ADVERTISEMENT

ಗುರುವಾರ, 17–4–1969

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 20:16 IST
Last Updated 16 ಏಪ್ರಿಲ್ 2019, 20:16 IST

ಪುರಿ ಶಂಕರಾಚಾರ್ಯರ ವಿರುದ್ಧ ಕಾನೂನು ಕ್ರಮಕ್ಕೆ ಕೇಂದ್ರದ ಸೂಚನೆ
ನವದೆಹಲಿ, ಏ. 16– ಅಸ್ಪೃಶ್ಯತೆಯನ್ನು ಸಮರ್ಥಿಸುವ ಹೇಳಿಕೆ ನೀಡಿದುದಕ್ಕಾಗಿ ಪುರಿ ಶಂಕರಾಚಾರ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೇಂದ್ರವು ಬಿಹಾರ ಸರ್ಕಾರಕ್ಕೆ ಸೂಚಿಸಿದೆ ಎಂದು ಕೇಂದ್ರ ನ್ಯಾಯಾಂಗ ಸಚಿವ ಶ್ರೀ ಪಿ. ಗೋವಿಂದ ಮೆನನ್ ಅವರು ಇಂದು ಲೋಕಸಭೆಯಲ್ಲಿ ತಿಳಿಸಿದರು.

ಈ ವಿಷಯವು ಸಂಬಂಧಿಸಿದ ಮ್ಯಾಜಿಸ್ಟ್ರೇಟರ ಪರಿಶೀಲನೆಯಲ್ಲಿತ್ತು ಎಂದೂ ಶ್ರೀ ಮೆನನ್ ತಿಳಿಸಿದರು.

ಗೃಹ ಸಚಿವ ಖಾತೆಯು ತಮ್ಮೊಡನೆ ಸಮಾಲೋಚಿಸಿದಾಗ, ಶಂಕರಾಚಾರ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತಾವೇ ಸೂಚಿಸಿದುದಾಗಿ ಶ್ರೀ ಮೆನನ್ ಹೇಳಿದರು.

ADVERTISEMENT

ಶಂಕರಾಚಾರ್ಯರ ಬಗ್ಗೆ ಕೇಂದ್ರ ‘ನಿತ್ರಾಣ’ ನೀತಿಯನ್ನು ಅನುಸರಿಸುತ್ತಿದೆಯೆಂದು ಶ್ರೀ ಟಿ.ಎಚ್. ಸೊನಾವಣೆ (ಕಾಂಗ್ರೆಸ್) ಅವರು ಬಣ್ಣಿಸಿದಾಗ ಕೆಲವು ಕಾಂಗ್ರೆಸ್ ಸದಸ್ಯರು ಪ್ರತಿಭಟಿಸಿದರು.

ಮಂಚನಬೆಲೆ ಜಲಾಶಯ: ಯೋಜನಾ ಆಯೋಗದ ಆಖೈರು ಸಮ್ಮತಿ
ನವದೆಹಲಿ, ಏ. 16– ಮಂಚನಬೆಲೆ ವಿವಿಧೋದ್ದೇಶ ಜಲಾಶಯ ಯೋಜನೆಗೆ ಯೋಜನಾ ಆಯೋಗ ಒಪ್ಪಿಗೆಯಿತ್ತಿದೆ.

ನಾಲ್ಕನೇ ಯೋಜನೆಯಲ್ಲಿ ಈ ಯೋಜನೆಯನ್ನು ತೆಗೆದುಕೊಳ್ಳಲು ಯೋಜನಾ ಆಯೋಗ ಆಖೈರು ಸಮ್ಮತಿ ಸೂಚಿಸಿದೆ. ಅರ್ಕಾವತಿ ನದಿ ದಂಡೆಯಲ್ಲಿರುವ ಹಿಪ್ಪನೇರಳೆ ತೋಟಗಳನ್ನು ಉದ್ದೇಶಿತ ಯೋಜನೆ ರಕ್ಷಿಸುವುದರಿಂದ ಸೂಕ್ತ ಪ್ರವಾಹ ತೆರಿಗೆ ವಿಧಿಸಲು ರಾಜ್ಯ ಸರ್ಕಾರಕ್ಕೆ ಯೋಜನಾ ಆಯೋಗ ಸಲಹೆ ಮಾಡಿದೆ.

ಹಿಂದಿ ಸ್ತಾನ್!
ನವದೆಹಲಿ, ಏ. 16– ವಿದೇಶಗಳಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳಿಗೆಲ್ಲ ಹಿಂದಿಯಲ್ಲಿ ಮಾತುಕತೆ ನಡೆಸುವಂತೆ ಕೇಂದ್ರ ಸರಕಾರದ ಸೂಚನೆ. ತಮ್ಮ ತಮ್ಮಲ್ಲಿ ಮತ್ತು ಉತ್ತರ ಭಾರತೀಯರೊಡನೆ ಮಾತ್ರವಲ್ಲದೆ ಹಿಂದಿ ತಿಳಿವಳಿಕೆ ಇರುವ ವಿದೇಶೀಯರೊಡನೆಯೂ ಹಿಂದಿ ಬಳಸುವಂತೆ ಅವರ ಸಲಹೆ.

ವಿದೇಶಾಂಗ ಶಾಖೆ ಉಪಸಚಿವ ಶ್ರೀ ಸುರೇಂದ್ರಪಾಲ್ ಸಿಂಗ್ ಅವರು ಇಂದು ಲೋಕಸಭೆಯಲ್ಲಿ ಶ್ರೀ ಬಾಬುರಾವ್ ಪಟೇಲರಿಗೆ ಕೊಟ್ಟ ಲಿಖಿತ ಉತ್ತರವೊಂದರಲ್ಲಿ, ಸೂಕ್ತ ಸಂದರ್ಭಗಳಲ್ಲಿ ಅಧಿಕಾರಿಗಳು ಹಿಂದಿಯಲ್ಲಿ ಭಾಷಣ ಮಾಡುವಂತೆಯೂ, ಆಹ್ವಾನಗಳು ಮತ್ತು ‘ವಿಸಿಟಿಂಗ್ ಕಾರ್ಡ್’ಗಳನ್ನು ಹಿಂದಿಯಲ್ಲಿ ಮುದ್ರಿಸುವಂತೆಯೂ ಸೂಚಿಸಲಾಗಿದೆಯೆಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.