ADVERTISEMENT

25 ವರ್ಷಗಳ ಹಿಂದೆ: ನಿಗಮ, ಮಂಡಲಿ ಪುನರ್‌ರಚನೆ ತಂದ ಅತೃಪ್ತಿ

ಪ್ರಜಾವಾಣಿ ವಿಶೇಷ
Published 31 ಆಗಸ್ಟ್ 2023, 0:14 IST
Last Updated 31 ಆಗಸ್ಟ್ 2023, 0:14 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಸೋಮವಾರ 31 ಆಗಸ್ಟ್‌ 1998

ಬೆಳೆವಿಮೆ ವ್ಯಾಪ್ತಿ ಹೆಚ್ಚಳ: ಯಶವಂತ ಸಿನ್ಹಾ ಪ್ರಕಟಣೆ

ಹೈದರಾಬಾದ್‌, ಆ.30 (ಯುಎನ್‌ಐ)– ಕೃಷಿಕರಿಗೆ ಅನುಕೂಲ ಕಲ್ಪಿಸುವ ನೂತನ ಬೆಳೆವಿಮೆ ಯೋಜನೆಯನ್ನು ಇನ್ನೆರಡು ತಿಂಗಳಲ್ಲಿ ಜಾರಿಗೆ ತರಲಾಗುವುದು ಎಂದು ಹಣಕಾಸು ಸಚಿವ ಯಶವಂತ ಸಿನ್ಹಾ ಇಂದು ಇಲ್ಲಿ ಪ್ರಕಟಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿತ್ತಿದ್ದ ಅವರು ‘ಈ ಸಂಬಂಧ ಹಣಕಾಸು ಸಚಿವಾಲಯವು ಕೃಷಿ ಸಚಿವಾಲಯ ವಿಮಾ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಸದ್ಯದ ಬೆಳೆ ವಿಮೆಯು ದೇಶದ 24 ಜಿಲ್ಲೆಗಳಿಗೆ ಅನ್ವಯವಾಗುತ್ತಿದ್ದು, ಹೊಸ ವಿಮೆ ಈ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲಿದೆ’ ಎಂದರು.

ADVERTISEMENT

ಅಲ್ಲದೆ, ಪ್ರಸ್ತುತ ವಿಮಾ ಸೌಲಭ್ಯವು ಸಾಲ ಪಡೆದ ರೈತರಿಗೆ ಮಾತ್ರ ಪ್ರಯೋಜನಕಾರಿಯಾಗಿದೆ. ಉದ್ದೇಶಿತ ನೂತನ ಬೆಳೆ ವಿಮೆಯು ಎಲ್ಲ ರೈತರು ವರ್ಷದಲ್ಲಿ ಬೆಳೆಯುವ ಎರಡು ಮುಖ್ಯ ಬೆಳೆಗಳಿಗೆ ಸಹಾಯಹಸ್ತ ನೀಡಲಿದೆ ಎಂದರು. 

ನಿಗಮ, ಮಂಡಲಿ ಪುನರ್ರಚನೆ ತಂದ ಅತೃಪ್ತಿ

ಬೆಂಗಳೂರು, ಆ.30– ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದ ವಿವಿಧ ನಿಗಮ– ಮಂಡಲಿಗಳ ಪುನರ್ರಚನೆ ಕಾರ್ಯ, ಶನಿವಾರ ಕೊನೆಗೂ ಪೂರ್ಣಗೊಂಡಿತಾದರೂ ಇದು ಆಡಳಿತಾರೂಢ ಜನತಾ ದಳದ ಶಾಸಕರು ಮತ್ತು ಕಾರ್ಯಕರ್ತರಲ್ಲಿ ಸಮಾಧಾನಕ್ಕಿಂತಲೂ ಹೆಚ್ಚಾಗಿ ಅಸಮಾಧಾನವನ್ನೇ ಹುಟ್ಟಿಸಿದೆ.

ರಾಜ್ಯದಲ್ಲಿ ಒಟ್ಟು 109 ನಿಗಮ– ಮಂಡಲಿಗಳು, ಅಭಿವೃದ್ಧಿ ಪ್ರಾಧಿಕಾರಗಳಿದ್ದು ಅವುಗಳ ಪೈಕಿ 24 ಸಂಸ್ಥೆಗಳಿಗೆ ಪಕ್ಷದ ಶಾಸಕರನ್ನು ಹಾಗೂ ಉಳಿದ 85 ಸಂಸ್ಥೆಗಳಿಗೆ ಪಕ್ಷದ ಹಿರಿಯ ಕಾರ್ಯಕರ್ತರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಹೀಗೆ ಒಟ್ಟು 681 ಜನರಿಗೆ ಒಂದಲ್ಲಾ ಒಂದು ರೀತಿಯ ಅಧಿಕಾರ ಸ್ಥಾನ ದೊರೆತಿದೆ. ಆದರೆ ಅಧಿಕಾರ ಸ್ಥಾನಗಳಿಗಾಗಿ ‘ಹೋರಾಟ’ ನಡೆಸಿದರೂ ಯಾವುದೇ ಫಲ ಸಿಗದೆ ಹತಾಶರಾದವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.