
ಮನೆಗೇ ನೇರ ಟಿವಿ ಪ್ರಸಾರಕ್ಕೆ ಸಂಪುಟ ಒಪ್ಪಿಗೆ
ನವದೆಹಲಿ, ನ. 2 (ಪಿಟಿಐ)– ದೇಶದ ಟಿವಿ ಪ್ರಸಾರದಲ್ಲಿ ಕ್ರಾಂತಿ ಮಾಡಬಹುದಾದ ‘ಮನೆಗೇ ನೇರವಾಗಿ ಪ್ರಸಾರ’ ಮಾಡುವ (ಡೈರೆಕ್ಟ್ ಟು ಹೋಮ್ ಅಥವಾ ಡಿಟಿಎಚ್) ಟೆಲಿವಿಷನ್ ಸೌಲಭ್ಯಕ್ಕೆ ಕೇಂದ್ರ ಸಚಿವ ಸಂಪುಟ ಇಂದು ಒಪ್ಪಿಗೆ ನೀಡಿತು.
ಈ ಅನುಮತಿಯ ಜತೆಗೆ ಈ ಕ್ಷೇತ್ರಕ್ಕೆ ಆಕರ್ಷಿಸಬಹುದಾದ ವಿದೇಶಿ ನೇರ ಬಂಡವಾಳದ ಮಿತಿಯನ್ನು ಶೇ 49ಕ್ಕೆ ನಿಗದಿ ಮಾಡಲಾಗಿದೆ. ಮಾತ್ರವಲ್ಲದೆ, ರಾಷ್ಟ್ರದ ಭದ್ರತೆ ಮತ್ತು ನೈತಿಕತೆಯನ್ನು ಕಾಪಾಡುವ ರೀತಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಟೆಲಿವಿಷನ್ ಸೌಲಭ್ಯಗಳ ವಿತರಣೆಯಲ್ಲಿ ಏಕಸ್ವಾಮ್ಯ ತಡೆಯಲು ಕೂಡ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಸಿದ್ಧ ಉಡುಪು: ನಿರ್ಬಂಧ ರದ್ದು– ಹೊಸ ಜವಳಿ ನೀತಿ
ನವದೆಹಲಿ, ನ. 2– ಕೇಂದ್ರ ಸರ್ಕಾರ ಇಂದು ಪ್ರಕಟಿಸಿದ ಮಹತ್ವದ ಹೊಸ ಜವಳಿ ನೀತಿಯಲ್ಲಿ, ಸಿದ್ಧ ಉಡುಪುಗಳ ಉದ್ಯಮವನ್ನು ಸಣ್ಣ ಕೈಗಾರಿಕಾ ಕ್ಷೇತ್ರಕ್ಕಷ್ಟೇ ಸೀಮಿತಗೊಳಿಸಿ ಹೇರಲಾಗಿದ್ದ ನಿರ್ಬಂಧ ಮತ್ತು
ಆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ವಿಧಿಸಲಾಗಿದ್ದ ಶೇ 24ರ ಮಿತಿಯನ್ನು ತೆಗೆದು ಹಾಕಲಾಗಿದೆ.
ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟದ ಸಭೆ ಈ ಹೊಸ ಜವಳಿ ನೀತಿಗೆ ಅಂಗೀಕಾರ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.