
ಕಲ್ಬುರ್ಗಿ, ಜ. 21– ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸದ ಕಾರಣ ವಿಜಾಪುರ ಮತ್ತು ಕಲ್ಬುರ್ಗಿ ಜಿಲ್ಲೆಗಳ ಸುಮಾರು 135 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಾಶದ ಅಂಚನ್ನು ತಲುಪಿದೆ ಎಂದು ವಸತಿ ಸಚಿವ ಖಮರುಲ್ ಇಸ್ಲಾಂ ತಿಳಿಸಿದರು.
ಐವಾನ್–ಇ–ಶಾಹಿ ಅತಿಥಿಗೃಹದಲ್ಲಿ ಭೀಮಾ ನೀರು ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಸರ್ವಪಕ್ಷಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಸಮಸ್ಯೆಯನ್ನು ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚಿಸಿದ ನಂತರ, ಮುಂದಿನ ಹೋರಾಟದ ರೂಪರೇಷೆ ರಚಿಸುವ ಬಗ್ಗೆ ಭೀಮಾ ನೀರು ಹೋರಾಟ ಸಮಿತಿ ಇಂದು ನಿರ್ಣಯಿಸಿತು.
ಪೊಲೀಸರ ಕಣ್ತಪ್ಪಿಸಿ ದೇವದಾಸಿ ಪದ್ಧತಿ ಆಚರಣೆ
ರಾಯಚೂರು, ಜ. 21– ಪೊಲೀಸರ ಸರ್ಪಗಾವಲು ಮತ್ತು ವಿವಿಧ ಸಂಘಟನೆಗಳ ಪ್ರತಿಭಟನೆಯ ನಡುವೆ ಎಲ್ಲರ ಕಣ್ತಪ್ಪಿಸಿ ಎಂಟು ಜನ ಯುವತಿಯರು ಗೋಪ್ಯವಾಗಿ ದೇವದಾಸಿತ್ವ ಸ್ವೀಕರಿಸಿದ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ತೊಂಡಿಹಾಳ ಗ್ರಾಮದ ಹುಲಿಗೆಮ್ಮ ಜಾತ್ರೆಯಲ್ಲಿ ನಡೆಯಿತು.
ದೇವದಾಸಿಯರ ಪೈಕಿ ದಲಿತರೂ ಸೇರಿದಂತೆ ಮುಂದುವರಿದ ವರ್ಗದ ಒಬ್ಬ ಯುವತಿಯೂ ದೇವದಾಸಿಯಾಗಿ ಪರಿವರ್ತನೆಯಾದರು. ಆದರೆ, ಯಾರೊಬ್ಬರ ಹೆಸರು, ಊರು ಮತ್ತಿತರ ಗುರುತು ಸಿಗದಂತೆ ಎಚ್ಚರಿಕೆಯಿಂದ ದೇವಿ ಆಚರಣೆ ಮೂಲಕ ಗುಪ್ತವಾಗಿ ದೇವದಾಸಿಯರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.