
75 ವರ್ಷಗಳ ಹಿಂದೆ ಈ ದಿನ
ಉಪ್ಪಿನ ಹತೋಟಿ ರದ್ದು
ನವದೆಹಲಿ, ಡಿ. 18– ಕಲ್ಕತ್ತಾ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಸಾಲಿನಲ್ಲಿ ಜಾರಿ ಮಾಡಲಾಗಿದ್ದ 1950ನೇ ಉಪ್ಪಿನ ಹತೋಟಿ ಆಜ್ಞೆಯನ್ನು ಭಾರತ ಸರ್ಕಾರ ಪ್ರಕಟಣೆ ಹೊರಡಿಸಿ ರದ್ದು ಮಾಡಿದೆ. ಆ ಕಾಲದಲ್ಲಿ ಆ ಭಾಗದಲ್ಲಿ ಉಪ್ಪಿಗೆ ಅಭಾವವಿದ್ದ ಕಾರಣ ಸರ್ಕಾರ ಉಪ್ಪಿನ ಬೆಲೆ, ಮಾರಾಟ ಇತ್ಯಾದಿ ಮೇಲೆ ಹತೋಟಿ ವಿಧಿಸಿತ್ತು. ಈಗ ಅಲ್ಲಿ ಉಪ್ಪಿಗೆ ಸುಭಿಕ್ಷವಾಗಿದೆ.
ಚುನಾವಣಾ ಸಂಬಂಧ ಮಸೂದೆ ಮಂಡನೆ
ನವದೆಹಲಿ, ಡಿ. 18– ಚುನಾವಣೆಗಳ ಕಾರ್ಯ ನಿರ್ವಾಹ ಮತ್ತು ತತ್ಸಂಬಂಧ ಕಲಾಪಗಳನ್ನು ನಿರ್ದೇಶಿಸುವ ಮಸೂದೆಯನ್ನು ನ್ಯಾಯಾಂಗ ಸಚಿವ ಡಾ. ಬಿ.ಆರ್. ಅಂಬೇಡ್ಕರ್ ಇಂದು ಪಾರ್ಲಿಮೆಂಟ್‌ನಲ್ಲಿ ಮಂಡಿಸಿದರು.
163 ಪ್ರಕರಣಗಳಿರುವ ಈ ಮಸೂದೆಯ ಹೆಸರು, ‘ಜನತಾ ಪ್ರಾತಿನಿಧ್ಯ (ಸಂಖ್ಯೆ 2) ಮಸೂದೆ 1950’ ಎಂದು.
ಪಾರ್ಲಿಮೆಂಟ್ ಮತ್ತು ಸಂಸ್ಥಾನದ ಶಾಸನಸಭೆಗಳ ಸದಸ್ಯತ್ವದ, ಅರ್ಹತೆ, ಅನರ್ಹತೆ, ಚುನಾವಣೆಗಳ ನಿರ್ವಾಹ, ಚುನಾವಣೆಗೆ ಸಂಬಂಧಿಸಿದ ಕೃತ್ರಿಮ ಹಾಗೂ ಅಕ್ರಮ ನಡವಳಿಕೆ ಇತ್ಯಾದಿ ಅಪರಾಧಗಳು, ಚುನಾವಣೆ ತಕರಾರುಗಳನ್ನು ವಿಚಾರಿಸುವ ಪಂಚಾಯಿತಿಗಳು ಈ ಪ್ರಶ್ನೆಗಳನ್ನು ಈ ಮಸೂದೆ ಬಿಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.