
75 ವರ್ಷಗಳ ಹಿಂದೆ ಈ ದಿನ
ಉಕ್ಕಿನಾಳು ವಲ್ಲಭಭಾಯ್, ನಮ್ಮ ‘ಸರದಾರ್’ ಇನ್ನೆಲ್ಲಿ...
ಮುಂಬಯಿ, ಡಿ. 15– ಉಪಪ್ರಧಾನಿ ಸರದಾರ ವಲ್ಲಭಭಾಯಿ ಪಟೇಲರು ಈ ದಿನ ಬೆಳಿಗ್ಗೆ 9 ಗಂಟೆ 37 ನಿಮಿಷಕ್ಕೆ ದೈವಾಧೀನರಾದರು. ಕೊನೆ ಉಸಿರೆಳೆವಾಗ ಸರದಾರರ ಹಾಸಿಗೆಯ ಬಳಿ ಪುತ್ರ ದಯಾಭಾಯ್, ಪುತ್ರಿ ಮಣಿಬೆನ್, ಸೊಸೆ, ಮೊಮ್ಮಕ್ಕಳು, ಮುಂಬಯಿ ಮುಖ್ಯಮಂತ್ರಿ ಖೇರ್, ಮಂತ್ರಿ ಮುರಾರ್ಜಿ, ಮೇಯರ್ ಪಾಟೀಲ್, ಇವರಿದ್ದರು.
ಅಂತಿಮ ಯಾತ್ರೆಯ ದೃಶ್ಯ: ಅಧ್ಯಕ್ಷ ರಾಜೇಂದ್ರ ಪ್ರಸಾದ್, ಪ್ರಧಾನಿ ಪಂಡಿತ ನೆಹರೂ ಮತ್ತಿತರ ರಾಷ್ಟ್ರನಾಯಕರು ಪಾರ್ಥಿವ ಶರೀರಕ್ಕೆ ಅಂತಿಮಪ್ರಣಾಮ ಅರ್ಪಿಸಿದ ನಂತರ, ಬಿರ್ಲಾ ಭವನದಿಂದ ಚರಮಯಾತ್ರೆ ಆರಂಭವಾಯಿತು.
ಮಹಾತ್ಮ ಗಾಂಧಿಯವರು ಮುಂಚೆ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದ ಬಿರ್ಲಾ ಭವನದ ಹಚ್ಚನೆಯ ಹೊರಾಂಗಣದಲ್ಲಿ ಸಂಜೆಯ ಹೊಂಬಣ್ಣದ ಬಿಸಿಲು ಚೆಲ್ಲಿತ್ತು. ಸುಮಾರು ಐದು ಲಕ್ಷದ ದಟ್ಟ ಜನಸಂದಣಿ ಕಡೆಯ ದರ್ಶನಕ್ಕಾಗಿ ಹಾತೊರೆಯುತ್ತಿತ್ತು.
ಎಲ್ಲ ಕಡೆ ನೀರವತೆ. ಜನಸ್ತೋಮ ಒಮ್ಮೆಲೇ ತಲೆಬಾಗಿ ಸರದಾರರಿಗೆ ಅಂತಿಮ ಗೌರವ ಕಾಣಿಕೆಯಿತ್ತಿತು. ಶೋಕ ತಡೆಯಲಾರದೆ ಅನೇಕರು ಕಣ್ಣೀರು ಸುರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.