
25 ವರ್ಷಗಳ ಹಿಂದೆ; ಬುಧವಾರ, 21–2–2001
ಅನುದಾನ ಕಡಿತ: ‘ಶಿಕ್ಷಕರ ಚಳವಳಿ ಎದುರಿಸಲು ಸರ್ಕಾರ ಸಿದ್ಧ’
ಬೆಂಗಳೂರು, ಫೆ. 20– ಉನ್ನತ ಶಿಕ್ಷಣದ ಅನುದಾನಿತ ಖಾಸಗಿ ಕಾಲೇಜುಗಳ ಅನುದಾನದಲ್ಲಿ ಶೇ 15ರಷ್ಟು ಕಡಿತ ಮಾಡಿ ಸರ್ಕಾರ ಹೊರಡಿಸಿರುವ ಆದೇಶ ಅಂತಿಮವಾಗಿದ್ದು, ಅದನ್ನು ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ. ಪರಮೇಶ್ವರ ಇಂದು ಇಲ್ಲಿ ಹೇಳಿದರು.
ಪ್ರಾಥಮಿಕ ಶಿಕ್ಷಣಕ್ಕೆ ಆದ್ಯತೆ ಕೊಡುವ ದೃಷ್ಟಿಯಿಂದ ಉನ್ನತ ಶಿಕ್ಷಣಕ್ಕೆ ವೆಚ್ಚ ಮಾಡುವ ಹಣದಲ್ಲಿ ಕಡಿತ ಮಾಡುವ ಮೊದಲ ಹೆಜ್ಜೆಯಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆಯೆಂದು ಮುಖ್ಯಮಂತ್ರಿ ಅವರು ಈಗಾಗಲೇ ಹೇಳಿದ್ದಾರೆ ಎಂದು ತಮ್ಮನ್ನು ಭೇಟಿ ಮಾಡಿದ ವರದಿಗಾರರಿಗೆ ತಿಳಿಸಿದರು.
ಇಂದ್ರಜಿತ್ ಗುಪ್ತಾ ನಿಧನ
ಕೋಲ್ಕತ್ತ, ಫೆ. 20 (ಪಿಟಿಐ, ಯುಎನ್‌ಐ)– ಹಿರಿಯ ಕಮ್ಯೂನಿಸ್ಟ್ ನಾಯಕ, ಸಂಸತ್ತಿನ ಪಿತಾಮಹ ಎಂದೇ ಹೆಸರಾಗಿದ್ದ ಇಂದ್ರಜಿತ್ ಗುಪ್ತಾ (82) ಅವರು ಇಂದು ಬೆಳಗಿನಜಾವ ತಮ್ಮ ನಿವಾಸದಲ್ಲಿ ನಿಧನರಾದರು.
ಅವರು ಪತ್ನಿ ಸುರೈಯಾ, ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಕಳೆದ ಒಂದು ವರ್ಷದಿಂದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕಳೆದ ಜ. 17ರಂದು ಅವರನ್ನು ಇಲ್ಲಿಗೆ ಕರೆತರಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.