ADVERTISEMENT

50 ವರ್ಷಗಳ ಹಿಂದೆ | ಶುಕ್ರವಾರ 2.3.1973

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 22:45 IST
Last Updated 1 ಮಾರ್ಚ್ 2023, 22:45 IST
   

ಒರಿಸ್ಸಾ ಸರ್ಕಾರ ಪತನ: ಬಿಜು ಪರ ಕಾಂಗ್ರೆಸ್ ಶಾಸಕರ ಪಕ್ಷಾಂತರ

ಭುವನೇಶ್ವರ್, ಮಾರ್ಚ್ 1– ಕೆಲವು ಕಾಂಗ್ರೆಸ್ ಶಾಸಕರ ಪಕ್ಷಾಂತರದ ಫಲವಾಗಿ ಒರಿಸ್ಸಾ ಮುಖ್ಯಮಂತ್ರಿ ಶ್ರೀಮತಿ ನಂದಿನಿ ಸತ್ಪಥಿ ಅವರು ಇಂದು ತಮ್ಮ ಸಚಿವ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿ, ವಿಧಾನಸಭೆಯನ್ನು ವಿಸರ್ಜಿಸುವಂತೆ ರಾಜ್ಯಪಾಲ ಬಿ.ಡಿ. ಜತ್ತಿ ಅವರಿಗೆ ಸಲಹೆ ಇತ್ತರು.

ಬಿಜು ಪಟ್ನಾಯಕ್ ನೇತೃತ್ವದ ಪ್ರಗತಿ ಶಾಸಕರ ಪಕ್ಷಕ್ಕೆ ಆಡಳಿತ ಪಕ್ಷದ ಕೆಲವು ಶಾಸಕರು ಪಕ್ಷಾಂತರ ಹೊಂದಿರುವುದಾಗಿ ಹೇಳಲಾಗಿದೆ. ಸಚಿವ ಸಂಪುಟದ ತುರ್ತು ಸಭೆ ಬಳಿಕ ಮುಖ್ಯಮಂತ್ರಿ ನಂದಿನಿ ಅವರು ಬೆಳಿಗ್ಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ಶ್ರೀ
ಬಿ.ಡಿ. ಜತ್ತಿ ಅವರಿಗೆ 15 ಮಂದಿ ಸದಸ್ಯರ ತಮ್ಮ ಸಂಪುಟದ ರಾಜೀನಾಮೆಯನ್ನು ಸಲ್ಲಿಸಿದರು.

ADVERTISEMENT

****

ಗಾಂಧೀಜಿ ಟೀಕಾಕಾರರಿಗೆ ಅಧಿಕಾರದಲ್ಲಿ, ಕಾಂಗ್ರೆಸ್‌ನಲ್ಲಿ ಇರಲು ಹಕ್ಕಿಲ್ಲ: ಎನ್. ರಾಚಯ್ಯ

ಬೆಂಗಳೂರು, ಮಾರ್ಚ್ 1– ‘ಗಾಂಧೀಜಿಯನ್ನು ಟೀಕೆ ಮಾಡುವವರು ಕಾಂಗ್ರೆಸ್ಸಿನಲ್ಲಿಯೇ ಆಗಲಿ, ಅಧಿಕಾರದಲ್ಲಿಯೇ ಆಗಲಿ ಇರಲು ಹಕ್ಕಿಲ್ಲ’ ಎಂದು ಕಾಂಗ್ರೆಸ್ ಸದಸ್ಯ ಶ್ರೀ ಎನ್. ರಾಚಯ್ಯ ಅವರು ಇಂದು ವಿಧಾನಪರಿಷತ್ತಿನಲ್ಲಿ ಹೇಳಿದರು.

‘ನೆಹರೂ ಮತ್ತು ಗಾಂಧೀಜಿ ಅವರನ್ನು ಟೀಕೆ ಮಾಡುವವರು ಇದ್ದಾರೆ. ಅವರೇನೂ ಮಾಡಿಲ್ಲ ಎಂದು ಹೇಳುತ್ತಾರೆ. ನೆಹರೂ ಅವರಂಥ ಸಮಾಜವಾದಿ ಇನ್ನು ಯಾರೂ ಇಲ್ಲ. ಗಾಂಧೀಜಿ ಅವರಂಥ ಕ್ರಾಂತಿಕಾರಿ ಬೇರೊಬ್ಬರಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.