ADVERTISEMENT

25 ವರ್ಷಗಳ ಹಿಂದೆ| ಗುರುವಾರ 2–3–1995

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 19:45 IST
Last Updated 1 ಮಾರ್ಚ್ 2020, 19:45 IST

ಸೋಮಶೇಖರ್‌ ಮೇಲೆ ವಕೀಲರ ಆಕ್ರೋಶ, ಹಿಗ್ಗಾಮುಗ್ಗ ಹೊಡೆತ

ಬೆಂಗಳೂರು, ಮಾರ್ಚಿ 1– ನ್ಯಾಯಾಲಯದಲ್ಲಿ ನ್ಯಾಯಾಧೀಶರ ಕಣ್ಣೆದುರೇ ವಕೀಲರೊಬ್ಬರು ಸೇರಿದಂತೆ ಇಬ್ಬರ ಮೇಲೆ ಹಲ್ಲೆ ಮಾಡಿದ ಪೊಲೀಸ್‌ ಅಧಿಕಾರಿ ಎನ್‌.ಸೋಮಶೇಖರ್‌ ಅವರನ್ನು ರೊಚ್ಚಿಗೆದ್ದ ನೂರಾರು ವಕೀಲರು ಅಲ್ಲೇ ಹಿಗ್ಗಾಮುಗ್ಗ ಥಳಿಸಿದ ಘಟನೆ ನಗರದ ‘ಕೋರ್ಟು ಸಂಕೀರ್ಣ’ದಲ್ಲಿ ಇಂದು ಬೆಳಿಗ್ಗೆ ನಡೆಯಿತು.

ನ್ಯಾಯಾಲಯದಲ್ಲಿ ಹಲ್ಲೆ ನಡೆಸಿದ ಆರೋಪದ ಮೇಲೆ ಸೋಮಶೇಖರ್‌ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಈ ಘಟನೆ ಬಗ್ಗೆ ಕೂಲಂಕಷ ತನಿಖೆ ನಡೆಸಿ ತಕ್ಷಣವೇ ವರದಿ ಸಲ್ಲಿಸುವಂತೆ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಸರ್ಕಾರ ಆದೇಶಿಸಿದೆ.

ADVERTISEMENT

ವೈಚಾರಿಕ ಸ್ವಾತಂತ್ರ್ಯದ ಮೇಲೆ ಹಲ್ಲೆ

ಬೆಂಗಳೂರು, ಮಾರ್ಚಿ 1– ಕರ್ನಾಟಕದಲ್ಲಿ ವೈಚಾರಿಕ ಸ್ವಾತಂತ್ರ್ಯಕ್ಕೆ ಇಂದು ಧಕ್ಕೆಯುಂಟಾಗುವ ಪರಿಸ್ಥಿತಿ ಎದುರಾಗಿದ್ದು ಅಸಹನೆ ತೀವ್ರವಾಗುತ್ತಿದೆ. ಇಂಥ ಭಯಮಿಶ್ರಿತ ವಾತಾವರಣದಲ್ಲಿ ಸೃಜನಶೀಲ ಸಾಹಿತ್ಯ ರಚನೆಯಾಗುವುದು ಸಾಧ್ಯವೇ ಇಲ್ಲ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಯು.ಆರ್.ಅನಂತಮೂರ್ತಿ ಇಂದು ಇಲ್ಲಿ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಸೃಜನಶೀಲ ಸಾಹಿತ್ಯದ ವಿರೋಧಿ ಶಕ್ತಿಗಳು ಇಂದು ಪ್ರಾಬಲ್ಯ ಪಡೆದುಕೊಳ್ಳುತ್ತಿವೆ ಎಂದು ವಿಷಾದಿಸಿದರು.

ಕನ್ನಡ ಸಂಸ್ಕೃತಿ ನಿರ್ದೇಶನಾಲಯವು ನೀಡಿದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಕನ್ನಡದ ಖ್ಯಾತ ಸಾಹಿತಿಗಳು ನಿರ್ಭಯವಾಗಿ ಸತ್ಯಶೋಧನೆಯ ಆಶಯದ ಕೃತಿಗಳನ್ನು ರಚನೆ ಮಾಡಿದ್ದಾರೆ. ಆದರೆ ಎಂದೂ ಇಂಥ ವಾತಾವರಣ ನಿರ್ಮಾಣವಾಗಿರಲಿಲ್ಲ. ಸೃಜನಶೀಲರಿಗೆ ಕರ್ನಾಟಕದಲ್ಲಿ ಮುಕ್ತ ಅವಕಾಶವಿದ್ದು ಇದು ದೇಶಕ್ಕೆ ಮಾದರಿಯಾಗಿತ್ತು. ಆದರೆ ಇಂದು ವಾತಾವರಣ ಬದಲಾಗಿದೆ. ಇದರಿಂದ ಮಹಾಕೃತಿಗಳ ರಚನೆ ಅಸಾಧ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.