ADVERTISEMENT

25 ವರ್ಷಗಳ ಹಿಂದೆ | ಮಂಗಳವಾರ 8/8/1995

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 19:30 IST
Last Updated 7 ಆಗಸ್ಟ್ 2020, 19:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಮುಖ್ಯಮಂತ್ರಿ ಮಗನಿಂದ ಅಧಿಕಾರ ಚಲಾವಣೆ: ಯಡಿಯೂರಪ್ಪ ಆರೋಪ

ಬೆಂಗಳೂರು, ಆ. 7– ‘ದೇವೇಗೌಡರ ಪುತ್ರ ಶಾಸಕ ರೇವಣ್ಣ ಅವರು ‘ಮುಖ್ಯಮಂತ್ರಿ ಕುರ್ಚಿ’ಯಲ್ಲಿ ಕುಳಿತು ಅಧಿಕಾರ ಚಲಾಯಿಸುತ್ತಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಇಂದು ಮಾಡಿದ ಗಂಭೀರ ಆರೋಪ ಸದನದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತಲ್ಲದೆ, ಅಧಿವೇಶನ ಆರಂಭದ ದಿನವೇ ಹೊಸ ಬಿಕ್ಕಟ್ಟು ಸೃಷ್ಟಿಗೆ ನಾಂದಿಯಾಯಿತು.

ಯಡಿಯೂರಪ್ಪ ಅವರ ಈ ಆರೋಪ ಸದನದ ಕಾರ್ಯ ಕಲಾಪಗಳನ್ನು ಪೂರ್ಣ ನುಂಗಿ ಹಾಕಿತಲ್ಲದೆ, ದೇವೇಗೌಡ ಅವರ ನೇತೃತ್ವದ ಜನತಾ ದಳ ಸರ್ಕಾರದ ವಿರುದ್ಧ ಬಿಜೆಪಿ ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಆರಂಭದಲ್ಲೇ ವಿವಾದಕ್ಕೆ ಒಳಗಾಯಿತು.

ADVERTISEMENT

ಹೊಸ ಸಕ್ಕರೆ ಕಾರ್ಖಾನೆ: ಕೇಂದ್ರಕ್ಕೆ ಒತ್ತಡ

ಬೆಂಗಳೂರು, ಆ.7– ರಾಜ್ಯದಲ್ಲಿ ಬೆಳೆಯುತ್ತಿರುವ ಕಬ್ಬಿನ ಪ್ರಮಾಣಕ್ಕೆ ಅನುಗುಣವಾಗಿ ಕಡೇಪಕ್ಷ ಇನ್ನೂ 25 ಸಕ್ಕರೆ ಕಾರ್ಖಾನೆಗಳಾದರೂ ಬೇಕು. ಆದ್ದರಿಂದ ಹೊಸದಾಗಿ ಸ್ಥಾಪಿಸಲು ಉದ್ದೇಶಿಸಿರುವ ಸಕ್ಕರೆ ಕಾರ್ಖಾನೆಗಳಿಗೆ ಕೂಡಲೇ ಅನುಮತಿ ನೀಡಬೇಕೆಂದು ನಿರ್ಣಯದ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ವಿಧಾನ ಪರಿಷತ್‌ನಲ್ಲಿ ಇಂದು ನಿರ್ಧರಿಸಲಾಯಿತು.

‘ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆಗಳು ಮತ್ತು ಸಕ್ಕರೆ ಕಾರ್ಖಾನೆಗಳ ಹೆಚ್ಚಿನ ಅಗತ್ಯವನ್ನು ವಿವರಿಸಿ ಕೇಂದ್ರದ ಮೇಲೆ ಒತ್ತಡ ಹೇರುವ ಮುಂದಿನ ಹೆಜ್ಜೆಯಾಗಿ ಎರಡು–ಮೂರು ದಿನಗಳಲ್ಲಿ ಸದನದಲ್ಲಿ ಸರ್ವಾನುಮತದ ನಿರ್ಣಯವೊಂದನ್ನು ಅಂಗೀಕರಿಸಿ ಕಳುಹಿಸಿಕೊಡೋಣ’ ಎಂದು ಸಕ್ಕರೆ, ಜವಳಿ, ಪರಿಸರ ಖಾತೆ ಸಚಿವ ಪಿ.ಸಿ. ಸಿದ್ದನ ಗೌಡರ್‌ ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.