ADVERTISEMENT

50 ವರ್ಷಗಳ ಹಿಂದೆ: ಸೋಮವಾರ 04-10-1971

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 15:06 IST
Last Updated 3 ಅಕ್ಟೋಬರ್ 2021, 15:06 IST
   

ಹರಿಜನರಿಗೆ ಸಮಾಜದಲ್ಲಿ ಗೌರವ ಸ್ಥಾನ: ಜನಸಂಘ ಚುನಾವಣೆ ಪ್ರಣಾಳಿಕೆ ಭರವಸೆ

ಬೆಂಗಳೂರು, ಅ. 3– ‘ಹರಿಜನ’ ಎಂಬ ಪ್ರತ್ಯೇಕ ವರ್ಗವೇ ಉಳಿಯದೆ ಅವರಿಗೆ ಸಮಾಜದಲ್ಲಿ ಗೌರವದ ಸ್ಥಾನಲಭಿಸಿ ಇಡೀ ಸಮಾಜವು ಒಂದಾಗಿ ಬಾಳುವಂತೆ ಪ್ರಯತ್ನ ಮಾಡಲಾಗುವುದೆಂದು ಇಂದು ಇಲ್ಲಿ ಪ್ರಕಟವಾದ ಭಾರತೀಯ ಜನಸಂಘದ ಕರ್ನಾಟಕ ಶಾಖೆಯ ಚುನಾವಣಾ ಪ್ರಣಾಳಿಕೆ ಭರವಸೆ ನೀಡಿತು.

1972ರ ಚುನಾವಣಾ ಪ್ರಣಾಳಿಕೆಯನ್ನು ಇಂದು ಇಲ್ಲಿ ಸಮಾವೇಶಗೊಂಡಿದ್ದ ಸಂಘದ ಪ್ರತಿನಿಧಿ ಸಭೆಯಲ್ಲಿ ಮಂಡಿಸಲಾಯಿತು.

ADVERTISEMENT

ಅದರ ಇತರ ಪ್ರಮುಖ ಅಂಶಗಳು: ಅಭಾವ ಪೀಡಿತ ಪ್ರತಿ ತಾಲ್ಲೂಕಿಗೆ ಒಂದು ಸಾವಿರ ನೀರಾವರಿ ಬಾವಿ ನಿರ್ಮಾಣ ಬೆಳೆವಿಮೆ ಯೋಜನೆ, ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ, ಮತ್ಸೋದ್ಯಮಕ್ಕೆ ಪ್ರೋತ್ಸಾಹ, ಸಂಚಾರಿ ಆಸ್ಪತ್ರೆಗಳ ಸ್ಥಾಪನೆ. ಆಕ್ಟ್ರಾಯ್ ರದ್ದು. ಆಹಾರ ಧಾನ್ಯಗಳ ಮೇಲಿನ ಮಾರಾಟ ತೆರಿಗೆ ರದ್ದು. ಮಂತ್ರಿಗಳು ಅಧಿಕಾರಿಗಳು ಮುಂತಾದವರ ವಿರುದ್ಧ ಬರುವವರ ದೂರುಗಳನ್ನು ವಿಚಾರಿಸಲು ಆಡಳಿತಾತ್ಮಕ ಸಮಿತಿ ರಚನೆ.

ನಿರಾಶ್ರಿತರ ಮೇಲೆ ವೆಚ್ಚದ ಕಾರಣ ಭಾರತಕ್ಕೆ ಹೆಚ್ಚು ಪ್ರಮಾಣದ ನೆರವು ಸಂಭವ

ಲಂಡನ್, ಅ. 3– ವಿಶ್ವ ಬ್ಯಾಂಕ್ ಆಶ್ರಯದಲ್ಲಿನ ಹದಿನೈದು ರಾಷ್ಟ್ರಗಳ ಪಾಶ್ಚಿಮಾತ್ಯ ನೆರವು ಕೂಟವು ಪ್ರಸಕ್ತ ವರ್ಷಕ್ಕೆ ಆಶ್ವಾಸಿತ ನೆರವಿಗಿಂತಲೂ ಹೆಚ್ಚು ನೆರವನ್ನು ನೀಡುವ ನಿರೀಕ್ಷೆಯಿದೆ. ನಿರಾಶ್ರಿತರ ಪರಿಹಾರಕ್ಕೆ ಭಾರತ ತನ್ನ ಸಂಪನ್ಮೂಲಗಳನ್ನು ಹರಿಸಿದ್ದೂ ಅದಕ್ಕೆ ಪರಿಹಾರವಾಗಿ ಈ ಹೆಚ್ಚಿನ ನೆರವು ದೊರಕುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.