ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಭಾನುವಾರ, 27 ಆಗಸ್ಟ್, 1972

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 19:45 IST
Last Updated 26 ಆಗಸ್ಟ್ 2022, 19:45 IST
   

ಕಾಶ್ಮೀರದಲ್ಲಿ ಹಳೆಯ ಕದನವಿರಾಮ ರೇಖೆಗೇ ಪಾಕಿಸ್ತಾನಿ ಮೊಂಡಾಟ

ನವದೆಹಲಿ, ಆಗಸ್ಟ್‌ 26– ಸಿಮ್ಲಾ ಒಪ್ಪಂದದ ಬಳಿಕದ ಬೆಳವಣಿಗೆಗಳನ್ನು ಕುರಿತ ಎರಡನೇ ಸುತ್ತಿನ ಮಾತುಕತೆಗಳನ್ನು ‘ತೃಪ್ತಿಕರವೆಂದು’ ಪಾಕಿಸ್ತಾನಿ ನಿಯೋಗದ ವಕ್ತಾರರು ಕರೆದಿದ್ದಾರಾದರೂ, ಭಾರತದ ನಿಯೋಗದ ನಿಕಟವರ್ತಿ ಮೂಲಗಳ ಪ್ರಕಾರ ಸಾಧಿಸಿರುವ ಪ್ರಗತಿ ಅಲ್ಪ.

ಮಾತುಕತೆಯ ಪ್ರಗತಿಯನ್ನು ಅಧ್ಯಕ್ಷ ಭುಟ್ಟೋರವರಿಗೆ ವಿವರಿಸಿ ಅವರಿಂದ ಸೂಚನೆಗಳನ್ನು ಪಡೆಯಲು ಪಾಕಿಸ್ತಾನಿ ನಿಯೋಗಕ್ಕೆ ಅನುಕೂಲವಾಗಲೆಂದು ಮಾತುಕತೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

ADVERTISEMENT

ಕಾಶ್ಮೀರದಲ್ಲಿ ಹೊಸ ಕದನ ವಿರಾಮ ರೇಖೆಯ ಅಲ್ಪ ಸ್ವಲ್ಪ ಬದಲಾವಣೆಗಳೊಡನೆ ಹಳೆಯ ಕದನ ವಿರಾಮ ರೇಖೆಯೇ ಆಗಬೇಕೆಂದು ಪಾಕಿಸ್ತಾನಿ ತಂಡದ ನಾಯಕ ಹಾಗೂ ಭುಟ್ಟೋರವರ ವಿಶೇಷ ಪ್ರತಿನಿಧಿ ಅಜೀಜ್‌ ಅಹ್ಮದ್‌ರವರು ಪಟ್ಟು ಹಿಡಿದಿದ್ದಾರೆ.

ಬಾಂಗ್ಲಾದೇಶಕ್ಕೆ ವಿಶ್ವಸಂಸ್ಥೆ ಸದಸ್ಯತ್ವ ನೀಡದಂತೆ ಚೀನದ ‘ವೀಟೊ’

ವಿಶ್ವಸಂಸ್ಥೆ, ಆಗಸ್ಟ್‌ 26– ಬಾಂಗ್ಲಾದೇಶವು ವಿಶ್ವಸಂಸ್ಥೆ ಸೇರುವುದರ ವಿರುದ್ಧ ಚೀನವು ನಿನ್ನೆ ಭದ್ರತಾ ಸಮಿತಿ ಸಭೆಯಲ್ಲಿ ‘ವೀಟೊ’ ಚಲಾಯಿಸಿತು.

ಚೀನವು ವಿಶ್ವಸಂಸ್ಥೆ ಪ್ರವೇಶಿಸಿದಾಗಿನಿಂದ ವೀಟೊ ಚಲಾಯಿಸಿರುವುದು ಇದೇ ಮೊದಲ ಬಾರಿ.

ಬಾಂಗ್ಲಾ ದೇಶಕ್ಕೆ ಶೀಘ್ರವೇ ವಿಶ್ವಸಂಸ್ಥೆ ಸದಸ್ಯತ್ವ ನೀಡಬೇಕೆಂಬ ಬಗ್ಗೆ ಭದ್ರತಾ ಸಮಿತಿಯಲ್ಲಿ ಭಾರತ, ರಷ್ಯ, ಯುಗೋಸ್ಲಾವಿಯಾ ಮತ್ತು ಬ್ರಿಟನ್‌ಗಳು ಸಂಯುಕ್ತವಾಗಿ ಮಂಡಿಸಿದ ನಿರ್ಣಯಕ್ಕೆ ಭಾರಿ ಬಹುಮತವಿದ್ದಾಗ್ಯೂ ಚೀನವು ಈ ಕ್ರಮ ಕೈಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.