ನವದೆಹಲಿ, ಜೂನ್ 2– ಜಿನೀವಾ ಸಮ್ಮೇಳನದ ಸದಸ್ಯತ್ವ ವ್ಯಾಪ್ತಿ ಹಿಗ್ಗಿಸಿ ಅಲಿಪ್ತ ರಾಷ್ಟ್ರಗಳಿಗೂ ಪ್ರಾತಿನಿಧ್ಯ ನೀಡಿದಲ್ಲಿ ಪಶ್ಚಿಮ ಏಷ್ಯಾ ಸಮಸ್ಯೆಗಳ ನ್ಯಾಯಸಮ್ಮತ ಇತ್ಯರ್ಥಕ್ಕೆ ಭಾರತ ರಚನಾತ್ಮಕ ಕಾಣಿಕೆ ನೀಡುವುದೆಂದು ವಿದೇಶಾಂಗ ವ್ಯವಹಾರಗಳ ಸಚಿವ ವೈ.ಬಿ. ಚವಾಣ್ ಅವರು ಇಂದು ಇಲ್ಲಿ ತಿಳಿಸಿದರು.
ಈಜಿಪ್ಟ್, ಸಿರಿಯಾದಲ್ಲಿ ಪ್ರವಾಸ ಮುಗಿಸಿ ಇಂದು ವಾಪಸಾದ ಅವರು, ಸುದ್ದಿಗಾರರ ಜತೆ ಮಾತನಾಡುತ್ತ ಈ ಎರಡೂ ರಾಷ್ಟ್ರಗಳ ನಾಯಕರ ಜೊತೆ ಮುಕ್ತ ಮನಸ್ಸಿನ ಚರ್ಚೆ ನಡೆಸಿದ್ದಾಗಿ ಹೇಳಿದರು.
ಪಶ್ಚಿಮ ಏಷ್ಯಾ ಸಮಸ್ಯೆ ತುಂಬ ಜಟಿಲವಾದದ್ದೆಂದು ನುಡಿದ ಅವರು, ಜಿನೀವಾ ಸಮ್ಮೇಳನದ ಸದಸ್ಯತ್ವ ವ್ಯಾಪ್ತಿ ಹಿಗ್ಗಬೇಕೆಂದು ಈಜಿಪ್ಟ್, ಸಿರಿಯಾ ಅಭಿಪ್ರಾಯಪಟ್ಟಿವೆ ಎಂದರು.
ಪ್ರಾಚ್ಯವಸ್ತು ಕಳವು ತಡೆಗೆ ಕ್ರಮ
ಬೆಂಗಳೂರು, ಜೂನ್ 2– ಹೊಸದಾಗಿ ರೂಪುಗೊಂಡ ಪ್ರಾಚ್ಯವಸ್ತು ಸಂಶೋಧನಾ ವಲಯವು ಕರ್ನಾಟಕದಲ್ಲಿ ಪ್ರಾಚ್ಯವಸ್ತುಗಳು ಕಳವಾಗುವುದನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು
ಕೈಗೊಳ್ಳುವುದಕ್ಕೆ ಅಗ್ರ ಪ್ರಾಶಸ್ತ್ಯ ನೀಡಿದೆ.
ಬೇರ್ಪಟ್ಟಿರುವ ಶಿಲ್ಪ ಕಲಾಕೃತಿಗಳನ್ನು ಇರಿಸುವುದಕ್ಕಾಗಿ ಗ್ಯಾಲರಿಗಳನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದ್ದು, ಈಗಾಗಲೇ ಐಹೊಳೆ, ಬಾದಾಮಿ ಮತ್ತು ಲಕ್ಕುಂಡಿಯಲ್ಲಿ ಇಂಥ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ ಎಂದು ವಲಯದ ಡೈರೆಕ್ಟರ್ ಎಸ್.ಆರ್.ರಾವ್ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.
ಐಹೊಳೆ, ಬಾದಾಮಿ ಮತ್ತು ಲಕ್ಕುಂಡಿಯಲ್ಲಿ ಕೈಗೊಂಡಿರುವ ಕ್ರಮಗಳಿಂದಾಗಿ 500ಕ್ಕೂ ಹೆಚ್ಚು ಶಿಲ್ಪ ಕಲಾಕೃತಿಗಳನ್ನು ಸಂರಕ್ಷಿಸಲು ಸಾಧ್ಯವಾಗಿದ್ದು, ಅಲ್ಲಿ ನಿರ್ಮಿಸಲಾದ ಗ್ಯಾಲರಿಗಳನ್ನು ಇಷ್ಟರಲ್ಲೇ ಸಾರ್ವಜನಿಕರ ಪ್ರವೇಶಕ್ಕೆ ತೆರೆಯಲಾಗುವುದು. ಇದೇ ರೀತಿಯ ಗ್ಯಾಲರಿಗಳನ್ನು ಪಟ್ಟದಕಲ್ಲು ಮತ್ತು ಬೆಳ್ಳಿಗಾಮಿಯಲ್ಲೂ ನಿರ್ಮಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.