ADVERTISEMENT

25 ವರ್ಷಗಳ ಹಿಂದೆ: ಬುಧವಾರ, 29-5-1996

​ಪ್ರಜಾವಾಣಿ ವಾರ್ತೆ
Published 28 ಮೇ 2021, 19:30 IST
Last Updated 28 ಮೇ 2021, 19:30 IST
   

ವಿಶ್ವಾಸಮತಕ್ಕೆ ಮುನ್ನ 13 ದಿನಗಳ ಬಿಜೆಪಿ ನೇತೃತ್ವದ ಸರ್ಕಾರ ಪತನ

ನವದೆಹಲಿ, ಮೇ 28 (ಪಿಟಿಐ)– ಲೋಕಸಭೆಯಲ್ಲಿ ವಿಶ್ವಾಸ ನಿರ್ಣಯದ ಮೇಲೆ ಮತದಾನಕ್ಕೆ ಮೊದಲೇ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಇಂದು ರಾಜೀನಾಮೆ ನೀಡುವುದರೊಂದಿಗೆ, 13 ದಿನಗಳ ಹಿಂದೆ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ನೇತೃತ್ವದ ಮೊದಲ ಸರ್ಕಾರ ಪತನವಾಯಿತು.

ವಿಶ್ವಾಸಮತದ ಮೇಲೆ ಎರಡು ದಿನ ನಡೆದ ಚರ್ಚೆಗೆ ನೀಡಿದ ಉತ್ತರದ ಕೊನೆಯಲ್ಲಿ ವಾಜಪೇಯಿ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿ, ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ಡಾ. ಶಂಕರ ದಯಾಳ್‌ ಶರ್ಮಾ ಅವರಿಗೆ ತಮ್ಮ 13 ದಿನಗಳ ಹಳೆಯ ಬಿಜೆಪಿ–ಶಿವಸೇನೆ ಸಂಪುಟದ ರಾಜೀನಾಮೆ ಸಲ್ಲಿಸಿದರು.

ADVERTISEMENT

ಇದಕ್ಕೂ ಮುನ್ನ ಇಂದು ಮಧ್ಯಾಹ್ನ ಸದನದಲ್ಲಿ ಚರ್ಚೆ ಮುಕ್ತಾಯಗೊಳಿಸುತ್ತಾ ಮಾತನಾಡಿದ ವಾಜಪೇಯಿ, ‘ನಾನು ಹಿಂದೆ ಪ್ರತಿಪಕ್ಷದಲ್ಲಿದ್ದೆ. ಈಗ ಪ್ರಧಾನಿಯಾಗಿದ್ದೇನೆ. ಕೆಲವೇ ಹೊತ್ತಿನಲ್ಲಿ ಈ ಹುದ್ದೆಯಲ್ಲಿ ಇರಲಿಕ್ಕಿಲ್ಲ’ ಎನ್ನುತ್ತ ಭಾಷಣದ ಕೊನೆಯಲ್ಲಿ ‘ನಮಗೆ ಜನಾದೇಶ ಇದ್ದರೂ ಸದನದಲ್ಲಿ ಸಂಖ್ಯಾಬಲದ ಬಹುಮತ ಇಲ್ಲದ ಕಾರಣ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ’ ಎಂದು ಪ್ರಕಟಿಸಿದರು.

ಪ್ರಧಾನಿಯಾಗಿ ದೇವೇಗೌಡ ಶನಿವಾರ ಪ್ರಮಾಣವಚನ

ನವದೆಹಲಿ, ಮೇ 28– ಸಂಯುಕ್ತ ರಂಗದ ಸಂಸದೀಯ ನಾಯಕ ಎಚ್‌.ಡಿ.ದೇವೇಗೌಡ ಅವರನ್ನು ರಾಷ್ಟ್ರಪತಿ ಅವರು ಸರ್ಕಾರ ರಚಿಸಲು ಇಂದು ರಾತ್ರಿ ಆಮಂತ್ರಿಸಿದರು. ದೇವೇಗೌಡ ಅವರು ಶನಿವಾರ 12.30ಕ್ಕೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವರು. ಇದರೊಂದಿಗೆ ಕರ್ನಾಟಕದಿಂದ ಮೊದಲ ಪ್ರಧಾನಿ ಆಗುತ್ತಿರುವ ಕೀರ್ತಿ ಇವರದಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.