ್ಥೆಯಾದುದರಿಂದ ಇಂತಹ ಆರೋಪ ಬರುವ ಸಾಧ್ಯತೆಯನ್ನು ನಿರೀಕ್ಷಿಸಿ ಈ ಹೆಜ್ಜೆ ಇರಿಸಲಾಗಿದೆ. ‘ದೇಶದ ಸಮೃದ್ಧ ಜೀವವೈವಿಧ್ಯವನ್ನು ಸಂರಕ್ಷಿಸಬೇಕಾದ ನಮ್ಮ ಕೆಲಸ ಹಾಗೂ ಚಟುವಟಿಕೆ ಗಳು ಗೋಪ್ಯವಾಗಿ ನಡೆಯುವುದು ಬೇಡ’ ಎಂದು ಹೇಳಿರುವ ಅವರು ತಮ್ಮ ಖಾತೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಹಲವಾರು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಒಮ್ಮತದ ಅಭ್ಯರ್ಥಿ ಸುರೇಶ್ ಮೆಹ್ತಾ

ನವದೆಹಲಿ, ಅ. 15 (ಯುಎನ್‌ಐ)– ಗುಜರಾತ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜ್ಯದ ಹಣಕಾಸು ಸಚಿವ ಸುರೇಶ್ ಮೆಹ್ತಾ ಅವರು ಒಮ್ಮತದ ಅಭ್ಯರ್ಥಿ ಆಗಿ ಉದಯಿಸಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ಮೂಲಗಳು ಇಂದು ರಾತ್ರಿ ತಿಳಿಸಿವೆ.

ಈ ಮಧ್ಯೆ ರಾಜೀನಾಮೆ ನೀಡಿದ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಅವರು ಇಂದು ಬೆಳಿಗ್ಗೆ ಹಠಾತ್ತನೆ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ನಾಯಕನ ಆಯ್ಕೆಗೆ ಶಾಸಕಾಂಗ ಪಕ್ಷದ ಸಭೆ ಯಾವಾಗ ನಡೆಯಬೇಕು ಎಂಬುದನ್ನು ನಾಳೆ ಕೇಶುಭಾಯಿ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಶರ್ಮಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.