ಪಟನಾ, ಜೂನ್ 4– ಘರ್ವಾನ ಗ್ರಾಮದಲ್ಲಿ ನಕ್ಸಲೀಯರು ಮತ್ತು ಪೊಲೀಸರ ನಡುವೆ ನಡೆದ ಭೀಕರ ಹೋರಾಟದಲ್ಲಿ ಒಟ್ಟು 17 ನಕ್ಸಲೀಯರು ಸತ್ತಿದ್ದಾರೆ. ಹೋರಾಟದಲ್ಲಿ ಇಬ್ಬರು ನಕ್ಸಲೀಯರನ್ನು ಕೈಸೆರೆ ಹಿಡಿಯಲಾಗಿದೆ ಎಂದು ಬಿಹಾರದ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ ಅವರು ಇಂದು ಇಲ್ಲಿ ತಿಳಿಸಿದ್ದಾರೆ.
ಪಟನಾ ಜಿಲ್ಲೆಯ ಮಸ್ಸೌರಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಟ್ಟ ಘರ್ವಾನ ಗ್ರಾಮದಲ್ಲಿ ಮಧ್ಯರಾತ್ರಿವರೆಗೂ ಹೋರಾಟ ನಡೆಯಿತು ಎಂದು ಅವರು ಹೇಳಿದರು.
ಈಗ ಆ ಗ್ರಾಮದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ ಎಂದೂ ಮಿಶ್ರಾ ನುಡಿದರು.
ಹೋರಾಟದಲ್ಲಿ ಭಾರಿ ಸಾವು– ನೋವು ಉಂಟಾಗಿದ್ದರೂ ಅದಕ್ಕೆ ಲೆಕ್ಕಿಸದೆ ನಕ್ಸಲೀಯರು ಸಮೀಪದ ಗ್ರಾಮದಲ್ಲಿ ಮತ್ತೆ ಗುಂಪುಗೂಡುತ್ತಿದ್ದಾರೆಂದೂ ಅವರನ್ನು ಬಂಧಿಸಲು ಪೊಲೀಸರು
ಪ್ರಯತ್ನಿಸುತ್ತಿದ್ದಾರೆಂದೂ ಪಟನಾ ಕಮಿಷನರ್ ಎಫ್. ಅಹ್ಮದ್ ಅವರು ಹೇಳಿದರು.
ಕಾಫಿ ತೋಟಗಳಲ್ಲಿ ಕೀಟ ಹಾವಳಿ ತಡೆಯಲು ಕ್ರಮ
ಬೆಂಗಳೂರು, ಜೂನ್ 4– ವೈನಾಡಿನ ಕಾಫಿ ಎಸ್ಟೇಟುಗಳಲ್ಲಿ ‘ಮಿಲಿ ಬಗ್’ ಕೀಟಗಳ ಹಾವಳಿ ಹೆಚ್ಚಾಗಿರುವುದರಿಂದ ಅದನ್ನು ತಡೆಗಟ್ಟಲು ಸೂಕ್ತ ಕೀಟನಾಶಕಗಳನ್ನು ಬಳಸಲು ಕಾಫಿ ಮಂಡಳಿಯು ಪ್ಲಾಂಟರುಗಳಿಗೆ ಸಲಹೆ ಮಾಡಿದೆ. ಕಾಫಿ ಮಂಡಳಿ ಸಂಶೋಧನಾ ಸಂಸ್ಥೆಯ ಉನ್ನತ ಮಟ್ಟದ ಸಂಶೋಧನಾ ತಂಡವೊಂದು ಇತ್ತೀಚೆಗೆ ಎಸ್ಟೇಟುಗಳಿಗೆ ಭೇಟಿ ನೀಡಿ ಈ ಬಗ್ಗೆ ಪರಿಶೀಲನೆ ನಡೆಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.